ಹಿಂದೂ ಜನಜಾಗೃತಿ ಸಮಿತಿವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು
ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ,ಹಿಂದೂ ಮಹಾಸಭಾದ ಶ್ರೀ ಧರ್ಮೆಂದ್ರ, ಮಧುಸೂಧನ ಅಯಾರ ಮುಂತಾದವರು ಉಪಸ್ಥಿತರಿದ್ದರು.
ವಾಯುಮಾಲಿನ್ಯಗೊಳಿಸುವ ಪಟಾಕಿಗಳ ಮೇಲೆ ಕೇವಲ ದೀಪಾವಳಿಯ ಸಮಯದಲ್ಲಷ್ಟೇ ಅಲ್ಲ, ಡಿಸೆಂಬರ 31ರ ಸಂದರ್ಭದಲ್ಲಿಯೂ ನಿಷೇಧಿಸಿರಿ!
ಮಾನ್ಯ ಸರ್ವೋಚ್ಚ ನ್ಯಾಯಾಲಯವು ದೀಪಾವಳಿಯ ಸಮಯದಲ್ಲಿ ಪರಿಸರ ಮಾಲಿನ್ಯದ ಕಾರಣದಿಂದ ದೆಹಲಿ ಹಾಗೂ ಎನ್.ಸಿ.ಆರ್. ಪ್ರದೇಶಗಳಲ್ಲಿ ಪಟಾಕಿ ಮಾರಾಟಕ್ಕೆ ದೀಪಾವಳಿಯ ಸಮಯದಲ್ಲಿ ನಿರ್ಬಂಧ ಹೇರಿತ್ತು. ಆದರೆ ಮುಂಬರುವ ಡಿಸೆಂಬರ 25 ರಿಂದ ಜನೇವರಿ 1ರ ವರೆಗೆ ನಡೆಯುವ ಚಳಿಗಾಲದ ಹಾಗೂ ಕ್ರಿಶ್ಚಿಯನ್ನರ ಹೊಸ ವರ್ಷ ದಿನಾಚರಣೆಯ ನಿಮಿತ್ತದಿಂದ ದೇಶಾದ್ಯಂತ ಬೃಹತ ಪ್ರಮಾಣದಲ್ಲಿ ಪಟಾಕಿಗಳನ್ನು ಸುಡಲಾಗುತ್ತದೆ. ಆದುದರಿಂದ ಎಲ್ಲ ರೀತಿಯಿಂದಲೂ ಹಾನಿಯನ್ನುಂಟು ಮಾಡುವ ಪಟಾಕಿಗಳನ್ನು ಕ್ರಿಸ್ಮಸ್, ಡಿಸೆಂಬರ್ 31, ಜನವರಿ 1 ಬಹುದೊಡ್ಡ ಪ್ರಮಾಣದಲ್ಲಿ ಸಿಡಿಸಿ ಪರಿಸರ ಮಾಲಿನ್ಯ ಮಾಡಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನಿರ್ಬಂಧ ಹೇರಬೇಕೆಂಬ ಮನವಿಯನ್ನು `ರಾಷ್ಟ್ರೀಯ ಹಿಂದೂ ಅಂದೋಲನ’ದಲ್ಲಿ ಆಗ್ರಹಿಸಲಾಯಿತು.
ಕಲ್ಲೆಸೆಯುವವರ ಮೇಲೆ ಹೇರಿರುವ ದೂರನ್ನು ಹಿಂತೆಗೆದುಕೊಳ್ಳುವುದೆಂದರೆ, ಸೈನಿಕರ ಮನಃಸ್ಥೈರ್ಯವನ್ನು ಕುಗ್ಗಿಸುವ ಆತ್ಮಘಾತಕ ನಿರ್ಣಯವಾಗಿದೆ !
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಬುರಹಾನ ವಾನಿಯನ್ನು ಸೈನ್ಯವು ಹತ್ಯೆ ಮಾಡಿದ ಬಳಿಕ ಹಿಂಸಾತ್ಮಕ ಚಳುವಳಿಗಳು ಉಗ್ರರೂಪಕ್ಕೆ ಪರಿವರ್ತಿತಗೊಂಡವು. ಸೈನಿಕರ ಮೇಲೆ ಕಲ್ಲೆಸೆಯುವುದು, ಭಾರತದ ರಾಷ್ಟ್ರಧ್ವಜವನ್ನು ಸುಡುವುದು, ಭಾರತವಿರೋಧಿ ಘೋಷಣೆಯನ್ನು ಕೂಗುವುದು ಮುಂತಾದ ಅನೇಕ ದೇಶವಿರೋಧಿ ಕೃತ್ಯಗಳನ್ನು ಮಾಡಲಾಯಿತು. ಆ ಸಮಯದಲ್ಲಿ ಜರುಗಿದ ಹಿಂಸಾಚಾರದಲ್ಲಿ ಸುರಕ್ಷಾ ದಳದ 4,515 ಸೈನಿಕರು ಹಾಗೂ 3356 ನಾಗರೀಕರು ಗಾಯಾಳುಗಳಾಗಿದ್ದಾರೆಂದು ಖುದ್ದಾಗಿ ಗೃಹಮಂತ್ರಿ ರಾಜನಾಥ ಸಿಂಗ ಇವರು ರಾಜ್ಯಸಭೆಗೆ ಮಾಹಿತಿಯನ್ನು ನೀಡಿದ್ದರು. ಇದು ಹಾಡುಹಗಲಿನ ದೇಶದ್ರೋಹವಾಗಿದೆ. ಹೀಗಿರುವಾಗ ಕಲ್ಲೆಸೆತೆದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಸುಮಾರು 4500 ಕ್ಕಿಂತ ಅಧಿಕ ಯುವಕರ ಮೇಲೆ ದಾಖಲಿಸಲಾಗಿದ್ದ ದೂರನ್ನು ಹಿಂತೆಗೆದುಕೊಳ್ಳುವಂತೆ ಜಮ್ಮೂ-ಕಾಶ್ಮೀರ ರಾಜ್ಯದ ಸಂವಾದಕರಾದ ಶ್ರೀ ದಿನೇಶ್ವರ ಶರ್ಮಾ ಇವರು ಕೇಂದ್ರಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರಸ್ಸನ್ನು ಕೇಂದ್ರ ಸರಕಾರವೂ ಸಮ್ಮತಿಸಿದ್ದು, ಜಮ್ಮೂ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ದೂರನ್ನು ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ರೀತಿ ಶಿಕ್ಷೆಗಳ ಕೊರತೆಯಿಂದ ಇಂತಹ ದೇಶದ್ರೋಹಿಗಳು ಮತ್ತಷ್ಟು ಬಲಿಷ್ಠವಾಗುವರು ಹಾಗೂ ಇದರಿಂದ ಸೈನ್ಯದ ಆತ್ಮಸ್ಥೈರ್ಯ ಕುಗ್ಗುವುದು. ಆದುದರಿಂದ ಈ ಆತ್ಮಘಾತಕ ನಿರ್ಣಯವನ್ನು ತೆಗೆದುಕೊಳ್ಳಬಾರದು ಎಂದೂ ಈ ಆಂದೋಲನದ ಸಮಯದಲ್ಲಿ ಮನವಿ ಸಲ್ಲಿಸಲಾಯಿತು.
ವಿಜಯಪುರದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಹತ್ಯೆ ಮಾಡಿದ ಅಪರಾಧಿಗಳಿಗೆ ಕಠೋರ ಶಿಕ್ಷೆ ವಿಧಿಸಿ.
ಕೆಲವು ದಿನಗಳ ಹಿಂದೆ ವಿಜಯಪುರದ ಮಂಜುನಾಥ ನಗರದಲ್ಲಿ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಇದು ಅತ್ಯಂತ ಹೇಯ ಮತ್ತು ಬರ್ಬರ ಕೃತ್ಯವಾಗಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಂಬಂದಿತ ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕಠೋರ ಶಿಕ್ಷೆ ವಿಧಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.
ಹೊನ್ನಾವರದ ಪರೇಶ ಮೇಸ್ತಾ ರವರ ಹತ್ಯೆ ಮಾಡಿದ ಅಪರಾಧಿಗಳಿಗೆ ಕಠೋರ ಶಿಕ್ಷೆ ವಿಧಿಸಿರಿ.
ಡಿಸೆಂಬರ್ 6 ರಂದು ಹೊನ್ನಾವರದ ಕೋಮುಗಲಭೆಯಲ್ಲಿ ಕಾಣೆಯಾದ ಶ್ರೀ. ಪರೇಶ ಮೆಸ್ತಾರವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು. ಅವರ ದೇಹದ ಮೇಲೆ ಅನೇಕ ಗಾಯಗಳಾಗಿರುವುದು ಪತ್ತೆಯಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ಇದೊಂದು ಜಿಹಾಧಿಗಳ ಕೃತ್ಯದಂತೆ ಗಮನಕ್ಕೆ ಬರುತ್ತದೆ. ಹಾಗಾಗಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ಆಗ್ರಹಿಸುತ್ತದೆ.
ಈ ಆಂದೋಲನೆದ ಸಂದರ್ಭದಲ್ಲಿ `ಪದ್ಮಾವತಿ’ ಚಲನಚಿತ್ರಕ್ಕೂ ಸಹ ವಿರೋಧವನ್ನು ವ್ಯಕ್ತಪಡಿಸಲಾಯಿತು. ರಾಣಿ ಪದ್ಮಾವತಿ ಕುಣಿಯುತ್ತಿರುವುದನ್ನು ತೋರಿಸಿರುವ `ಘೂಮರ’ ಹಾಡನ್ನು ಚಲನಚಿತ್ರದಿಂದ ತೆಗೆಯಬೇಕು ಹಾಗೂ ಹಿಂದುತ್ವವಾದಿ ಸಂಘಟನೆಗಳ ಸದಸ್ಯರಿಗೆ ಈ ಚಲನಚಿತ್ರವನ್ನು ತೋರಿಸಿ ಅವರ ಸಂಶಯವನ್ನು ನಿವಾರಣೆಗೊಳಿಸಿಯೇ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡಬೇಕೆಂಬ ಮನವಿಯನ್ನು ಸಲ್ಲಿಸಲಾಯಿತು. ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿ,ಹಿಂದೂ ಮಹಾಸಭಾ ಮುಂತಾದ ಸಂಘಟನೆಗಳು ಭಾಗವಹಿಸಿದ್ದವು