ಹೀಗೂ ಒಂದು ಚಿನ್ನದ ಕ್ರೇಜ್ ! ಕಾರ್ಕಳ ಅತ್ತೂರಿನಲ್ಲಿ ಮುಂಬೈನ ಲೂಯಿಸ್

Spread the love

ಹೀಗೂ ಒಂದು ಚಿನ್ನದ ಕ್ರೇಜ್ ! ಕಾರ್ಕಳ ಅತ್ತೂರಿನಲ್ಲಿ ಮುಂಬೈನ ಲೂಯಿಸ್

ಉಡುಪಿ: ನವೆಂಬರ್ 8 ರಂದು ದೇಶದ ಪ್ರಧಾನಿಗಳು ದೇಶದಲ್ಲಿ 1000 ಮತ್ತು 500 ರ ನೋಟುಗಳನ್ನು ಅಮಾನ್ಯ ಮಾಡಿ ಹೊಸ 2000 ಮತ್ತು 500 ನೋಟುಗಳನ್ನು ಚಲಾವಣೆಗೆ ತಂದರು. ಇದರ ಜೊತೆಯಲ್ಲಿ ದೇಶದ ನಾಗರಿಕರು ಚಿನ್ನವನ್ನು ಇಟ್ಟುಕೊಳ್ಳುವಲ್ಲಿ ಸಹ ಕೆಲವೊಂದು ನಿರ್ಬಂಧಗಳನ್ನು ಹೇರಿದರು.

ಮದುವೆಯಾದ ಮಹಿಳೆ 500 ಗ್ರಾಂ ನಷ್ಟು ಚಿನ್ನವನ್ನು ಇಟ್ಟುಕೊಳ್ಳಲು ಅವಕಾಶ ನೀಡಿದರು ಮದುವೆಯಾಗದ ಮಹಿಳೆ 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಹೊಂದಬಹುದು ಎಂದು ಸೂಚಿಸಿದರೆ ಇಲ್ಲೊಬ್ಬ ವ್ಯಕ್ತಿ ಬರೊಬ್ಬರಿ ತನ್ನ ಮೈಮೇಲೆ ಸುಮಾರು 2 ಕೆಜಿ ಯಷ್ಟು ಚಿನ್ನವನ್ನು ಹಾಕಿಕೊಂಡೇ ತಿರುಗಿತ್ತಿದ್ದಾರೆ ಎಂದು ಆಶ್ಚರ್ಯವಾಗಬಹುದಲ್ಲವೇ?

ಹೌದು ಅಂತಹ ವ್ಯಕ್ತಿ ನಮ್ಮ ತಂಡಕ್ಕೆ ಕಾಣ ಸಿಕ್ಕಿದ್ದು ಕಾರ್ಕಳದ ಅತ್ತೂರು ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ. ಮುಂಬೈ ಮಹಾನಗರದಲ್ಲಿ ವಾಸಿಸಿರುವ ಲೂಯಿಸ್ ಅವರು ತನ್ನ ಮೈಮೇಲೆ 2 ಕೆಜಿಯಷ್ಟು ಚಿನ್ನವನ್ನು ಹಾಕಿಕೊಂಡು ರಾಜಾರೋಷವಾಗಿ ಯಾವುದೇ ಹೆದರಿಕೆಯಿಲ್ಲದೆ ತಿರುಗಾಡುತ್ತಿದ್ದಾರೆ. ಮುಂಬೈನಲ್ಲಿ ಕೆಬಲ್ ನೆಟ್ ವರ್ಕ್ ಉದ್ಯಮವನ್ನು ನಡೆಸಿಕೊಂಡು ಬಂದಿರುವ ಇವರಿಗೆ ಚಿನ್ನ ಹಾಕಿಕೊಳ್ಳುವುದೆಂದರೆ ಒಂದು ರೀತಿಯ ಹುಚ್ಚು ಹವ್ಯಾಸವಾಗಿದೆ. ಕಳೆದ 20 ವರುಷಗಳಿಂದ ಹೀಗೆ ಅವರು ಚಿನ್ನವನ್ನು ಧರಿಸುತ್ತಿದ್ದರೆ ಅವರ ಪತ್ನಿ ಸುವರ್ಣ ಹಾಗೂ ಪುತ್ರ ಪೌಲ್ ಗೆ ಚಿನ್ನದ ಆಸೆಯೇ ಇಲ್ಲ. ಅತ್ತೂರು ಪುಣ್ಯಕ್ಷೇತ್ರದ ಕುರಿತು ಟಿವಿ ಮಾಧ್ಯಮಗಳಿಂದ ತಿಳಿದು ಈ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎನ್ನುವ ಉದ್ದೇಶದಿಂದ ಅವರು ಬಂದಿದ್ದು, ಕಳೆದ ಒಂದು ವಾರದಿಂದ ಇಲ್ಲಿಯೇ ವಾಸವಾಗಿದ್ದಾರೆ. ಶುಕ್ರವಾರ ಕೂಡ ತನ್ನ ಪತ್ನಿ ಹಾಗೂ ಮಗನ ಸಮೇತ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಮೈಮೇಲೆ ಅಷ್ಟೊಂದು ಚಿನ್ನವನ್ನು ಧರಿಸಿಕೊಂಡು ಬಂದಿರುವುದನ್ನು ಕಾಣಲು ಅಲ್ಲಿ ಸೇರಿದ್ದ ಜನರು ಮುಗಿಬಿದ್ದಿದ್ದರು. ಕೆಲವೊಂದು ವ್ಯಕ್ತಿಗಳು ಲೂಯಿಸ್ ಅವರ ಜೊತೆ ಸೇರಿಕೊಂಡು ಸೆಲ್ಫಿ ಕೂಡ ತೆಗೆಯುತ್ತಿದ್ದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಲೂಯಿಸ್ ಕಳೆದ 20 ವರುಷಗಳಿಂದ ಈ ರೀತಿ ಚಿನ್ನವನ್ನು ಹಾಕಿಕೊಂಡು ತಿರುಗಾಡುವ ಹವ್ಯಾಸವಾಗಿ ಬೆಳೆದಿದ್ದು, ಯಾವುದೇ ರೀತಿಯ ಅನಧಿಕೃತ ಚಿನ್ನ ಇದಲ್ಲ. ತಾನು ಧರಿಸಿರುವ ಚಿನ್ನ ಸಂಪೂರ್ಣ ಕಾನೂನು ಪ್ರಕಾರವೇ ನನ್ನ ಚಿನ್ನವನ್ನು ನೋಂದಾಯಿಸಿಕೊಂಡಿದ್ದು ಯಾವುದೇ ರೀತಿಯ ಹೆದರಿಕೆ ತನಗಿಲ್ಲ. ನಮ್ಮ ಮನೆಯಲ್ಲಿ ಇತರ ಯಾರಿಗೂ ಹೀಗೆ ಚಿನ್ನವನ್ನು ಧರಿಸುವ ಹವ್ಯಾಸ ಇಲ್ಲ ಆದರೂ ನಾನು ಧರಿಸುವುದಕ್ಕೆ ಅವರು ಯಾರೂ ವಿರೋಧ ಕೂಡ ಮಾಡೊಲ್ಲ, ಪ್ರಥಮ ಬಾರಿಗೆ ಅತ್ತೂರು ಪುಣ್ಯಕ್ಷೇತ್ರಕ್ಕೆ ಬಂದಿದ್ದು ಸಂತ ಲಾರೆನ್ಸರ ದರುಶನದಿಂದ ಅತೀವ ಸಂತೋಷಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿವರುಷ ಬರಬೇಕು ಎನ್ನುವ ಅಪೇಕ್ಷೆ ಹೊಂದಿದ್ದೇನೆ ಎಂದರು.

 


Spread the love