ಹೆಜಮಾಡಿಯಿಂದ ಶಿರೂರುವರೆಗೆ ಸಮುದ್ರತೀರದಲ್ಲಿ ಪಂಜರ ಕೃಷಿ ಮೀನುಗಾರಿಕೆ- ಸಚಿವ ಕೋಟ
ಕುಂದಾಪುರ: ಹೆಜಮಾಡಿಯಿಂದ ಶಿರೂರುವರೆಗೆ ಕನಿಷ್ಟ 1 ಸಾವಿರ ಮಂದಿಯಾದರೂ ಸಮುದ್ರತೀರದಲ್ಲಿ ಪಂಜರ ಕೃಷಿ ಮೀನುಗಾರಿಕೆ ನಡೆಸುವಂತಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಪಂಜರ ಕೃಷಿ ಮೀನುಗಾರಿಕೆ ಕುರಿತಂತೆ ಮೀನುಗಾರಿಕಾ ಇಲಾಕೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಕೊರೋನಾ ಸಂಕಷ್ಟದಿಂದ ಅನೇಕರು ಉದ್ಯೋಗ ಕಳೆದುಕೊಂಡಿದ್ದು, ಇದು ಬದುಕಿನ ಅಂತಿಮ ಕ್ಷಣ ಎಂಬ ತೀರ್ಮಾನಕ್ಕೆ ಬರಬಾರದು. ಈ ನಿಟ್ಟಿನಲ್ಲಿ ಇಲಾಖೆ ತುರ್ತಾಗಿ ಕಾರ್ಯನಿರ್ವಹಿಸುತ್ತಿದ್ದು ನುರಿತವರಿಂದ ತರಬೇತಿ, ಮಾರ್ಗದರ್ಶನ, ಬ್ಯಾಂಕ್ ಸಾಲ ಇತ್ಯಾದಿ ಕೊಡಿಸಲಾಗುವುದು ಎಂದರು.
ಸಾರ್ವಜನಿಕ ಅಹವಾಲು ಸ್ವೀಕರಿಸಿ, ಸಾಸ್ತಾನದ ವ್ಯಕ್ತಿಯೊಬ್ಬರು ನೀಡಿದ ಅರ್ಜಿಗೆ ಅನೇಕ ಸಮಯಗಳಿಂದ ಇತ್ಯರ್ಥವಾಗದ ದೂರಿಗೆ ಸ್ಪಂದಿಸಿ ಸರಕಾರಿ ಅಧಿಕಾರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು. ಕೋವಿಡ್ ಸಂದರ್ಭ ಆರಾಮವಾಗಿ ಇರುವುದು ಸರಕಾರಿ ನೌಕರರು ಮಾತ್ರ ಎಂಬ ಭಾವನೆ ಇದೆ. ಸರಕಾರಿ ನೌಕರರಿಗೆ ನಿಶ್ಚಿಂತೆಯಿಂದ ವೇತನ ಬರುತ್ತದೆ. ಇತರ ಎಲ್ಲ ವರ್ಗದವರೂ ದಣಿದಿದ್ದಾರೆ. ಆದಾಯ ಇಲ್ಲದೇ ಕುಸಿದಿದ್ದಾರೆ. ಹಾಗಿದ್ದರೂ ಜನಸಾಮಾನ್ಯರ ಕೆಲಸ ಕಾರ್ಯ ಮಾಡಿಕೊಡಲು ಅಸಡ್ಡೆ ಮಾಡಬೇಡಿ. ಅಂತಹ ಆಲಸ್ಯವನ್ನು ಸಹಿಸುವುದಿಲ್ಲ ಎಂದ ಅವರು, ಮೂರು ದಿನಗಳ ಒಳಗೆ ಕೆಲಸ ಆಗಬೇಕು ಎಂದು ಸೂಚಿಸಿದರು.
ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮೊದಲಾದವರು ಇದ್ದರು.