ಹುಲಿ ಕಾಡಿಗೆ ಹೋಗಬೇಕು- ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ತಿರುಗೇಟು ನೀಡಿದ ಕಟೀಲ್

Spread the love

ಹುಲಿ ಕಾಡಿಗೆ ಹೋಗಬೇಕು- ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ತಿರುಗೇಟು ನೀಡಿದ ಕಟೀಲ್

ಮಡಿಕೇರಿ: ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ತಿರುಗೇಟು ನೀಡಿದ್ದಾರೆ.

ಅವರು ಶನಿವಾರ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿಯನ್ನು ಉದ್ದೇಶಿಸಿ ಮಾತನಾಡಿ ಕಾಡು ಪ್ರಾಣಿ, ಕಾಡು ಮನುಷ್ಯ ಇವೆರಡರಲ್ಲಿ ಯಾರು ಒಳ್ಳೆಯವುರ? ಸಮಾಜಕ್ಕೆ ಯಾರಿಂದ ಹೆಚ್ಚು ಆಪತ್ತು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಕಟೀಲ್ ಧರ್ಮದ ವಿಚಾರವಾಗಿ ಸಮಾಜ ವಿಭಜಿಸಿದ ಶಾಸಕರನ್ನು ವರುಣಾ ಕ್ಷೇತ್ರದಿಂದಲೇ ಮತದಾರರು ಓಡಿಸಿದ್ದಾರೆ. ಆ ಕಾಡು ಪ್ರಾಣಿಯನ್ನು ಜನರು ಊರಿಂದ ಓಡಿಸಿದರೆ ಕಾಡು ಮನುಷ್ಯನನ್ನು ಎರಡುವರೆ ಲಕ್ಷ ಅಂತರದಿಂದ ಜನರು ಗೆಲ್ಲಿಸಿದ್ದಾರೆ ಎಂದರು.

ಹುಲಿ ಕಾಡು ಪ್ರಾಣಿ. ಅದು ಕಾಡಿಗೆ ಹೋಗಬೇಕು. ಆ ಮೂಲಕ ರಾಜ್ಯವನ್ನು ಕಾಡು ಪ್ರಾಣಿಗಳಿಂದ ರಕ್ಷಿಸಬೇಕಾಗಿದೆ ಎಂದು ತಿರುಗೇಟು ನೀಡಿದರು. ನಾವು ಯಾರಿಗೂ ಹುಲಿ ಅನ್ನೋ ಬಿರುದು ಕೊಟ್ಟಿಲ್ಲ. ಆದರೆ ಕೆಲವರು ಅವರೇ ಸ್ವಯಂ ಘೋಷಿತ ಹುಲಿಗಳಾಗಿದ್ದಾರೆ ಎಂದರು.

ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿಯೇ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದರು. ಬಂಡೆ ದೊಡ್ಡದ ಅಥವಾ ಹುಲಿ ದೊಡ್ಡದಾ ಎನ್ನೋ ಗುದ್ದಾಟ ಕಾಂಗ್ರೆಸ್ ನಲ್ಲಿ ಶುರುವಾಗಿದೆ. ಈ ಗುದ್ದಾಟದ ಭಾಗವಾಗಿ ಅವರದ್ದೇ ಶಾಸಕರ ಮನೆಗೆ ಬೆಂಕಿ ಹಾಕಲಾಗಿದೆ.

ಮಾಜಿ ಮೇಯರ್ ಸಂಪತ್ ರಾಜ್ ಡಿಕೆಶಿ ಹಿಂದೆ ಬಂದವರು. ಅಖಂಡ ಶ್ರೀನಿವಾಸಮೂರ್ತಿ ಅವರು ಸಿದ್ದರಾಮಯ್ಯ ಅವರ ಹಿಂದೆ ಬಂದವರು. ಇವರ ಜಗಳದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬಿದ್ದಿತ್ತು. ಹೀಗಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಸಂಪತ್ ರಾಜ್ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸ್ ತನಿಖೆ ಡಿಕೆಶಿ ಮತ್ತು ಸಿದ್ದರಾಮಯ್ಯನವರ ಜಗಳವೇ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಾಟೆಗೆ ಕಾರಣ ಎನ್ನೋದನ್ನು ಬಯಲುಗೊಳಿಸಿದೆ ಎಂದರು.


Spread the love