ಹಿಂದು ಧರ್ಮದ ವಿರುದ್ದ ಅವಹೇಳನ; ಕ್ರಮಕ್ಕೆ ಯುವ ಕಾಂಗ್ರೆಸ್ ಒತ್ತಾಯ
ಮಂಗಳೂರು: ಸಾಮಾಜಿಕ ಜಾಲ ತಾಣದಲ್ಲಿ ಹಿಂದು ಧರ್ಮ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಅವಹೇಳನ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಯುವ ಕಾಂಗ್ರೆಸ್ ನಗರ ಪೋಲಿಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತ್ರತ್ವದ ತಂಡ ಆಯುಕ್ತರನ್ನು ಭೇಟಿ ಮಾಡಿ ಮಾಡಿದ ಅವರು ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಿಯ ಬಗ್ಗೆ ನಿಂದಿಸಿ ಜಬ್ಬಾರ್ ಬಿಸಿ ರೋಡ್ ಎಂಬ ವ್ಯಕ್ತಿ ಮತಿಯ ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಧರ್ಮ-ಧರ್ಮಗಳ ನಡುವೆ ಹಾಗೂ ಜಾತಿ ಜಾತಿಯ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದು, ಈತನ ವಿರುದ್ದ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದರು. ಅದೇ ರೀತಿ ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಧರ್ಮ ಧರ್ಮಗಳ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ದ ಯಾವುದೇ ಜಾತಿ ಮತ ನೋಡದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿ ವಿನಂತಿಸಿದರು.
ಅದೇ ರೀತಿ ಆರೋಪಿಗಳ ಈ ಕೀಳು ಮಟ್ಟದ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು ಇವರ ವಿರುದ್ದ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿದರು.
ನಿಯೋಗದಲ್ಲಿ ಫಝಲ್ ರಹಿಂ, ಶಾವುಲ್ ಹಮೀದ್, ಪ್ರವೀಣ್ ಆಳ್ವ, ಮೇರಿಲ್ ರೆಗೊ, ಪ್ರಸಾದ್ ಮಲ್ಲಿ, ಸುಹೈಲ್ ಕಂದಕ್, ಬಿಲಾಲ್ ಮೊಯ್ದಿನ್, ಕಿರಣ್ ಬುಡ್ಲಗುತ್ತು, ಶ್ರೀರಾಂ ಪಕಳ, ಅವಿನಾಶ್ ರೈ, ರಮಾನಂದ್ ಪೂಜಾರಿ, ರಕ್ಷಿತ್ ಸಾಲ್ಯಾನ್, ಸುಧಾಕರ್, ಶಶಿಕಾಂತ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸಂದೇಶ್ ಸಿಕ್ವೇರಾ, ಚೇತನ್ ಕುಮಾರ್, ಮಹಮ್ಮದ್ ಶರೀಫ್ ಹಾಗೂ ಇತರರು ಉಪಸ್ಥಿತರಿದ್ದರು.