ಹುಸೈನಬ್ಬ ಸಾವು ಪ್ರಕರಣ; ಕುಮಾರಸ್ವಾಮಿ ಒತ್ತಡದಿಂದ ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ; ಶೋಭಾ ಕರಂದ್ಲಾಜೆ ಆಕ್ರೋಶ
ಉಡುಪಿ: ಪೆರ್ಡೂರಿನಲ್ಲಿ ಜಾನುವಾರು ವ್ಯಾಪರಿ ಹುಸೇನಬ್ಬ ಸಾವಿನ ಹಿನ್ನಲೆಯಲ್ಲಿ ಅಮಾಯಕ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಬಿಜೆಪಿ ಉಡುಪಿ ಜಿಲ್ಲೆ ವತಿಯಿಂದ ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಪೆರ್ಡೂರು ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರು ಕಾನೂನು ರೀತಿಯಲ್ಲಿ ಕೆಲಸ ಮಾಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದನಗಳನ್ನು ಹಗ್ಗ ಕಡಿದು ತೆಗೆದುಕೊಂಡು ಹೋದಾಗ ಯಾರು ಕೇಳಲಿಲ್ಲ. ಮೊನ್ನೆ ಪೆರ್ಡೂರಿನಲ್ಲಿ ದನಗಳನ್ನು ಕದ್ದು ಹುಸೇನಬ್ಬ ಮತ್ತು ಆತನ ಸಂಗಡಿಗರು ಸಾಗಿಸುತ್ತಿದ್ದರು. ಅದರಲ್ಲಿ ಎರಡು ದನಗಳು ಸತ್ತು ಹೋಗಿತ್ತು ಆದರೆ ಇದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದರು. ದನ ಸಾಗಾಟ ಮಾಡಿದ ಸ್ಕಾರ್ಪಿಯೋ ಅವರನ್ನು ಸಾಗಾಟ ಮಾಡುತ್ತಿರುವವರೇ ಜಖಂ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಮಾಡಿಲ್ಲ. ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಮತ್ತು ದನಗಳ್ಳರು ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು ಎಂದು ನಮ್ಮ ಸಂಘಟನೆಯಲ್ಲಿ ನಿರ್ಧಾರ ಆಗಿದೆ ಎಂದು ಅವರು ತಿಳಿಸಿದರು.
ಹುಸೇನಬ್ಬ ಪೊಲೀಸ್ ಕಸ್ಟಡಿಯಲ್ಲಿ ಸತ್ತಿರುವುದರಿಂದ ಇದು ಸಹಜವಾಗಿ ಸಿಐಡಿ ತನಿಖೆಗೆ ಹೋಗುತ್ತದೆ. ಸಿಐಡಿಯಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗೆ ಇಲ್ಲ. ಆದರೂ ನಾವು ಎಫ್ಎಸ್ಎಲ್ ವರದಿ ಬರುವವರೆಗೆ ಕಾಯುತ್ತೇವೆ. ಈ ವರದಿಯಲ್ಲಿ ಹುಸೇನಬ್ಬ ಹೃದಯಾಘಾತದಿಂದ ಸಾವಿನಪ್ಪಿರುವುದಾಗಿ ಬಂದರೆ ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಉಳಿಯುವುದಿಲ್ಲ. ಯಾರು ಆರೋಪಿಗಳು ಆಗಲ್ಲ. ವರದಿ ಬಂದ ಬಳಿಕವೇ ನಾವು ಯಾವ ತನಿಖೆ ಆಗಬೇಕೆಂಬುದನ್ನು ನಿರ್ಧಾರ ಮಾಡುತ್ತೇವೆ ಎಂದರು.
ಪೊಲೀಸರು ತಮ್ಮಲ್ಲಿರುವ ಪಿಸ್ತೂಲ್, ಲಾಠಿಯನ್ನು ದನಗಳ್ಳರನ್ನು ಹಿಡಿಯುವುದಕ್ಕೆ ಬಳಸಬೇಕು. ಗೋಹತ್ಯೆ ನಿಷೇಧ ಜಾರಿಗೆ ತರುವುದರಿಂದ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು. ಉನ್ನತ ಅಧಿಕಾರಿಗಳು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕುಮಾರಸ್ವಾಮಿಯವರ, ಉನ್ನತ ಅಧಿಕಾರಿಗಳ ಒತ್ತಡಕ್ಕೆ ನಮ್ಮ ಜಿಲ್ಲೆಯ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರುವ ವರೆಗೆ ಯಾಕೆ ಕಾಯಲಿಲ್ಲವೆಂದು ತಿಳಿಸಿದರು. ಒತ್ತಡದ ಕಾರಣ 302 ಪ್ರಕರಣ ದಾಖಲಿಸಿದ್ದಾರೆಂದು ಗಂಭೀರ ಆರೋಪ ಮಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಸೂಕ್ಷ್ಮ ಜಿಲ್ಲೆಗಳು ಪೊಲೀಸರ ವಿನಂತಿ ಮಾಡುತ್ತೇನೆ ಎಂದರು.
ದುರುದ್ದೇಶದಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಕರ್ನಾಟಕ ಸರಕಾರ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲಿ ಎಂದು ಆಗ್ರಹಿಸಿದರು. . ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಸೂಕ್ಷ್ಮ ಜಿಲ್ಲೆಗಳು ಇಲ್ಲಿ ರಫೀಕ್ ನಂತಹ ಅಧಿಕಾರಿಗಳನ್ನು ಹಾಕಬೇಡಿ. ಅನಾವಶ್ಯಕವಾಗಿ ಬಿಜೆಪಿ ಪರ ಕೆಲಸ ಮಾಡ್ತಾನೆ. ಕೇಸರಿ ಶಾಲ್ ಹಾಕ್ತಾನೆ ಅನ್ನುವಂತಹ ಏಕೈಕ ದುರುದ್ದೇಶ ಇಟ್ಟುಕೊಂಡು ಬಂಧನ ಮಾಡುವ ಕೆಲಸ ಮಾಡುತ್ತಾರೆ ಎಂದು ಕಿಡಿ ಕಾರಿದರು. ಕರ್ನಾಟಕ ಸರಕಾರಕ್ಕೆ ಈ ಸಂದರ್ಭದಲ್ಲಿ ಹೇಳಲು ಇಚ್ಚಿಸುತ್ತೇನೆ, ನಮ್ಮ ಮೈ, ಮನಸ್ಸು, ತಲೆ ಎಲ್ಲ ಕೇಸರಿ ಇದೆ ನೀವೇನು ನಮ್ಮನ್ನು ಸುಟ್ಟು ಹಾಕ್ತೀರಾ ಎಂದು ಪ್ರಶ್ನಿಸಿದರು. ಒಲೈಕೆಯ, ಸೃಜನ ಪಕ್ಷಪಾತದ ಭಾವನೆ ಇಟ್ಟುಕೊಳ್ಳಬೇಡಿ ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ನಮ್ಮ ಹೋರಾಟ ಪೊಲೀಸ್ ಅಧಿಕಾರಿಗಳ ವಿರುದ್ದ ಅಲ್ಲ ಕರ್ನಾಟಕ ರಾಜ್ಯ ಸರಕಾರದ ವಿರುದ್ಧ ಹೇಳಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ 2005 ರಲ್ಲೂ ಈ ಘಟನೆ ಸಂಭವಿಸಿತ್ತು, ಮತ್ತು ಅಂದು ಬೆತ್ತಲೆ ಪ್ರಕರಣ ಎಂದು ಪ್ರಚಾರವಾಗಿತ್ತು, ಅದನ್ನು ನಮ್ಮ ಕಾರ್ಯಕರ್ತರು ಎದುರಿಸಿದ್ದರು. ಪೊಲೀಸರು ಗೊಕಳ್ಳರನ್ನು ತಡೆಯುವ ಕೆಲಸ ಮಾಡಿದ್ದಾರೆ ಅವರೊಂದಿಗೂ ನಾವು ನಿಲ್ಲಬೇಕೆಂದರು. ಗೋವನ್ನು ರಕ್ಷಣೆ ಮಾಡಿದಂತಹ ಕಾರ್ಯಕರ್ತರು ತಮ್ಮನ್ನು ಪೊಲೀಸರ ವಶಕ್ಕೆ ನೀಡಬೇಕಾಯಿತು ಎಂದರು. ಕುಮಾರ ಸ್ವಾಮಿ ಫೋನ್ ಮಾಡಿ ಒತ್ತಡ ತರುತ್ತಾರೆ. ಗೊಕಳ್ಳ ಹುಸೇನಬ್ಬ ಸತ್ತರೆ ಎಷ್ಟೊಂದು ಚಿಂತೆ ಮಾಡುತ್ತಾರೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಶಾಸಕರು ಹೇಳಿದರು.ಇದು ಪೊಲೀಸ್ ಕಸ್ಟಡಿಯಲ್ಲಿ ನಡೆದ ಸಾವು. ನಮ್ಮ ಕಾರ್ಯಕರ್ತರು ಹೊಡೆದು ಸತ್ತದ್ದಲ್ಲ. ಆತ ಭಯ ಬಿದ್ದು ಸತ್ತು ಹೋಗಿದ್ದಾನೆಂದು ತಿಳಿಸಿದರು.
ದನದ ಸಾಗಾಟದ ವೇಳೆ ಎರಡು ದನಗಳು ಮೃತಪಟ್ಟಿವೆ. ಆ ಮೂಲಕ ದನಗಳನ್ನು ಕೊಲೆ ಮಾಡಲಾಗಿದೆ. ಎಲ್ಲರು ಹುಸೇನಬ್ಬರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಸತ್ತ ದನಗಳ ಬಗ್ಗೆ ಯಾರು ಮಾತನಾಡಲ್ಲ. ಅದರ ಜೀವಕ್ಕೆ ಬೆಲೆ ಇಲ್ಲವೇ ಎಂದು ಶಾಸಕ ಕೆ.ರಘುಪತಿ ಭಟ್ ಪ್ರಶ್ನಿಸಿದರು.
ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಿದರೆ ಇನ್ನಷ್ಟು ಅಮಾಯಕರ ಕಾರ್ಯಕರ್ತರ ಬಂಧನ ಆಗುವ ಸಾಧ್ಯತೆ ಇದೆ. ಆದುದರಿಂದ ಸಿಐಡಿಯಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಜರಂಗದಳದ ಮುಖಂಡ ಸುನೀಲ್ ಕೆ. ಆರ್., ವಿಎಚ್ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ನಯನ ಗಣೇಶ್, ಶೀಲಾ ಕೆ.ಶೆಟ್ಟಿ, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಪ್ರಭಾಕರ ಪೂಜಾರಿ, ಸುರೇಶ್ ನಾಯಕ್ ಕುಯಿಲಾಡಿ, ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.