ಹಿರಿಯಡ್ಕ ಪೋಲಿಸರಿಂದ ನನ್ನ ವಿರುದ್ದ ಸುಳ್ಳು ದೂರು, ಕಾನೂನು ಹೋರಾಟದ ಎಚ್ಚರಿಕೆ – ಅಜಿತ್ ಕುಮಾರ್ ಶೆಟ್ಟಿ

Spread the love

ಹಿರಿಯಡ್ಕ ಪೋಲಿಸರಿಂದ ನನ್ನ ವಿರುದ್ದ ಸುಳ್ಳು ದೂರು, ಕಾನೂನು ಹೋರಾಟದ ಎಚ್ಚರಿಕೆ – ಅಜಿತ್ ಕುಮಾರ್ ಶೆಟ್ಟಿ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆವೆ ಮಣ್ಣು ಸಾಗಾಟದ ಕುರಿತು ನಡೆದಿರುವ ಪ್ರಕರಣದ ಕುರಿತು ತನ್ನ ವಿರುದ್ದ ಸುಳ್ಳು ದೂರು ದಾಖಲಿಸಿರುವ ಕಾನೂನು ಹೋರಾಟ ನಡೆಸುವುದಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಂಗಳೂರು (ದಕ್ಷಿಣ ಕನ್ನಡ ) ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಅಜಿತ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಜಿತ್ ಕುಮಾರ್ ಶೆಟ್ಟಿ ದಿನಾಂಕ: 23-01-2025ರಂದು ನನ್ನ ಹಾಗೂ ನಮ್ಮ ಕೆಲಸಗಾರರ ವಿರುದ್ಧ ಹಿರಿಯಡ್ಕ ಪೋಲಿಸ್ ಠಾಣೆಯಲ್ಲಿ ಆವೆ ಮಣ್ಣು ಸಾಗಾಟದ ವಿರುದ್ಧ ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿಯವರು ಹಿರಿಯಡ್ಕ ಪೋಲಿಸ್ ಠಾಣೆಯಲ್ಲಿದೂರನ್ನು ದಾಖಲಿಸಿದ್ದು, ಈ ಬಗ್ಗೆ ಪ್ರಕರಣವು ದಾಖಲಾಗಿರುತ್ತದೆ. ಉಡುಪಿ ಜಿಲ್ಲೆ, ಬೆಳ್ಳಂಪಳ್ಳಿ ಗ್ರಾಮದ ಸರ್ವೇ ನಂಬರ್ 1/69ರಲ್ಲಿ ಆವೆ ಮಣ್ಣನ್ನು ತೆಗೆಯುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಾರ್ಯದೇಶವನ್ನು ನೀಡಿದ್ದು ಕಾನೂನು ಪ್ರಕಾರವಾಗಿ ನಾವು ಸದ್ರಿ ಜಮೀನಿನಲ್ಲಿ ಅವೆ ಮಣ್ಣನ್ನು ತೆಗೆಯುವ ಕಾರ್ಯವನ್ನು ಮಾಡಿರುತ್ತೇವೆ. ಈ ಹಿಂದೆ ಕೆರೆ ನಿರ್ಮಾಣಕ್ಕಾಗಿ ಮಣ್ಣನ್ನು ತೆಗೆದ ಜಾಗವನ್ನು ನೆಪ ಇರಿಸಿಕೊಂಡು ಅದೇ ಜಾಗದ ಮಣ್ಣನ್ನು ನಾವು ಸಾಗಾಟ ಮಾಡಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಠಾಣೆಗೆಕರೆಸಿ ನಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲಿಸಿರುವುದಾಗಿದೆ. ಅಲ್ಲದೇ ಈ ವಿಚಾರಕ್ಕೆ ಯಾವುದೇ ಸಂಬಂಧ ಇಲ್ಲದ ದಲಿತ ಯುವಕ ಓರ್ವನಿಗೆ ವಿನಾಕಾರಣ ಹೊಡೆದು ಈ ಬಗ್ಗೆ ಸಾರ್ವಜನಿಕರಿಂದ ಪ್ರತಿಭಟನೆ ಹೆಚ್ಚಾದಾಗ ಹಿರಿಯಡ್ಕ ಪಿಎಸ್ಐ ರವರು ನನ್ನ ವಿರುದ್ಧ ಸುಳ್ಳು ದೂರನ್ನು ದಾಖಲಿಸಲು ಗಣಿ ಇಲಾಖಾ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಅವರಿಂದ ದೂರನ್ನು ಪಡೆದು ನನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿರುತ್ತಾರೆ. ಈ ಬಗ್ಗೆ ನಾನು ಕಾನೂನು ಹೋರಾಟವನ್ನು ಮಾಡುವವನಿದ್ದೇನೆ.

ಉಡುಪಿ ಜಿಲ್ಲೆಯಲ್ಲಿ ಹಂಚಿನ ಕಾರ್ಖಾನೆಗಳಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ನಮ್ಮಂತಹ ಎಷ್ಟೋ ಪ್ಲೇ ಕಂಟ್ರಾಕ್ಟರ್ಗಳು ಕಾನೂನು ಪ್ರಕಾರ ಅನುಮತಿ ಪಡೆದು ಆವೆ ಮಣ್ಣನ್ನು ತೆಗೆಯುತ್ತಿದ್ದರು ಕಾಣದ ಕೈಗಳ ಕುತಂತ್ರದಿಂದ ಪೋಲಿಸ್ ಇಲಾಖೆಯು ನಿರಂತರವಾಗಿ ನಮ್ಮ ವಿರುದ್ಧ ಸುಳ್ಳು ಕೇಸ್ಗಳನ್ನು ದಾಖಲಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೆಬ್ ಮಾಧ್ಯಮಗಳಲ್ಲಿ ನನ್ನ ತೇಜೋವಧೆ ಮಾಡುತ್ತಿರುವುದು ಅತೀವ ಬೇಸರ ತರಿಸಿದೆ. ಗಣಿ ಇಲಾಖೆಯಿಂದ ಆವೆ ಮಣ್ಣು ತೆಗೆಯುವ ಬಗ್ಗೆ ಕಾರ್ಯದೇಶವಾದ ಸ್ಥಳವು ಪಟ್ಟ ಜಾಗವಾಗಿದ್ದು, ಸರಕಾರಿ ಜಾಗವಾಗಿರುವುದಿಲ್ಲ. ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಎಮ್ ಎಮ್ ಆರ್ ಡಿ ಕಾಯ್ದೆಯಡಿ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಬೇಕಾಗಿರುತ್ತದೆ. ಆದರೆ ಗಣಿ ಅಧಿಕಾರಿಯವರು ಕಾನೂನನ್ನು ಗಾಳಿಗೆ ತೂರಿ ಏಕಾಏಕೀ ನಮ್ಮ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಕಾನೂನು ಹೋರಾಟ ಮಾಡುವ ನಿರ್ಧಾರವನ್ನು ಮಾಡಿರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments