ಹುಸೈನಬ್ಬ ಕೊಲೆಯಲ್ಲಿ ಪೋಲಿಸ್ ಶಾಮಿಲಾತಿ: ಇಲಾಖೆಯಲ್ಲಿರುವವರು 60 ಶೇಕಡಾ ಸಂಘಪರಿವಾರಿಗಳು ಎಂಬುದಕ್ಕೆ ಹಿಡಿದಿರುವ ಕೈಗನ್ನಡಿ; ಪಿಎಫ್ ಐ
ಮಂಗಳೂರು: ಉಡುಪಿಯ ಪೆರ್ಡೂರು ಗ್ರಾಮದ ಸೀನಬೆಟ್ಟು ಬಳಿ ಮೇ 30ರಂದು ನಡೆದ ದನದ ವ್ಯಾಪಾರಿ ಜೋಕಟ್ಟೆಯ ಹುಸೇನಬ್ಬರ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ನೇತತ್ವದ ಪೋಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರು ಹಾಗು ಹಿರಿಯಡ್ಕ ಪೊಲೀಸ್ ಠಾಣಾ ಎಸ್ ಐ ಡಿ.ಎನ್.ಕುಮಾರ್ ಸೇರಿದಂತೆ ಇತರ ಇಬ್ಬರು ಪೊಲೀಸರನ್ನು ಬಂಧಿಸಿರುವ ಸುದ್ದಿಯು ಜಿಲ್ಲೆಯನ್ನೇ ಬೆಚ್ಚಿಬೀಳಿಸುವಂತಿದೆ ಎಂದು ದಕ ಜಿಲ್ಲಾ ಪಾಪ್ಯುಲರ್ ಫ್ರಂಟ್ ಅಭಿಪ್ರಾಯಪಟ್ಟಿದೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ಪೊಲಿಸರು ಸಂಘಪರಿವಾರಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಹಿಂದಿನಿಂದಲೂ ಬಲವಾಗಿ ಆರೋಪಿಸುತ್ತಾ ಬಂದಿದ್ದು, ಈಗ ಅದು ಸ್ಪಷ್ಟವಾಗಿದೆ. ಅದಲ್ಲದೇ ಈ ಹಿಂದೆ ಗಣೇಶ್ ಕಾರ್ಣಿಕ್ ಎಂಬ ಬಿಜೆಪಿಯ ವಿಧಾನ ಪರಿಷತ್ಸದಸ್ಯ ಕೂಡ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಸಂಘಪರಿವಾರಿಗಳಿದ್ದಾರೆ ಎಂಬ ಹೇಳಿಕೆಯನ್ನು ಕೊಟ್ಟಿದ್ದರು ಎಂಬುದು ಗಮನಾರ್ಹ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಾವಳಿಯಲ್ಲಿ ಸಂಘಪರಿವಾರವನ್ನು ಪೊಷಿಸಿದ ಕುಖ್ಯಾತಿ ಇಲ್ಲಿನ ಕೆಲ ಪೊಲೀಸರಿಗೆ ಸಲ್ಲುತ್ತದೆ. ಜಿಲ್ಲೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಉದ್ಭವವಾಗಿದ್ದು, ಇಂತಹ ಬೆಳೆವಣಿಗೆ ಮುಂದುವರಿದರೆ ಜನಸಾಮಾನ್ಯರು ಪೊಲೀಸ್ ಇಲಾಖೆಯ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.
ಆದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಮರುಪರಿಶೀಲಿಸಿ ಕೋಮುವಾದಿ ಪೊಲೀಸ್ ಅಧಿಕಾರಿಗಳನ್ನು ಹಾಗೂ ಕಾನ್ಸ್ಟಬಲ ಗಳನ್ನು ಎತ್ತಂಗಡಿ ಮಾಡಬೇಕು ಮತ್ತು ಈ ಪ್ರಕರಣವನ್ನು ಇನ್ನಷ್ಟು ಸಮರ್ಪಕವಾಗಿ ತನಿಖೆ ನಡೆಸಿ ಇದರ ಹಿಂದಿರುವ ಸಂಘಪರಿವಾರದ ನಾಯಕರನ್ನು ಬಂಧಿಸಬೇಕಾಗಿ ಮಾನ್ಯ ಮುಖ್ಯಮಂತ್ರಿಯವರನ್ನು ಆಗ್ರಹಿಸುತ್ತಿದ್ದೆವೆ. ಇದೇ ವೇಳೆ ಹಲವು ಒತ್ತಡಗಳ ನಡುವೆಯೂ ಲಕ್ಷ್ಮಣ್ ನಿಂಬರಗಿಯವರು ನಡೆಸಿದ ನಿಷ್ಪಕ್ಷಪಾತ ಹಾಗೂ ಮಿಂಚಿನ ತನಿಖೆಯನ್ನು ಪಾಪ್ಯುಲರ್ ಫ್ರಂಟ್ ಮುಕ್ತ ಕಂಠದಿಂದ ಶ್ಲಾಘಿಸುತ್ತದೆ.