ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯಿಲ್ಲ ; ಡಾ| ಜಿ ಪರಮೇಶ್ವರ
ಮಂಗಳೂರು: ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಪರಿಶಿಷ್ಟ ಜಾತಿ-ಪಂಗಡಗಳಿಗೆ ನಿಗದಿಪಡಿಸಿದ ಅನುದಾನ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳು ಹಾಲಿ ಸಮ್ಮಿ ಶ್ರ ಸರಕಾರದ ಕಾಲದಲ್ಲೂ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಭಟ್ಕಳದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುವ ಉದ್ದೇಶದಿಂದ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರೈತರ ಆತ್ಮ ಹತ್ಯೆ ತಡೆಯುವುದು ಮತ್ತು ರೈತ ಕುಟುಂಬಗಳ ರಕ್ಷಣೆ ರಾಜ್ಯ ಸರಕಾರ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾಲಮನ್ನಾ ಮಾಡಲು ಸರಕಾರ ಹೆಚ್ಚು ಗಮನಹರಿಸಿದೆ .
ದೇಶದಲ್ಲಿ ಹಲವು ರಾಜ್ಯಗಳಲ್ಲಿ ರೈತರ ಸಾಮೂಹಿಕ ಆತ್ಮ ಹತ್ಯೆಗಳು ನಡೆಯುತ್ತಿವೆ.ಆದರೆ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಇರುವ ರೈತರ ಸಾಲಮನ್ನಾ ಮಾಡಲು ಆಸಕ್ತಿ ವಹಿಸಿಲ್ಲ. ಸಾಲಮನ್ನಾಕ್ಕೆ ಕೇಂದ್ರ ಸರಕಾರದ ನೆರವು ದೊರೆಯದಿರುವುದರಿಂದ ರಾಜ್ಯ ಸರಕಾರದ ಮೇಲೆ ದೊಡ್ಡ ಮೊತ್ತದ ಆರ್ಥಿಕ ಹೊರೆ ಬಿದ್ದಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸೋಲಿಗೆ ಕಾರಣವನ್ನು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತದೆ. ಈ ಬಗ್ಗೆ ಇತರ ಪಕ್ಷದ ಮುಖಂಡರ ಹೇಳಿಕೆಗಳು ನಮ್ಮ ಅಭಿಪ್ರಾಯಗಳಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಮಂಗಳೂರಿನಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಶಿರೂರು ಶ್ರೀ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಅವರ ಅಂತ್ಯವಿಧಿಗೆ ಮತ್ತು ಮಠದ ಪೂಜಾ ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸಲಾಗುವುದಿಲ್ಲ ಎಂದು ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ. ತಾರತಮ್ಯ ಮಾಡಿಲ್ಲ. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ಜಿಲ್ಲೆ, ತಾಲೂಕುಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುದಾನ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಿ.ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಶಾಸಕರಾದ ಹರೀಶ್ ಕುಮಾರ್, ಮನಪಾ ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಶಾಸಕ ಜೆ.ಆರ್.ಲೋಬೊ ಮೊದಲಾದವರು ಉಪಸ್ಥಿತರಿದ್ದರು.