Home Mangalorean News Kannada News ಹೆಣ್ಣು ಯಕ್ಷಗಾನ ಕಲಿತರೆ ಕಲೆ ಬೆಳೆಯುತ್ತದೆ: ಪ್ರಸಾದ ಆಸ್ರಣ್ಣ

ಹೆಣ್ಣು ಯಕ್ಷಗಾನ ಕಲಿತರೆ ಕಲೆ ಬೆಳೆಯುತ್ತದೆ: ಪ್ರಸಾದ ಆಸ್ರಣ್ಣ

Spread the love

ಹೆಣ್ಣು ಯಕ್ಷಗಾನ ಕಲಿತರೆ ಕಲೆ ಬೆಳೆಯುತ್ತದೆ: ಪ್ರಸಾದ ಆಸ್ರಣ್ಣ

ಮಂಗಳೂರು : ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಹೇಳಿದರು.

ಕದ್ರಿ ರಾಜಾಂಗಣದಲ್ಲಿ ನಡೆದ ಬಾಲ ಯಕ್ಷಕೂಟ ದಶಮ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀವರ್ಚನ ನೀಡಿದರು.

ಯಕ್ಷ ಗಾನ ಗಂಡು ಕಲೆ ಎಂದು ಹೇಳುತ್ತಾರೆ ಆದರೆ ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಯಕ್ಷಗಾನ ಕಲಿಯುತ್ತಾರೆ. ಹೀಗೆ ಯಕ್ಷಗಾನ ವ್ಯಾಪ್ತಿ ಹಿರಿದಾಗುತ್ತದೆ ಎಂದರು.

ಅನೇಕ ಭಾರತೀಯ ಕಲೆಗಳನ್ನು ನೋಡಿದ್ದೇನೆ. ಯಕ್ಷಗಾನದಷ್ಟು ಸಂತೋಷವನ್ನು, ಸಂಭ್ರಮವನ್ನು ನೀಡುವ ಕಲೆ ಇನ್ನೊಂದಿಲ್ಲ. ಮಕ್ಕಳ ಯಕ್ಷಗಾನ ನೋಡುವುದೇ ಚೆಂದ. ಮಕ್ಕಳಿಗೆ, ಹೆಣ್ಣುಮಕ್ಕಳಿಗೆ ಯಕ್ಷಗಾನವನ್ನು ಪರಂಪರೆಗೆ ಅನುಗುಣವಾಗಿ ಕಲಿಸುತ್ತಿರುವ ಯಕ್ಷಗುರು ಎಲ್ಲೂರು ರಾಮಚಂದ್ರ ಭಟ್ಟರ ಕಾರ್ಯ ಶ್ಲಾಘನೀಯ ಎಂದರು.

ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಭಾಷಣ ಮಾಡಿದ ಯಕ್ಷ ವಿಮರ್ಶಕ ಡಾ ಪ್ರಭಾಕರ ಜೋಷಿ, 40 ಮೇಳ, 5 ಸಾವಿರ ಮಂದಿ ಕಲಿಯುತ್ತಿದ್ದಾರೆ, 300 ತರಬೇತಿ ಶಾಲೆಗಳಿವೆ. 5 ಸಾವಿರ ಅರ್ಥಧಾರಿಗಳಿದ್ದಾರೆ. ಸಣ್ಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಕಲಾವಿದರಿದ್ದಾರೆ. ಇಷ್ಟು ಖ್ಯಾತಿ, ಪ್ರಸಿದ್ಧಿಗಳು ಬಂದರೆ ವೈರಸ್ ಪ್ರವೇಶವಾಗುತ್ತದೆ ಎಂದರು.

ಸಂಪ್ರದಾಯ ರಹಿತವಾಗಿರುವುದನ್ನು ಉಪೇಕ್ಷಿಸಬೇಕು. ಯಕ್ಷಗಾನ ಕೇಂದ್ರಗಳು ವೈರಸ್‍ಗಳನ್ನು ತಡೆದು ಪರಂಪರೆಗೆ ಅನುಗುಣವಾಗಿ ಯಕ್ಷಗಾನ ಉಳಿಸಿ, ಬೆಳೆಸಬೇಕು. ಯಕ್ಷ ಹಾಸ್ಯ ವೈಭವ, ನಾಟ್ಯ ವೈಭವ ಯಕ್ಷಗಾನಕ್ಕೆ ಮಾರಕ ಎಂದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟ್ಲ ಪೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಪೊರೇಟರ್ ಅಶೋಕ್ ಕುಮಾರ್ ಡಿ.ಕೆ., ಮೂಡುಬಿದರೆ ಎಂಸಿಸಿ ಬ್ಯಾಂಕಿನ ಸಿಇಒ ಚಂದ್ರಶೇಖರ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ, ಗೌರವಾಧ್ಯಕ್ಷ ದಿನೇಶ್ ದೇವಾಡಿಗ, ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ, ವಾಸುದೇವ ರಾವ್ ಇದ್ದರು.

ಸನ್ಮಾನ: ರಾಷ್ಟ್ರಪ್ರಶಸ್ತಿ ಪುರಷ್ಕøತ ಕೆ ಗೋವಿಂದ ಭಟ್, ಕೆ.ಎಲ್. ಕುಂಡಂತಾಯ, ಉಜಿರೆ ಅಶೋಕ ಭಟ್, ದಯಾನಂದ ಕೋಡಿಕಲ್ ಅವರಿಗೆ ದಶಮಾನೋತ್ಸವ ಸನ್ಮಾನ ನಡೆಯಿತು. ವಿದ್ವಾನ್ ಕೃಷ್ಣರಾಜ ನಂದಳಿಕೆ ಮತ್ತು ಮೋಹಿನಿ ಕಲಾ ಸಂಪದ ಯಜಮಾನ ಗಂಗಾಧರ ಶೆಟ್ಟಿಗಾರ್ ಇವರಿಗೆ ಗೌರವಾರ್ಪಣೆ ನಡೆಯಿತು.

ಗುರುನಮನ: ಉಚಿತವಾಗಿ ಯಕ್ಷಗಾನ ಕಲಿಸುವ ಯಕ್ಷಗುರು ಎಲ್ಲೂರು ರಾಮಚಂದ್ರ ಭಟ್ ಕದ್ರಿ ಮತ್ತು ವನಿತಾ ಎಲ್ಲೂರು ದಂಪತಿಗೆ ಶಿಷ್ಯವೃಂದದವರು ಗುರು ನಮನ ಸಲ್ಲಿಸಿದರು. ಜಿತೇಂದ್ರ ಕುಂದೇಶ್ವರ ಅಭಿನಂದನಾ ನುಡಿ ನಮನ ಸಲ್ಲಿಸಿದರು.

ಅಧ್ಯಕ್ಷ ಕೃಷ್ಣ ಭಟ್ ಕದ್ರಿ ಸ್ವಾಗತಿಸಿದರು. ಆರ್.ಕೆ.ರಾವ್ ಮತ್ತು ಜಯಶ್ರೀ ಹೆಬ್ಬಾರ್ ನಿರೂಪಿಸಿದರು. ಕಾರ್ಯದರ್ಶಿ ಗಣೇಶ್ ಹೆಬ್ಬಾರ್ ವಂದಿಸಿದರು.

ಕದ್ರಿ ವಿಷ್ಣು ಅವರ ಸಂಸ್ಮರಣೆ ಜರಗಿತು. ವಿದ್ವಾನ್ ಕೃಷ್ಣರಾಜ ನಂದಳಿಕೆ ಅವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ ನಡೆಯಿತು.

ಯಕ್ಷ ವೈಭವ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ಮಾಧ್ಯಮ ಮಿತ್ರ ವೃಂದ ಕಲಾವಿದರಿಂದ ಶಕ್ರಾರಿ ಕಾಳಗ ಯಕ್ಷಗಾನ, ಬಾಲಯಕ್ಷಕೂಟ ಹಳೆ ವಿದ್ಯಾರ್ಥಿಗಳಿಂದ ಯೋಗಿನಿ ಕಲ್ಯಾಣ ಯಕ್ಷಗಾನ, ಕುರಿಯ ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಮೈರಾವಣ ಯಕ್ಷಗಾನಪ್ರದರ್ಶನಗೊಂಡಿತು.


Spread the love

Exit mobile version