ಹಾಸ್ಟೆಲ್ ಸ್ವಂತ ಕಟ್ಟಡಗಳಿಗೆ ಶೀಘ್ರ ಸ್ಥಳಾಂತರಿಸಲು ಜಿ.ಪಂ. ಸಿಇಓ ಡಾ.ಕೆ. ಆನಂದ್ ಸೂಚನೆ
ಮಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿರುವ ವಿದ್ಯಾರ್ಥಿ ಹಾಸ್ಟೆಲ್‍ಗಳನ್ನು ಬಾಡಿಗೆ ಕಟ್ಟಡಗಳಿಂದ ಸ್ವಂತ ಕಟ್ಟಡಗಳಿಗೆ ಶೀಘ್ರವಾಗಿ ಸ್ಥಳಾಂತರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಆನಂದ್ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಯ ಅಧೀನದಲ್ಲಿ ಒಟ್ಟು 12 ಹಾಸ್ಟೆಲ್‍ಗಳಿದ್ದು, ಈ ಪೈಕಿ 8 ಹಾಸ್ಟೆಲ್‍ಗಳು ಬಾಡಿಗೆ ಕಟ್ಟಡದಲ್ಲಿವೆ. ಇವುಗಳಿಗೆ ಅಗತ್ಯ ಜಮೀನು ಗುರುತಿಸಿ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಯ ಅಧೀನದಲ್ಲಿ ಜಿಲ್ಲೆಯಲ್ಲಿ 8 ಮೌಲಾನಾ ಆಜಾದ್ ಶಾಲೆಗಳಲ್ಲಿ ಒಟ್ಟು 2400 ಸೀಟುಗಳಿದ್ದರೂ, ಕೇವಲ 840 ಸೀಟುಗಳು ಮಾತ್ರ ಭರ್ತಿಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರವೇಶಾತಿ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ, ಪ್ರವೇಶ ಹೆಚ್ಚಿಸುವಂತೆ ಸೂಚಿಸಿದರು. ಈ ಶಾಲೆಗಳ ಫಲಿತಾಂಶ ಸುಧಾರಿಸಲು ಒತ್ತು ನೀಡಲು ಅವರು ತಿಳಿಸಿದರು. ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರುಗೊಂಡಿರುವ ನಿಗದಿತ ಸೀಟುಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಂಪೂರ್ಣ ಭರ್ತಿ ಮಾಡಲು ಅವರು ಸೂಚಿಸಿದರು.
ವಿದ್ಯಾರ್ಥಿವೇತನ ಸೇರಿದಂತೆ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಮಂಜೂರು ಮಾಡಬೇಕು. ಇದರಲ್ಲಿ ವಿಳಂಭಿಸುವಂತಿಲ್ಲ. ಸ್ವಉದ್ಯೋಗ ಯೋಜನೆಗಳನ್ನು ಫಲಾನುಭವಿಗಳಿಗೆ ತ್ವರಿತವಾಗಿ ಮಂಜೂರು ಮಾಡಬೇಕು. ಅರಿವು ಸಾಲ ಯೋಜನೆಯಲ್ಲಿ ನೀಟ್ ಮತ್ತು ಸಿಇಟಿ ವಿದ್ಯಾರ್ಥಿಗಳಿಗೆ ಸಾಲದ ಮೊತ್ತವನ್ನು ಸಕಾಲಕ್ಕೆ ನೀಡಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಅರಿವು ಸಾಲ ಯೋಜನೆಯಡಿ 404 ಅರ್ಜಿಗಳು, ಅರಿವು ನವೀಕರಣ 624, ವಿದೇಶದಲ್ಲಿ ಅಧ್ಯಯನ ಸಾಲ ಯೋಜನೆಯಡಿ 68 ಅರ್ಜಿ, ವಾಹನ ಖರೀದಿಸಲು ಸಾರಥಿ ಸಾಲ ಯೋಜನೆಯಡಿ 2025 ಅರ್ಜಿಗಳು ಜಿಲ್ಲೆಯಲ್ಲಿ ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮುಖ್ಯಮಂತ್ರಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 150 ಲಕ್ಷ ರೂ. ಹಾಗೂ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಲ್ಲಿ ಜಿಲ್ಲೆಗೆ ರೂ. 360 ಲಕ್ಷ ಬಿಡುಗಡೆಯಾಗಿದೆ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದರು.
ಮಸೀದಿ, ಮದರಸ, ದರ್ಗಾ, ಖಬರಸ್ತಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1782 ವಕ್ಫ್ ಆಸ್ತಿಗಳಿವೆ. ಈ ಸಂಸ್ಥೆಗಳು ತಮ್ಮ ಆದಾಯದ ಶೇಕಡಾ 7ರಷ್ಟು ಮೊತ್ತವನ್ನು ವಕ್ಫ್ ನಿಧಿಗೆ ಪಾವತಿಸಬೇಕಾಗಿದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೆ 36.08 ಲಕ್ಷ ರೂ. ಮೊತ್ತ ಜಿಲ್ಲೆಯಲ್ಲಿ ಸಂಗ್ರಹವಾಗಿದೆ ಎಂದು ವಕ್ಫ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮೀ, ಉಪ ಪೊಲೀಸ್ ಆಯುಕ್ತ ರವಿಶಂಕರ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಸ್ಥಿತರಿದ್ದರು.