ಹುಟ್ಟೂರು ಯಡಾಡಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ

Spread the love

ಹುಟ್ಟೂರು ಯಡಾಡಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅಂತ್ಯಕ್ರಿಯೆ

ಉಡುಪಿ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ರಾಜ್ಯದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಚಿತೆಗೆ ಭಾನುವಾರ ಮಧ್ಯಾಹ್ನ 12.15 ಹೊತ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಮೂಲಕ ಮಧುಕರ್​ ಶೆಟ್ಟಿ ಪಂಚಭೂತಗಳಲ್ಲಿ ಲೀನವಾದರು.

ಡಾ. ಕೆ.ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆಯು ಹುಟ್ಟೂರು ಕುಂದಾಪುರ ತಾಲೂಕಿನ ಶಿರಿಯಾರ ಸಮೀಪದ ಯಡಾಡಿಯಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಕುಟುಂಬಸ್ಥರು, ಅಧಿಕಾರಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದಿನೇಶ್ ಅಮೀನ್ ಮಟ್ಟು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಪೊಲೀಸ್ ಅಧಿಕಾರಿಗಳಾದ ಎನ್‌ಪಿಎ ಬರ್ಮನ್, ಪ್ರತಾಪ್ ರೆಡ್ಡಿ, ಅರುಣ್ ಚಕ್ರವರ್ತಿ, ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮೊದಲಾದವರು ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.
ಬಳಿಕ ಮನೆ ಅಂಗಳದಲ್ಲಿ ಪಾರ್ಥಿವ ಶರೀರಕ್ಕೆ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರಕಾರಿ ಗೌರವವನ್ನು ಸಲ್ಲಿಸಿದರು.

ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿಯಲ್ಲಿ ಬಂಟ ಸಂಪ್ರದಾಯದಂತೆ ನಡೆದ ಅಂತಿಮ ವಿಧಿ ವಿಧಾನದಲ್ಲಿ ಸೋದರರಾದ ಮುರಳಿ ಶೆಟ್ಟಿ, ಸುಧಾಕರ್​ ಶೆಟ್ಟಿ, ಮಗಳು ಸಮ್ಯ, ಅಣ್ಣನ ಮಗ ಸಾರಂಗ್​ ಮಧುಕರ ಶೆಟ್ಟಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದ ಪೊಲೀಸ್​ ಅಧಿಕಾರಿಗಳು ಮತ್ತು ಜನತೆ ಮರೆಯಾದ ಮಧುಕರ ಶೆಟ್ಟಿ ಅವರಿಗೆ ಕಣ್ಣೀರ ವಿದಾಯ ಹೇಳಿದರು.


Spread the love