ಮಂಗಳೂರು: ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ `ಯಕ್ಷರಂಗದ ರಾಜ’ ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು 2016ನೇ ಸಾಲಿನ `ಯಕ್ಷದ್ರುವ ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
53 ವರ್ಷಗಳ ನಿರಂತರ ತಿರುಗಾಟ ನಡೆಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು ದಕ್ಷ, ಭೀಷ್ಮ, ಅರುಣಾಸುರ, ರಕ್ತಬೀಜಾಸುರ, ಚಂಡ, ಭೀಷ್ಮ, ಅರ್ಜುನ, ಕಾರ್ತವೀರ್ಯ, ಮುಂತಾದ ಪಾತ್ರಗಳಿಂದ ಹೆಸರು ಗಳಿಸಿದ್ದರು. ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಪ್ರಸಂಗದ ಜಾಬಾಲಿ ಪಾತ್ರಕ್ಕೆ ಅಪೂರ್ವವಾದ ಚಿತ್ರಣ ನೀಡಿದ್ದ ಶೆಟ್ಟರ್ `ಪೆರುವಾಯಿ ಶೈಲಿ’ ಯನ್ನು ಯಕ್ಷರಂಗಕ್ಕೆ ನೀಡಿದ್ದುದು ಉಲ್ಲೇಖನೀಯ.
ಅನಾರೋಗ್ಯದಿಂದಾಗಿ ಯಕ್ಷರಂಗದಿಂದ ನಿವೃತ್ತರಾದ ಶೆಟ್ಟರು ಅರ್ಹವಾಗಿಯೇ ತನ್ನ ಸಾಧನೆಯ ಆಧಾರದಲ್ಲೇ `ಪಟ್ಲಪ್ರಶಸ್ತಿ’ ಪಡೆದಿರುತ್ತಾರೆ. ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್(ರಿ) ವತಿಯಿಂದ ನೀಡಲಾಗುವ 2016ನೇ ಸಾಲಿನ ಚೊಚ್ಚಲ 1 ಲಕ್ಷ ರೂ. ನಗದನ್ನು ಹೊಂದಿರುವ ಪಟ್ಲ ಪ್ರಶಸ್ತಿಯನ್ನು ಮೇ.22ರಂದು ಭಾನುವಾರ ಮಂಗಳೂರು ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ನೀಡಲಾಗುವುದು ಎಂದು ಪಟ್ಲ ಪೌಂಡೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.