ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ಸಂಕಲ್ಪ
ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಹಾಗೂ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ೨ ದಿನಗಳ ಜಿಲ್ಲಾ ಸ್ತರೀಯ ಹಿಂದೂ ಅಧಿವೇಶನವು ಮಂಗಳೂರಿನ ಶ್ರೀ ಶಾರದಾ ವಿದ್ಯಾಲಯದಲ್ಲಿ ದೀಪಪ್ರಜ್ವಲನೆಯೊಂದಿಗೆ ಉದ್ಘಾಟನೆಗೊಂಡಿತು.
ದೀಪಪ್ರಜ್ವಲನೆಯನ್ನು ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಗೌರವಾಧ್ಯಕ್ಷರಾದ ಶ್ರೀ. ಮಧುಸೂಧನ ಅಯ್ಯರ್ ಇವರು ಮಾಡಿದರು. ಈ ವೇಳೆ ಉದ್ಯಮಿಗಳಾದ ಶ್ರೀ ಶ್ರೀನಿವಾಸ ಕಿಣಿ, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ ಮೋಹನ ಗೌಡ ಉಪಸ್ಥಿತರಿದ್ದರು.
ಸೆಕ್ಯುಲರ್ ಸಂವಿಧಾನವನ್ನು ಹಿಂದೂರಾಷ್ಟ್ರ ಸಂವಿಧಾನವೆಂದು ಬದಲಾಯಿಸುವುದು ಅವಶ್ಯವಾಗಿದೆ.- ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.ಭಾರತದ ಜಾತ್ಯಾತೀತ ಸಂವಿಧಾನದಿಂದ ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಸಮಾನ ನಾಗರಿಕ ಕಾಯ್ದೆ, ಕಾಶ್ಮೀರಿ ಹಿಂದೂಗಳ ಪುನರ್ವಸನ, ರಾಮಮಂದಿರ ನಿರ್ಮಾಣ ಮಾಡಲು ಸಾದ್ಯವಿಲ್ಲ. ಹಿಂದೂಗಳಿಗೆ ಅನ್ಯಾಯ ಮಾಡುವ ಜಾತ್ಯಾತೀತ ಸಂವಿಧಾನವನ್ನು ಬದಲಾಯಿಸಿ ಧರ್ಮಸಾಪೇಕ್ಷ ಸಂವಿಧಾನವೆಂದು ಘೊಷಿಸುವುದು ಅವಶ್ಯವಾಗಿದೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಭಾರತವನ್ನು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವೆಂದು ಘೋಷಿಸಲು ೬ ಅಖಿಲ ಭಾರತ ಅಧಿವೇಶನ, ೭೫ ಪ್ರಾಂತೀಯ ಅಧಿವೇಶನದ ಮೂಲಕ ೨೫ ರಾಜ್ಯಗಳಲ್ಲಿ ೨೫೦ ಕ್ಕೂ ಅಧಿಕ ಹಿಂದೂ ಸಂಘಟನೆಗಳನ್ನು ಹಿಂದೂರಾಷ್ಟ್ರ ಸ್ಥಾಪನೆಗಾಗಿ ಒಟ್ಟಿಗೆ ಕಾರ್ಯ ಮಾಡಲು ಸಂಘಟಿಸಿದೆ. ಹಿಂದೂ ಅದಿವೇಶನದ ಮೂಲಕ ಸಂಪೂರ್ಣ ಭಾರತದಲ್ಲಿ ಹಿಂದೂರಾಷ್ಟ್ರ ಈ ಶಬ್ದ ಅತ್ಯಂತ ಮಹತ್ವದ ಚರ್ಚಾ ವಿಷಯವಾಗಿದೆ. ಹಿಂದೂ ಅಧಿವೇಶನದ ವಿಚಾರ ಸ್ವರೂಪದ ಹಿಂದೂರಾಷ್ಟ್ರ ಸ್ಥಾಪನೆಯ ಯಜ್ಞ ಇಡೀ ಭಾರತದಾದ್ಯಂತ ಪ್ರಜ್ವಲಿಸಿ ೨೦೨೩ ರಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯೊಂದಿಗೆ ಸಮಾಪನಗೊಳ್ಳಲಿದೆ. ಈಗ ಭಾರತದಲ್ಲಿ ಹಿಂದುತ್ವದ ಧ್ರುವೀಕರಣ ಪ್ರಾರಂಭವಾಗಿದೆ. ಧರ್ಮದ್ರೋಹಿಗಳು, ರಾಷ್ಟದ್ರೋಹಿಗಳು ಒಂದು ಬಣದಲ್ಲಿದ್ದರೆ ಮತ್ತೊಂದು ಬಣದಲ್ಲಿ ಧರ್ಮಪ್ರೇಮಿಗಳು, ರಾಷ್ಟ್ರಪ್ರೇಮಿಗಳು ಒಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಮಹಾ ಸಂಘಟನೆ ಮೂಲಕ ಭಾರತದಲ್ಲಿ ಹಿಂದೂರಾಷ್ಟ್ರದ ಉದಯವಾಗುವುದು.ಎಲ್ಲರೂ ಹಿಂದೂರಾಷ್ಟ್ರ ಸ್ಥಾಪನೆಗೆ ಕೈಜೋಡಿಸುವುದು ಅತ್ಯಾವಶ್ಯಕವಾಗಿದೆ.- ಶ್ರಿ. ಮಧುಸೂಧನ ಅಯ್ಯರ್, ಗೌರವಾಧ್ಯಕ್ಷರು, ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರ.ಅಧಿವೇಶನದ ಕೇಂದ್ರ ಬಿಂದು ಹಿಂದೂರಾಷ್ಟ್ರವೇ ಆಗಿದೆ. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಗೆ ಸೇರಿಸುವಂತಹ ಮಹಾನ್ ಕಾರ್ಯ ನಡೆಯುತ್ತಿದೆ.ಹಿಂದೂ ಸಂಘಟನೆಗಳನ್ನು ನಾಶ ಮಾಡಿ ಧರ್ಮವನ್ನು ನಾಶ ಮಾಡುವ ಹುನ್ನಾರವನ್ನು ಇಂದಿನ ಸರಕಾರ, ವಿಚಾರವಾದಿಗಳು ಸೇರಿ ನಡೆಸುತ್ತಿದ್ದಾರೆ. ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಘಟನೆಗಳನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವಂತಹ ಷಡ್ಯಂತ್ರ ನಡೆಯುತ್ತಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿಯೂ ಸಾಧ್ವಿ ಪ್ರಜ್ಞಾ ಸಿಂಗ್ ರನ್ನು ಸಿಲುಕಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯಿತು. ಆದರೆ ಕೊನೆಗೆ ಧರ್ಮಕ್ಕೆ ವಿಜಯವೇ ಆಯಿತು. ಸಾಧ್ವಿ ಪ್ರಜ್ಞಾಸಿಂಗ್ ರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಯಿತು. ಹಿಂದೂ ಧರ್ಮದ ಮೇಲಾಗುತ್ತಿರುವ ಆಕ್ರಮಣಗಳನ್ನು ತಡೆಗಟ್ಟಲು ಹಿಂದೂ ರಾಷ್ಟರದ ಸ್ಥಾಪನೆ ಮಾಡುವುದೊಂದೇ ಏಕೈಕ ಉಪಾಯವಾಗಿದೆ. ಆದುದರಿಂದ ನಾವೆಲ್ಲಾ ಸಂಘಟಿತರಾಗಿ ಈ ಅಧಿವೇಶನದ ಮಾದ್ಯಮದಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡೋಣ. ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಹಿಂದೂ ಅಧಿವೇಶನದ ಆಯೋಜನೆಯನ್ನು ಮಾಡಲಾಗುತ್ತಿದೆ.
ಜಿಲ್ಲೆಯ ಮಂಗಳೂರು, ಪುತ್ತೂರು, ಉಜಿರೆ, ಬಂಟ್ವಾಳ, ಸುಳ್ಯ ಈ ಸ್ಥಳಗಳಿಂದ ಹಿಂದೂ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ದೇವಸ್ಥಾನಗಳ ವಿಶ್ವಸ್ಥರು ಅಧಿವೇಶನದಲ್ಲಿ ಉಪಸ್ಥಿತರಿದ್ದರು.ಬೆಳ್ತಂಗಡಿ ತಾ. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರು, ನ್ಯಾಯವಾದಿಗಳಾದ
ಶ್ರೀ. ಉದಯ ಕುಮಾರ್ ಬಿ.ಕೆ ಇವರು ಯುವ ಸಂಘಟನೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಬೆಳ್ತಂಗಡಿ ತಾ. ಕಾನರ್ಪದ ಚಿರಂಜೀವಿ ಯುವಕ ಮಂಡಳದ ಸಂಚಾಲಕರಾದ ಶ್ರೀ. ಜಯರಾಜ್ ಸಾಲಿಯಾನ್ ಇವರು ಸಮರ್ಪಣಾಭಾವದಿಂದ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಹೇಗೆ ಮಾಡಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದರು.
೨ ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಸಾಮಾಜಿಕ ದುಷ್ಟ ಪ್ರವರತ್ತಿಗಳಾದ ವಿವಿಧ ಕ್ಷೇತ್ರದ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟವನ್ನು ಮಾಡಲಿದ್ದೇವೆ. ಹಿಂದೂ ನೇತಾರರ ಹತ್ಯೆ, ದೇವಸ್ಥಾನಗಳ ರಕ್ಷಣೆ, ಗಲಭೆಪೀಡಿತ ಹಿಂದೂಗಳ ರಕ್ಷಣೆ, ಮತಾಂತರಕ್ಕೆ ತಡೆ, ಹಿಂದೂ ಸಂಘಟನೆಗಳ ದಮನ ನೀತಿ, ಲವ್ ಜಿಹಾದ್ಗೆ ಪ್ರತೀಕಾರ, ಇತ್ಯಾದಿ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಚರ್ಚಾಕೂಟ, ಅನುಭವ ಕಥನ ಮತ್ತು ಪ್ರತ್ಯಕ್ಷ ಆಯೋಜನೆ ನಡೆಯಲಿದೆ.