ಹುಸೈನಬ್ಬ ಪ್ರಕರಣದಲ್ಲಿ ಅಮಾಯಕ ಕಾರ್ಯಕರ್ತರನ್ನು ಬಂಧಿಸದಂತೆ ಎಸ್ಪಿಗೆ ಸಂಸದೆ ಶೋಭಾ ಸೂಚನೆ
ಉಡುಪಿ: ಹಿರಿಯಡ್ಕದಲ್ಲಿ ಅನುಮಾಸ್ಪದವಾಗಿ ಸಾವನಪ್ಪಿದ ದನದ ವ್ಯಾಪಾರಿ ಹುಸೈನಬ್ಬ ಅವರ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ನಿಯೋಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ಅವರನ್ನು ಸೋಮವಾರ ಸಂಜೆ ಭೇಟಿಯಾಗಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸದಂತೆ ಮನವಿ ಮಾಡಿದರು.
ಪ್ರಕರಣದ ಕುರಿತಂತೆ ಎಸ್ಪಿಯವರ ಜೊತೆ ಚರ್ಚೆ ನಡೆಸಿದ ಸಂಸದರು ಘಟನೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅಕ್ರಮ ಗೋ ಸಾಗಾಟದ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ್ದು ಮಾತ್ರ ಆದರೆ ಕಾರ್ಯಾಚರಣೆಯನ್ನು ನಡೆಸಿರುವುದು ಹಿರಿಯಡ್ಕ ಪೋಲಿಸರು ಆದ್ದರಿಂದ ಸಂಘಟನೆಯ ಕಾರ್ಯಕರ್ತರನ್ನು ವಿನಾಕಾರಣ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಅಲ್ಲದೆ ಹಿರಿಯಡ್ಕದಲ್ಲಿ ಹೆಚ್ಚುವರಿ ಎಸ್ ಐ ಆಗಿ ನೇಮಕಗೊಂಡಿರುವ ರಫೀಕ್ ಅವರು ಹಿಂದೂ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು, ಕೂಡಲೇ ಅವರನ್ನು ವಾಪಾಸ್ ಕರೆಸಬೇಕು ಎಂದು ಆಗ್ರಹಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು ನಮ್ಮ ಕಾರ್ಯಕರ್ತರು ದನಗಳ್ಳತನದ ಮಾಹಿತಿ ಪೊಲೀಸರಿಗೆ ಕೊಟ್ಟಿದ್ದಾರೆ ಅದರಂತೆ ಹಿರಿಯಡ್ಕ ಎಸ್ ಐ ನೇತೃತ್ವದಲ್ಲಿ ಕಾರ್ಯಾಚಾರಣೆ ನಡೆದಿದೆ. ಪೋಲಿಸರು ಬರುವ ಮಾಹಿತಿ ಅರಿತು ತಮ್ಮ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗುವ ವೇಳೆ ಹುಸೇನಬ್ಬ ಅವರು ಅನುಮಾಸ್ಪದವಾಗಿ ಸಾವನಪ್ಪಿದ್ದಾರೆ. ಈ ಸಾವಿಗೂ ಸಂಘಪರಿವಾರಿಕ್ಕೂ ಯಾವುದೇ ಸಂಬಂಧವಿಲ್ಲ.
ಘಟನೆಯ ಬಳಿಕ ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಹಿರಿಯಡ್ಕ ಠಾಣೆಗೆ ಹೆಚ್ಚುವರಿ ಎಸ್ ಐ ಆಗಿ ಬಂದಿರುವ ರಫೀಕ್ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ವಿನಾಕಾರಣ ಕಿರುಕುಳ ನೀಡುವ ಕೆಲಸ ನಡೆಸುತ್ತಿದ್ದಾರೆ. ಅವರನ್ನು ಕೂಡಲೇ ವಾಪಾಸು ಕರೆಸಬೇಕು. ಇದರ ಹಿಂದೆ ಸಮ್ಮಿಶ್ರ ಸರ್ಕಾರದ ಕುಮ್ಮಕ್ಕು ಮಾಡುತ್ತಿದ್ದು, ರಾಜ್ಯ ಸರ್ಕಾರ ಬಿಜೆಪಿ ಮತ್ತು ಸಂಘಪರಿವಾರದ ಮೇಲೆ ದೌರ್ಜನ್ಯ ಮಾಡುತ್ತಿದೆ. ಪ್ರಕರಣದಲ್ಲಿ ಕೇವಲ ಪೋಲಿಸರು ಮಾತ್ರ ಆರೋಪಿಗಳಾಗಿದ್ದು ನಿರಪರಾಧಿ ಸಂಘಪರಿವಾರದ ಕಾರ್ಯಕರ್ತರನ್ನು ಹಿಂಸಿಸದೆ ಬಿಡುಗಡೆ ಮಾಡಬೇಕು ಎಂದು ಎಸ್ಪಿಯವರಲ್ಲಿ ವಿನಂತಿ ಮಾಡಲಾಗಿದೆ. ರಾಜ್ಯ ಸರಕಾರದ ವಿರುದ್ದ ಜೂನ್ 6ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಹುಸೇನಬ್ಬ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂಬ ಮಾಹಿತಿ ಇದೆ ಅವರು ಹೃದಯಾಘಾತದಿಂದ ಸಾವನಪ್ಪಿರಬಹುದು ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸಾವಿನ ಸತ್ಯಾಸತ್ಯತೆ ಹೊರ ಬರುತ್ತದೆ ಎಂದರು.
ನಿಯೋಗದಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಸುಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.