Home Mangalorean News Kannada News ಹೆದ್ದಾರಿಯಲ್ಲಿ ಶಿಸ್ತಿನ ಸಂಚಾರ ವ್ಯವಸ್ಥೆ ಹೊಣೆ ಹೊರುವವರಾರು?

ಹೆದ್ದಾರಿಯಲ್ಲಿ ಶಿಸ್ತಿನ ಸಂಚಾರ ವ್ಯವಸ್ಥೆ ಹೊಣೆ ಹೊರುವವರಾರು?

Spread the love

ಹೆದ್ದಾರಿಯಲ್ಲಿ ಶಿಸ್ತಿನ ಸಂಚಾರ ವ್ಯವಸ್ಥೆ ಹೊಣೆ ಹೊರುವವರಾರು?

ಬರಹ : ಡಿ. ವೀರೇಂದ್ರ ಹೆಗ್ಗಡೆ

ಜೂನ್ 21 ರಂದು ಮಂಗಳವಾರ ಕುಂದಾಪುರದ ತ್ರಾಸಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಶಾಲಾ ಮಕ್ಕಳು ದಾರುಣ ಸಾವನ್ನಪ್ಪಿದ ವರದಿ ಓದಿ ದು:ಖವಾಯಿತು.
ಇಂತಹ ರಸ್ತೆ ಅಪಘಾತಗಳು ನಿತ್ಯವೂ ಅನೇಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ. ಈ ಅಪಘಾತ ನಡೆದ ಬಳಿಕ ಮುಂದಿನ ಸರದಿ ಯಾರದ್ದು ಅನ್ನುವ ಚಿಂತೆ ಮೂಡಿ ಬರುತ್ತದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರನ್ನು ಸ್ಮರಿಸಿದರೆ ಹೃದಯ ಭಾರವಾಗುತ್ತದೆ. ಅವರ ದು:ಖವನ್ನು, ನೋವನ್ನು ಸಂತೈಸುವುದಕ್ಕೆ ಶಬ್ದಗಳು ಅಥವಾ ಭಾವನೆಗಳು ಸೋಲುತ್ತವೆ. ಈ ಅಪಘಾತಕ್ಕೆ ಕಾರಣವನ್ನು ವಿಮರ್ಶೆ ಮಾಡಲೇಬೇಕಾಗಿದೆ.
ಕಳೆದ ವಾರವಷ್ಟೆ ನಾನು ಧಾರವಾಡಕ್ಕೆ ಉಡುಪಿ ಮೂಲಕ ಅಂಕೋಲಾ ರಸ್ತೆಯಾಗಿ ಹೋಗಿ ಹಿಂದಿರುಗಿದ್ದೆ. ಈ ಸಂದರ್ಭದಲ್ಲಿ ರಸ್ತೆಯ ವೈಶಾಲ್ಯಕ್ಕಾಗಿ ಮೂರು ಟ್ರಾಕಿನ ರಸ್ತೆ ಮಾಡುವುದಕ್ಕಾಗಿ ಭಾರತದರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜಿಸಿದ ಕಾರ್ಯ ದೂರದೃಷ್ಟಿಯದ್ದಾಗಿದೆ. ಆದರೆ ಈ ಕಾರ್ಯವನ್ನು ನಿರ್ವಹಿಸುತ್ತಿರುವ ರೀತಿ ವಿಮರ್ಶೆಗೆ ಒಳಪಡಬೇಕಾಗಿದೆ.
ಕಳೆದ ನಲ್ವತ್ತು ವರ್ಷಗಳಿಂದ ಈ ರಸ್ತೆಯಲ್ಲಿ ಸಂಚರಿಸಿದ ನನಗೆ ಈ ವಿಶಾಲವಾದ ರಸ್ತೆಯಲ್ಲಿ ವಿದೇಶದಲ್ಲಿರುವ ರಸ್ತೆಗಳ ನೆನಪಾಯಿತು ಮತ್ತು ಮುಂದೆ ರಾಷ್ಟೀಯ ಮಟ್ಟದ ರಸ್ತೆ ಆಗುವುದಾದಲ್ಲಿ ಪ್ರಗತಿಯಾಗುತ್ತದೆ ಎಂದು ಕಂಡಿತು. ಆದರೆ ಪ್ರಯಾಣಕ್ಕೆ ಹಿಂದೆ ಇದ್ದ ರಸ್ತೆಗಿಂತ ಒಂದು ತಾಸು ಹೆಚ್ಚುವರಿ ಸಮಯ ಬೇಕಾಯಿತು. ಈ ರಸ್ತೆಯಲ್ಲಿ ಕೆಲವು ಕಡೆ ಬಲಗಡೆಯಿಂದ ಹೋಗುವ ರಸ್ತೆ ನಿರ್ಮಾಣ ಆಗುತ್ತಿದ್ದರೆ, ಕೆಲವೇ ಅಂತರದಲ್ಲಿ ಎಡಗಡೆಯಿಂದ ಪ್ರಯಾಣ ಮಾಡಬೇಕಾಗುತ್ತದೆ. ಬಲಗಡೆಯಿಂದ ಅಥವಾ ಎಡಗಡೆಯಿಂದ ಮತ್ತೆ ಬಲಗಡೆ ತಿರುಗುವ ಸಂದರ್ಭದಲ್ಲಿ ಎದುರಿನಿಂದ ವಾಹನಗಳು ಬರುತ್ತಿರುವ ಸಂದರ್ಭದಲಿ ್ಲಎದುರು ಬದುರಾದ ವಾಹನಗಳು ಕ್ಷಣಕ್ಷಣಕ್ಕೂ ಅಪಾಯವನ್ನು ಎದುರಿಸುತ್ತಿರುತ್ತವೆ.
ನಾವು ಕೂಡಾ ಇಂತಹ ಅಪಾಯಗಳನ್ನು ಎದುರಿಸುತ್ತಾ ಸಾಗಿದ್ದೇವೆ. ಅನೇಕ ಕಡೆ ಎದುರು ಬದುರಾದ ವಾಹನಗಳು ಕಾನೂನಿನ ಅರಿವಿಲ್ಲದೆ, ಅಸಹನೆಯಿಂದ ಮತ್ತು ಅವಸರದಿಂದ ಅಪಘಾತವನ್ನು ಆಹ್ವಾನಿಸುತ್ತಿದ್ದವು. ಇವುಗಳಲ್ಲಿ ತೀರಾ ದೊಡ್ಡದಾದ ಘನವಾಹನಗಳು, ಮಧ್ಯಮ ಗಾತ್ರದ ಬಸ್‍ಗಳು ಮತ್ತು ಕಾರುಗಳು ಸಂಚರಿಸುತ್ತಿದ್ದವು. ಇವುಗಳ ಮಧ್ಯೆ ದ್ವಿಚಕ್ರ ವಾಹನ ಚಾಲಕರು ತಮ್ಮ ಪಾಲಿನ ಸಮಸ್ಯೆಗಳನ್ನು ಒಡ್ಡುತ್ತಿದ್ದರು. ಈ ವಾಹನಗಳ ಮಧ್ಯೆ ಸಂಚರಿಸುವ ದ್ವಿಚಕ್ರ ವಾಹನಗಳು ಕಾನೂನಿನ ಪರಿವೆ ಇಲ್ಲದೆ ಯಾವುದೇ ಸೂಚನೆ (Divider) ನೀಡದೆ ಎಡಕ್ಕೆ, ಬಲಕ್ಕೆ ಮತ್ತು ಮಧ್ಯದಲ್ಲಿ ತೂರಿಕೊಂಡು ಸಂಚರಿಸುತ್ತಿದ್ದವು.
ಒಬ್ಬ ದ್ವಿಚಕ್ರ ವಾಹನ ಸವಾರ ನಮ್ಮ ವಾಹನದ ಎಡಭಾಗದಲ್ಲಿ ನೇರವಾಗಿ ಹೋಗುತ್ತಿದ್ದ. ಎರಡೂ ರಸ್ತೆಗಳ ಮಧ್ಯದಲ್ಲಿ ಆತನಿಗೆ ಬಲ ಭಾಗಕ್ಕೆ ತಿರುಗಬೇಕಾಗಿತ್ತು. ಆತ ಯಾವುದೇ ಸೂಚನೆ (Signal) ನೀಡದೆ ಬಲಗಡೆಗೆ ಬಂದುಬಿಟ್ಟ. ಕೇವಲ 15 ಅಡಿ ಅಂತರದಲ್ಲಿ ಅನಿರೀಕ್ಷಿತವಾಗಿ ನಮ್ಮ ವಾಹನದ ಎಡಭಾಗದಿಂದ ಬಲಭಾಗಕ್ಕೆ ಅವನು ಬಂದಾಗ ನಮ್ಮ ವಾಹನದ ಚಾಲಕ ಆತನನ್ನು ಉಳಿಸುವುದಕ್ಕಾಗಿ ಮತ್ತು ಅಪಘಾತ ತಪ್ಪಿಸಲು ತಕ್ಷಣ ತೀವ್ರವಾಗಿ ಬ್ರೇಕ್ ಹಾಕಿದ. ಒಳಗಡೆ ಕುಳಿತಿದ್ದ ನಮಗೆ ಒಂದು ಬಾರಿ ಹೊಟ್ಟೆ ಬಾಯಿಗೆ ಬಂದ ಅನುಭವವಾಯಿತು. ಆತ ಏನೂ ಆಗಲಿಲ್ಲವೇನೋ ಅನ್ನುವಂತೆ ಮಧ್ಯದ ವಿಭಾಜಕ(Reflectors) ದಾಟಿ ಎದುರಗಡೆ ಬರುವ ವಾಹನಗಳ ಮಧ್ಯದಲ್ಲೇ ಸಾಗಿದ. ಒಂದು ಪ್ರಯಾಣದಲ್ಲಿ ಇಂತಹ ಹತ್ತಾರು ಘಟನೆಗಳ ಅನುಭವ ಆಗುತ್ತಿರುತ್ತದೆ.
ಮೊದಲನೆದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವಿವಿಧ ಕಂಟ್ರಾಕ್ಟ್‍ದಾರರಿಗೆ ಕೊಟ್ಟ ಕಾಮಗಾರಿಯನ್ನು ಶಿಸ್ತುಬದ್ಧವಾಗಿ, ಏಕಪ್ರಕಾರವಾಗಿ ನೆರವೇರಿಸಬೇಕಾಗಿದೆ. ಚಾಲಕರಿಗೆ ಎಚ್ಚರಿಕೆ ಕೊಡುವ ಸೂಚನಾ ಫಲಕಗಳೊಂದಿಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು.
ರಸ್ತೆ ಕಾಮಗಾರಿ ಬಗ್ಯೆ ಕೆಲವು ಕಂಪೆನಿಗಳು ನೂರು ಎಚ್ಚರಿಕೆ ಫಲಕಗಳನ್ನು ಹಾಕಿದರೆ ಇತರ ಕಡೆಗಳಲ್ಲಿ ಯಾವುದೇ ಫಲಕಗಳು ಇರುವುದಿಲ್ಲ. ಈ ಸಂಚಾರ ವ್ಯವಸ್ಥೆಯಲ್ಲಿ ಎರಡು ರೀತಿಯ ಸಂಚಾರಗಳಿರುತ್ತವೆ. ಮುಂಬೈಯಿಂದ ಕೇರಳದ ಯಾವುದೋ ಭಾಗಕ್ಕೆ ಒಂದು ಸಾವಿರ ಕೀ.ಮೀ.ಗೂ ಮಿಕ್ಕಿ ದೂರ ಸಂಚರಿಸುವ ಘನ ವಾಹನಗಳು, ಬಸ್‍ಗಳು ಒಂದು ವಿಧವಾದರೆ, ಉಡುಪಿಯಿಂದ ಕುಂದಾಪುರದ ವರೆಗೆ ಸಂಚರಿಸುವವರು ಅಥವಾ ಅಂಗಡಿಯಿಂದ ಮನೆಗೆ ಹೋಗುವವರು ಅಂದರೆ ಕೇವಲ ಎರಡು-ಮೂರು ಕಿ.ಮೀ ದೂರ ಸಂಚರಿಸುವವರೂ ಇರುತ್ತಾರೆ.
ಈ ಎರಡೂ ರೀತಿಯ ಚಾಲಕರ ಮನೋಸ್ಥಿತಿಯಲ್ಲಿ ಹಾಗೂ ಚಾಲನೆಯ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವ ಎಚ್ಚರಿಕೆಯಲ್ಲಿ ವ್ಯತ್ಯಾಸ ಇರುತ್ತದೆ. ತೀರಾ ಸುಸ್ತಾಗಿ, ಅದರೊಂದಿಗೆ ಮಳೆಯೂ ಬಂದಾಗ, ಎರಡು ಪಟ್ಟು ಎಚ್ಚರಿಕೆಯಿಂದ ಚಾಲನೆ ಮಾಡಿ ಸುಸ್ತಾದ ದೀರ್ಘಪ್ರಯಾಣದ ಚಾಲಕರು ಬಹುಪಾಲಿನವರಾದರೆ ಇಲ್ಲೇ ಹತ್ತಿರ ಎನ್ನುವ ಸಲಿಗೆಯಿಂದ ಯಾವುದೇ ಎಚ್ಚರಿಕೆ ವಹಿಸದೆ ಪ್ರಯಾಣಿಸುವ ಚಾಲಕರಿಗೂ ವ್ಯತ್ಯಾಸವಿರುತ್ತದೆ. ಈ ಮಧ್ಯೆ ಎರಡು ನಿಮಿಷಕ್ಕೊಂದು ಚಲಿಸುವ ಬಸ್‍ಗಳು, ಅತಿ ವೇಗದಿಂದ ಸಮಯದ ಹೊಂದಾಣಿಕೆಗಾಗಿಯಾರನ್ನೂ ಲೆಕ್ಕಿಸದೆ ಸಂಚರಿಸುತ್ತಾರೆ.ಈ ಮಧ್ಯೆ ಈಗ ತಾನೆ ಬೆಳೆದು ನಿಂತಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಜನತೆ ರಸ್ತೆ ದಾಟಲು ಪಡುತ್ತಿರುವ ಪರಿಪಾಟಲು ಹೇಳತೀರದು. ಅದೂ ಶಾಲಾ ಪ್ರಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ಮಕ್ಕಳ ಜೊತೆಗೆ ಇರುವ ತಾಯಿ, ಅಜ್ಜಂದಿರು ರಸ್ತೆದಾಟಲು ಹೆಣಗಾಡಬೇಕಾಗುತ್ತದೆ. ಇದು ಕಾಮಗಾರಿ ನಡೆಯುವಲ್ಲಿ ಸ್ಥಿತಿಯಾದರೆ ಇನ್ನೊಂದು ಕರ್ನಾಟಕದ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗಲೂ ಇಂತಹ ಸಮಸ್ಯೆಗಳನ್ನು ಗುರುತಿಸಬಹುದಾಗಿದೆ.
ಸಾಮಾನ್ಯವಾಗಿ ಇವು ರಾಷ್ಟ್ರದ ಸಂಚಾರಿ ವ್ಯವಸ್ಥೆಯ ಸಮಸ್ಯೆಯಾದರೂ, ನಮ್ಮನ್ನು ನಾವು ಗಮನಿಸುವುದಾದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಿ ನಿಯಮಗಳ ಬಗ್ಯೆಎಲ್ಲಿಯೂ ಸೂಚನೆಗಳು, ಫಲಕಗಳ ಮಾರ್ಗದರ್ಶನ ಇರುವುದಿಲ್ಲ. ಇದ್ದರೂ ಅಲಿ ್ಲಇಲ್ಲಿ ಸಾಕ್ಷಿಗೆ ಎನ್ನುವಂತೆಇರುತ್ತದೆ.ಈ ಸೂಚನಾ ಫಲಕಗಳು ಮತ್ತು ಕಬ್ಬಿಣದ ವಸ್ತುಗಳು ಕಳ್ಳರ ಕೈಗೆ ಸಿಕ್ಕಿ ಕಾಣೆಯಾಗುತ್ತಲೇ ಇರುತ್ತವೆ. ಅನೇಕ ಕಡೆ ಶಾಲಾ ಮಕ್ಕಳು ಪ್ರತಿಬಿಂಬಿಸುವ ಫಲಕಗಳಿಗೆ ((Reflectors) ) ಕಲ್ಲು ಹೊಡೆದು ನಾಶ ಮಾಡಿದ್ದೂ ಇದೆ. ಅಂದರೆಒಟ್ಟಾರೆಯಾಗಿ ರಾಷ್ಟ್ರೀಯ ಹೆದ್ದಾರಿಯ ವ್ಯವಸ್ಥೆ ಶಿಸ್ತಿನ ಸಂಚಾರಿ ವ್ಯವಸ್ಥೆಯ ಹೊಣೆ ಹೊತ್ತವರು ಯಾರು? ಈ ಬಗ್ಯೆ ಸೂಕ್ತ ಉತ್ತರ ಪಡೆಯಬೇಕಾಗಿದೆ. ಅಪಘಾತವಾದ ಮೇಲೆ ಪೊಲೀಸ್ ಇಲಾಖೆಯ ಜವಾಬ್ದಾರಿ ಇರುತ್ತದೆ. ಸುವ್ಯವಸ್ಥಿತ ಸಂಚಾರಕ್ಕೆ ರಸ್ತೆ ಸಾರಿಗೆ ಇಲಾಖೆಯ ಪಾತ್ರ ಎಷ್ಟಿದೆ? ಅಪಘಾತವಾದ ಮೇಲೆ ಗಾಯಾಳುಗಳು ಮತ್ತು ಮೃತಪಟ್ಟವರ ಬಗ್ಯೆ ವ್ಯವಸ್ಥೆಯಾರು ಮಾಡುತ್ತಾರೆ? ಅಪಘಾತವಾದ ಮೇಲೆ ಅನೇಕ ಮಂದಿ ಆಸ್ಪತ್ರೆಯ ದೊಡ್ಡ ಮೊತ್ತದ ಬಿಲ್ಲನ್ನು ಹಿಡಿದುಕೊಂಡು ಧರ್ಮಸ್ಥಳಕ್ಕೆ ಬಂದು ಸಹಾಯಯಾಚಿಸುತ್ತಾರೆ. ಅವರಿಗೆ ಆಸ್ಪತ್ರೆ ಬಿಲ್ ಪಾವತಿಸಲು ವಿಮಾ ನಿಗಮದಿಂದ ತಕ್ಷಣ ಹಣ ಸಿಗುವುದಿಲ್ಲ. ನ್ಯಾಯವಾದಿಗಳ ಮೂಲಕ ತಿಂಗಳುಗಟ್ಟಲೆ ಅಥವಾ ಇನ್ನೂ ಹೆಚ್ಚು ಕಾಲ ನ್ಯಾಯಾಲಯದ (ಕೋರ್ಟ್) ಮೂಲಕ ಪರಿಹಾರದ ಮೊತ್ತವನ್ನು ಪಡೆಯಬೇಕಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿ ಸೂಕ್ತ ವ್ಯವಸ್ಥೆ ಆಗಬೇಕು. ರಸ್ತೆ ನಿರ್ಮಾಣವಾದ ಮೇಲೆ ಸಂಚಾರದ ಸುವ್ಯವಸ್ಥೆಗೆ ಯಾರು ಹೊಣೆ ಎಂದು ನಿರ್ಧಿಷ್ಟವಾದ ಇಲಾಖೆ ಗುರುತಿಸಿಕೊಳ್ಳಬೇಕು. ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಬೇಕು.
ಸುಗಮ ಸಂಚಾರಕ್ಕಾಗಿ ಸೂಕ್ತ ನಿರ್ದೇಶನಾ ಫಲಕಗಳನ್ನು ಹಾಕಬೇಕು. ಕಾನೂನು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲು ಅಥವಾ ಎಚ್ಚರಿಕೆಕೊಡಲು ವ್ಯವಸ್ಥೆಯಾಗಬೇಕು.
ವಿದೇಶದ ನಗರಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಸಂಬಂಧಪಟ್ಟ ಇಲಾಖೆಯವರು ತಮ್ಮ ಕಂಟ್ರೋಲ್ ರೂಮಿನಿಂದಲೇ ತಪ್ಪಿತಸ್ಥರನ್ನು ಗುರುತಿಸಿ ಎಚ್ಚರಿಕೆ ಕೊಟ್ಟುದಂಡ ಹಾಕುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ಇಲ್ಲಿಯೂ ಆಗಬೇಕು.ಶಿಸ್ತು ಪಾಲಿಸಲು ಪ್ರಜೆಗಳು ಕರ್ತವ್ಯವೆಂದು ಪಾಲಿಸಬೇಕು. ಅದರೊಂದಿಗೆ ಕಾನೂನಿನ ಭಯವೂ ಇರಲೇಬೇಕು.
ವಿದೇಶಗಳಲ್ಲಿ ವಾಹನದ ಸಣ್ಣ ಲೈಟ್‍ಗಳು ಹಗಲಿನಲ್ಲೂ (ವಾಹನದ ಎಂಜಿನ್ ಚಾಲೂ ಆದರೆ) ಉರಿಯುವಂತೆ ವ್ಯವಸ್ಥೆ ಇದೆ. ತೀರಾ ತಡವಾಗಿಯಾದರೂ ಭಾರತದಲ್ಲಿ ನಿರ್ಮಾಣವಾಗುವ ಆಧುನಿಕ ವಾಹನಗಳಲ್ಲಿ ಇದೀಗ ಸದಾ ಉರಿಯುತ್ತಿರುವ ಬೆಳಕಿನ ವ್ಯವಸ್ಥೆಇದೆ.
ಸದ್ಯರಸ್ತೆಯಲ್ಲಿ ಓಡಾಡುವ ದ್ವಿಚಕ್ರದಿಂದ ಹಿಡಿದು ಎಲ್ಲಾ ವಾಹನಗಳಲ್ಲೂ ಈ ವ್ಯವಸ್ಥೆ ಜಾರಿಯಾಗಬೇಕು. ಮಳೆ ಇದ್ದಾಗ ಮತ್ತು ಸಂಜೆ ಹೊತ್ತಿನಲ್ಲಿ ಬೆಳಕು ಪೂರ್ತಿಯಾಗಿ ಕಡಿಮೆಯಾದರೂ “ಭೂತ”ಗಳಂತೆ ಲೈಟ್ ಇಲ್ಲದ ವಾಹನವನ್ನು ಚಾಲಕರು ಓಡಿಸುತ್ತಾರೆ. ಈ ಬೆಳಕಿನ ವ್ಯವಸ್ಥೆಯಿಂದ ನಾವು ಪ್ರಯಾಣಿಸುವ ವಾಹನಕ್ಕೂ ಮುಂದೆ ಬರುವ ವಾಹನಕ್ಕೂ ಇರುವ ಅಂತರವನ್ನು ಗಮನಿಸಬಹುದು. ವಾಹನಗಳನ್ನು ಹಿಂದಿಕ್ಕುವಾಗ ಮುಂದೆ ಬರುವ ವಾಹನಕ್ಕಿರುವ ಅಂತರವನ್ನು ಗುರುತಿಸಿ ಅಪಾಯತಪ್ಪಿಸಬಹುದು. ಚಾಲನೆಯಲ್ಲಿ ಲೈಟ್ ಹಾಕುವುದು ಕಡ್ಡಾಯವಾಗಬೇಕು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಥವಾ ಮೂರು ಟ್ರಾಕ್‍ಗಳಿರುತ್ತವೆ. ಇವುಗಳಲ್ಲಿ ವಿಭಾಜಕ ಮಧ್ಯದಲ್ಲಿ ಮೊದಲನೆ ರಸ್ತೆಯಲ್ಲಿ ವೇಗವಾಗಿ ಹೋಗುವ ವಾಹನಗಳಿಗೆ ನಿಗದಿಪಡಿಸಲಾಗಿದೆ. ಹೆಚ್ಚು ಭಾರ ಹೊರುವ ಘನ ವಾಹನಗಳು ಮತ್ತು ಮೊದಲನೆ ರಸ್ತೆಯಲ್ಲಿ ತನ್ನ ವಾಹನಕ್ಕಿಂತ ವೇಗವಾಗಿ ಹೋಗುವ ವಾಹನಗಳಿಗೆ ದಾರಿ ಮಾಡಿಕೊಡಲು ಎರಡನೆ ರಸ್ತೆ ಉಪಯೋಗವಾಗುತ್ತದೆ. ಇನ್ನು ರಿಕ್ಷಾ ಮತ್ತು ನಿಧಾನಗತಿಯಲ್ಲಿ ಹತ್ತಿರದ ಪ್ರದೇಶಗಳಿಗೆ ಹೋಗುವ ವಾಹನಗಳು, ದ್ವಿಚಕ್ರ ಮತ್ತು ನಿಧಾನವಾಗಿ ಚಲಿಸುವ ಟ್ರಾಕ್ಟರ್‍ಗಳು ಇತ್ಯಾದಿ ಮೂರನೆ ರಸ್ತೆಯಲ್ಲಿ ಹೋಗುತ್ತವೆ.
ಆದರೆ ಸದ್ಯ ಎಲ್ಲೆಲ್ಲೂ ಇದರ ವ್ಯತಿರಿಕ್ತವಾಗಿ, ತಮಗಿಷ್ಟ ಬಂದಂತೆ ಚಾಲಕರು ಹೆದ್ದಾರಿಯನ್ನು ಬಳಸುತ್ತಾರೆ.
ಮೊದಲನೆ ರಸ್ತೆಯಲ್ಲಿ ನಿಧಾನವಾಗಿ ಹೋಗಲು ಹಾಗೂ ಹತ್ತಿರದ ಸ್ಥಳಗಳಿಗೆ ಹೋಗುವವರು ಸಂಚರಿಸುತ್ತಿದ್ದರೆ, ಎರಡನೆ ರಸ್ತೆಯಲ್ಲಿ ಅನಿವಾರ್ಯವಾಗಿ ಮೊದಲನೆ ಮತ್ತು ಕೊನೆಯ ರಸ್ತೆಗಳನ್ನು ಬಳಸಿಕೊಳ್ಳುವವರನ್ನು ತಪ್ಪಿಸಿಕೊಂಡು ಹೋಗುತ್ತಾರೆ.
ಘನ ಸರ್ಕಾರದ ಸಂಬಂಧಪಟ್ಟ ಇಲಾಖೆಯವರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈ ಬಗ್ಯೆತಕ್ಷಣ ಸೂಕ್ತ ವ್ಯವಸ್ಥೆಗಳನ್ನು ಪರಿವರ್ತನೆ ಮಾಡಿರಸ್ತೆಯಲ್ಲಿ ಸಂಚರಿಸುವ ಚಾಲಕರಿಗೂ, ಪ್ರಯಾಣಿಕರಿಗೂ ನೆಮ್ಮದಿಯ ಸಂಚಾರ ವ್ಯವಸ್ಥೆಯನ್ನು ಮಾಡಿಕೊಡಬೇಕು. ಜವರಾಯನ ಕರೆಯನ್ನು ಆಯುಷ್ಯ ಮುಗಿಯದೆಯೇ ಮನ್ನಿಸಬೇಕಾದ ಅವಸ್ಥೆಯನ್ನು ತಪ್ಪಿಸಬೇಕು.
ನಿತ್ಯವೂ ಅಪಘಾತದಿಂದ ಸತ್ತವರ ಕುಟುಂಬಗಳ ಸ್ಥಿತಿಗತಿಗಳಿಂದ ಆಗುವ ನೋವನ್ನು, ದೀರ್ಘಕಾಲ ಪಡಬೇಕಾದ ಸಂಕಟವನ್ನು ಪರಿಹರಿಸಬೇಕು.


Spread the love
1 Comment
Inline Feedbacks
View all comments
8 years ago

a very good article. all should read and follow.

wpDiscuz
Exit mobile version