ಹಿರಿಯ ಕಾಂಗ್ರೆಸ್ ನಾಯಕ ದಿ. ಇಗ್ನೇಶಿಯಸ್ ಡಿಸೋಜರವರಿಗೆ ನುಡಿನಮನ
ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಮಾಜಿ ಮಂಡಲ ಪ್ರಧಾನರೂ, ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ, ಕ್ರಾಂಗ್ರೆಸ್ನ ಹಿರಿಯ ನಾಯಕರಾದ ಇಗ್ನೇಶಿಯಸ್ ಡಿಸೋಜರವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
ದಿ. ಇಗ್ನೇಶಿಯಸ್ ಡಿಸೋಜ ರವರ ಮಗ, ಶಿರ್ವ ಗ್ರಾಮೀಣ ಕ್ರಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ ಸ್ವಾಗತಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿಲ್ಸನ್ ರೊಡ್ರಿಗಸ್ರವರು ಮಾತನಾಡಿ ಇಗ್ನೇಶಿಯಸ್ ಡಿಸೋಜರವರು ಗ್ರಾಮೀಣ ಭಾಗದಿಂದ ಬಂದು ಶಿರ್ವದಲ್ಲಿ ಪಕ್ಷವನ್ನು ಸಂಘಟಿಸಿ ಮಂಡಲ ಪ್ರಧಾನರಾಗಿ ಶಿರ್ವ ಗ್ರಾಮದ ಅಭಿವೃದ್ದಿಗೆ ಅನೇಕ ಕಾರ್ಯಕರ್ತರನ್ನು ಚುನಾವಣೆಗೆ ನಿಲ್ಲಿಸಿ ಅವರನ್ನು ಗೆಲ್ಲಿಸಿ ಕಾರ್ಯಕರ್ತರ ಪರವಾಗಿ ನಿಂತ ಮಹಾನ್ ನಾಯಕ ಎಂದು ಹೇಳಿದರು. ತನ್ನನ್ನು ರಾಜಕೀಯಕ್ಕೆ ಕರೆತಂದು ಸದಾ ಮಾರ್ಗದರ್ಶನ ಮಾಡುತ್ತಿದ್ದರು ಹಾಗೂ ಬಡವರ ಪರ ಹೋರಾಟ ನಡೆಸಿದ್ದರು ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾಗಿ ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸಿದ್ದರು ಎಂದು ಹೇಳಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮರಾಯ ಪಾಟ್ಕರ್ ಮಾತನಾಡಿ ಪದವಿ ಮುಗಿಸಿ ಮನೆಯಲ್ಲಿದ್ದ ನನ್ನನ್ನು ರಾಜಕೀಯಕ್ಕೆ ಕರೆತಂದವರು ಹಾಗೂ ನನ್ನ ರಾಜಕೀಯ ಗುರು ಇಗ್ನೇಶಿಯಸ್ ಡಿಸೋಜ ಅವರ ಸಾಧನೆ ನಮಗೆಲ್ಲ ಮಾದರಿ ಅವರ ನಿಧನ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ಇಂತಹ ನಾಯಕನನ್ನು ಪಡೆಯಲು ಇನ್ನು ಸಾಧ್ಯವಿಲ್ಲ. ತನ್ನ ಸ್ವಂತ ಲಾಭಕ್ಕಾಗಿ ಏನನ್ನೂ ಮಾಡದೆ ಸದಾ ತನ್ನ ವಾರ್ಡಿನ ಜನರ ಏಳಿಗೆಯನ್ನೇ ಧ್ಯೇಯವನ್ನಾಗಿಸಿಕೊಂಡು ಹಳ್ಳಿಯಿಂದ ದಿಲ್ಲಿಯವರೆಗೆ ತನ್ನದೇ ಆದ ಛಾಪನ್ನು ಮೂಡಿಸಿದ ನಾಯಕ ಅಲ್ಲದೇ ದಿ. ಶ್ರೀ ಆಸ್ಕರ್ ಫೆರ್ನಾಂಡಿಸ್, ದಿ. ವಿ ವಸಂತ ಸಾಲ್ಯಾನ್ರವರ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದ್ದಲ್ಲದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳೊದಿಗೆ ಯಾವುದೇ ರಾಜಿಯನ್ನು ಮಾಡದೇ ತಾನು ನಂಬಿದ ಪಕ್ಷವನ್ನು ಕಡೆಯವರೆಗೂ ಮುನ್ನಡೆಸಿದ ಹಿರಿಯ ಕಾಂಗ್ರೆಸ್ಸಿಗ ಇಗ್ನೇಶಿಯಸ್ ಡಿಸೋಜರವರ ನಿಧನ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ತಿಳಿಸಿದರು.
ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸನಬ್ಬ ಶೇಕ್, ರತನ್ ಶೆಟ್ಟಿ, ಮೆಲ್ವಿನ್ ಆರಾಹ್ನ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪೂಜಾರ್ತಿ, ಮಾಜಿ ಪಂಚಾಯತ್ ಸದಸ್ಯರಾದ ರಮೇಶ್ ಬಂಗೇರ, ಚಂದ್ರಹಾಸ್ ಪದವು, ಸ್ಟಾö್ಯನ್ಲಿ ಡಯಾಸ್, ಮೇರಿ ಡಿಸೋಜ, ಪ್ಲೇವಿ ಡಿಸೋಜ, ಮಾಜಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಿಲ್ಲಿ ಮೋನಿಸ್, ಶಿರ್ವ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಕಿರ ಬಾನು, ಸುಜಾತ ಪೂಜಾರ್ತಿ, ಗ್ರೆಟ್ಟಾ ರೊಡ್ರಿಗಸ್, ಗೀತಾ ನಾಯ್ಕ್, ಕಾರ್ಯಕರ್ತರಾದ ಶ್ರೀಮತಿ ಪುಷ್ಪ ಫೆರ್ನಾಂಡಿಸ್, ಮೌರಿಸ್ ಮೆಂಡೋನ್ಸ, ಐವನ್ ಡಿಸೋಜ, ರವೀಂದ್ರ ಪೂಜಾರಿ, ಜೇಮ್ಸ್ ರೊಡ್ರಿಗಸ್, ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು. ಶ್ರೀ ರಾಮರಾಯ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದಿ. ಇಗ್ನೇಶಿಯಸ್ ಡಿಸೋಜ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.