Home Mangalorean News Kannada News ಹೃದಯಪೂರ್ವಕವಾಗಿ ಮಾಡುವ ಯಾವುದೇ ಕೆಲಸದಲ್ಲಿ, ಖಂಡಿತ ಬದಲಾವಣೆಯನ್ನು ನಿರೀಕ್ಷಿಸಬಹುದು: ವಿವೇಕ್ ಆಳ್ವ

ಹೃದಯಪೂರ್ವಕವಾಗಿ ಮಾಡುವ ಯಾವುದೇ ಕೆಲಸದಲ್ಲಿ, ಖಂಡಿತ ಬದಲಾವಣೆಯನ್ನು ನಿರೀಕ್ಷಿಸಬಹುದು: ವಿವೇಕ್ ಆಳ್ವ

Spread the love

ಹೃದಯಪೂರ್ವಕವಾಗಿ ಮಾಡುವ ಯಾವುದೇ ಕೆಲಸದಲ್ಲಿ, ಖಂಡಿತ ಬದಲಾವಣೆಯನ್ನು ನಿರೀಕ್ಷಿಸಬಹುದು: ವಿವೇಕ್ ಆಳ್ವ

ಮೂಡಬಿದಿರೆ: ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಒಳ್ಳೆಯ ಮಾಹಿತಿಯನ್ನು  ಪಸರಿಸದೆ, ಸ್ವಸ್ಥ ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿರುವುದರಿಂದ, ಸಾಮಾಜಿಕ ಕಾರ್ಯಕರ್ತರು (ಸೊಶ್ಯಲ್ ವರ್ಕರ್ಸ್) ಇಂತಹ ಮಾಹಿತಿಗಳ ಹಿಂದಿನ ಸೂಕ್ಷತೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ದಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಸೆಲ್ವಮಣಿ ಆರ್ ತಿಳಿಸಿದರು.

ಅವರು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗ ಆಯೋಜಿಸಿದ್ದ  ‘’ಆಳ್ವಾಸ್ ರೀಚ್-2019’’ ಎರಡು ದಿನಗಳ  ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜನರಿಗೆ ಸರಿಯಾದ ಮಾಹಿತಿಯನ್ನು ಮನದಟ್ಟು ಮಾಡುವ ಹಂತದಲ್ಲಿ ಸಾಮಾಜಿಕ ಕಾರ್ಯಕರ್ತರು ಹಲವು ತೊಂದರೆಗಳನ್ನು ಎದುರಿಸಿದರೂ, ಆ ಪ್ರಕ್ರಿಯೆಯಲ್ಲಿ ಎಂದೂ ಹಿಂದೆ ಸರಿಯಬಾರದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್  ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ  ಶಿಕ್ಷಣ ಪ್ರತಿಷ್ಠಾನ ಹಲವು ದಶಕಗಳಿಂದ ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದೊಂದಿಗೆ ಹಲವು ಅಭಿವೃದ್ಧಿಪರ ಕಾರ್ಯಗಳಲ್ಲಿ  ಕೈ ಜೋಡಿಸಿದೆ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಪ್ರೀತಿಯಿಂದ, ಗೌರವದಿಂದ ಮಾಡಿದಾಗ ಯಾವ ಕೆಲಸವು ಕಷ್ಟವೆನಿಸದು ಎಂದರು.  ಹೃದಯಪೂರ್ವಕವಾಗಿ ಮಾಡುವ ಯಾವುದೇ ಕೆಲಸದಲ್ಲಿ, ಖಂಡಿತ ಬದಲಾಣೆಯನ್ನು ನಿರೀಕ್ಷಿಸಬಹುದು ಎಂದರು.

‘’ಆಳ್ವಾಸ್ ರೀಚ್-2019’’ರ ಹಿನ್ನಲೆಯಲ್ಲಿ  ಆಯೋಜಿಸಿದ್ದ  ಹಲವು ಸ್ಪರ್ಧೆಗಳ ಬಹುಮಾನವನ್ನು ಈ ಸಂಧರ್ಭದಲ್ಲಿ ವಿತರಿಸಲಾಯಿತು. ಕೊಲೇಝ ಮೇಕಿಂಗ್‍ನಲ್ಲಿ  ಮೈಸೂರಿನ ಜೆಎಸ್‍ಎಸ್ ಕಾಲೇಜು ಪ್ರಥಮ,  ಆಳ್ವಾಸ್‍ನ ದ್ವಿತೀಯ ಬಿಕಾಂನ ವಿದ್ಯಾರ್ಥಿಗಳು ದ್ವಿತೀಯ,  ಪೋಸ್ಟರ್ ಮೇಕಿಂಗ್‍ನಲ್ಲಿ ಮೈಸೂರಿನ ಜೆಎಸ್‍ಎಸ್ ಕಾಲೇಜು ಪ್ರಥಮ ಜಿಎಫ್‍ಜಿ ಕಾಲೇಜು ಕಾರಸ್ಟ್ರೀಟ್ , ಮಂಗಳೂರು  ದ್ವಿತೀಯ,  ಸ್ಲೋಗನ್  ರೈಟಿಂಗ್‍ನಲ್ಲಿ  ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ ಪ್ರಥಮ, ಎಸ್‍ಡಿಎಂ ಕಾಲೇಜು ಉಜಿರೆ ದ್ವಿತೀಯ, ಸೋಶ್ಯಲ್ ಮೇಲೋಡಿ ಸ್ಪರ್ಧೆಯಲ್ಲಿ ಶ್ರೀ ಬಸವೇಶ್ವರ ಕಾಲೇಜು ತುಮಕೂರು ಪ್ರಥಮ, ಎನ್‍ಎಮ್‍ಸಿ ಸುಳ್ಯ ದ್ವಿತೀಯ, ಪೇಪರ್ ಪ್ರಸೆಂಟೇಶನನಲ್ಲಿ ರೋಶನಿ ನಿಲಯ ಕಾಲೇಜು ಪ್ರಥಮ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಮನಪದವು ದ್ವಿತೀಯ ಸ್ಥಾನವನ್ನು ಪಡೆಯಿತು.  ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನ ಬಿಎಸ್‍ಡಬ್ಲೂ ವಿಭಾಗ ಸಮಗ್ರ ಪ್ರಶಸ್ತಿಯನ್ನು  ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಸ್ಮಿತಾ, ವಿನಯ್, ಶ್ರೀನಿಧಿ, ಸುಮತಿ, ತೇಜಸ್ವಿನಿ, ರಾಹುಲ್, ಅಚಲಾ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು

 ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಆತ್ಮೀಯಾ ಕಡಂಬ ಸ್ವಾಗತಿಸಿ, ಉಪನ್ಯಾಸಕ ಸುದೀಂದ್ರ ಶಾಂತಿ ವಂದಿಸಿ, ವಿದ್ಯಾರ್ಥಿಗಳಾದ ಸ್ವರಾಜ್ ಹಾಗೂ ನಿತ್ಯಾನಂದ ನಿರೂಪಿಸಿದರು.

 ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಮೇಘಾಲಯದ ನವೋಮಿ ಎಂ ಸಂಗ್ಮಾ, ಆಳ್ವಾಸ್ ರೀಚ್‍ನ ಕಾರ್ಯಕ್ರಮ ಸಂಯೋಜಕಿ ಪವಿತ್ರಾ ಪ್ರಸಾದ್ ಉಪಸ್ಥಿತರಿದ್ದರು.


Spread the love

Exit mobile version