ಹಿಂದೂ ಧರ್ಮದ ಸ್ವಾಮಿಗಳ ಬಗ್ಗೆ ಕಾಂಗ್ರೆಸ್ ಮನಸ್ಥಿತಿ ಬಯಲು : ಯಶ್ಪಾಲ್ ಸುವರ್ಣ
ಉಡುಪಿ: ಪೇಜಾವರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ವಿರುದ್ಧ ತಮ್ಮ ರಾಜಕೀಯ ತೆವಲಿಗಾಗಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮತೀಯ ಶಕ್ತಿಗಳ ಓಲೈಕೆಗಾಗಿ ಕಾಂಗ್ರೆಸ್ ಮುಖಂಡರು ಹಿಂದೂ ಸಮಾಜದ ಸ್ವಾಮಿಗಳ ಬಗ್ಗೆ ತಮ್ಮ ಹೀನ ಮನಸ್ಥಿತಿಯನ್ನು ಬಿ. ಕೆ. ಹರಿಪ್ರಸಾದ್ ಹೇಳಿಕೆಯ ಮೂಲಕ ಬಯಲು ಮಾಡಿದ್ದಾರೆ.
ಹಿಂದುತ್ವ, ರಾಷ್ಟೀಯವಾದಿ ಚಿಂತನೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಪರಮ ಪೂಜ್ಯ ಶ್ರೀಗಳು ತಮ್ಮ ಗುರುಗಳಾದ ಕೀರ್ತಿಶೇಷ ಯತಿಶ್ರೇಷ್ಟ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಹಾದಿಯಲ್ಲಿ ಸಾಗುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿರುವ ಶ್ರೀಗಳ ವಿರುದ್ಧ ಹರಿಪ್ರಸಾದ್ ಹೇಳಿಕೆ ಸಮಸ್ತ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನ.
ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿನ ವಿಶ್ವಸ್ತರಾಗಿ ದೇಶದಾದ್ಯಂತ ಹಿಂದುತ್ವದ ಸೇವೆ ಸಲ್ಲಿಸುತ್ತಾ, ಜಾತಿ ಮತವನ್ನು ಮೀರಿ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಸದಾ ಮುಂಚೂಣೆಯಲ್ಲಿ ನಿಂತಿರುವ ಶ್ರೀಗಳ ಕಾರ್ಯವೈಖರಿಯಿಂದ ಕಾಂಗ್ರೆಸ್ ಮುಖಂಡರು ಭ್ರಮನಿರಸನಗೊಂಡು ಹತಾಶ ಹೇಳಿಕೆ ನೀಡುತ್ತಿದ್ದಾರೆ.
ಬೇಜವಾಬ್ದಾರಿ ಹೇಳಿಕೆ ನೀಡಿರುವ ಕೆ ಬಿ. ಕೆ. ಹರಿಪ್ರಸಾದ್ ತಕ್ಷಣ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ ಮುಖಂಡರು ಈ ಹೇಳಿಕೆಯ ಬಗ್ಗೆ ತಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಬೇಕು ತಪ್ಪಿದಲ್ಲಿ ಸಮಸ್ತ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.