ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಆದ್ಯತೆಯ ಮೇಲೆ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Spread the love

ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಆದ್ಯತೆಯ ಮೇಲೆ ಪೂರ್ಣಗೊಳಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಹೆದ್ದಾರಿ ರಸ್ತೆ ಕಾಮಗಾರಿಗಳನ್ನು ಆಧುನಿಕ ತಂತ್ರಜ್ಞಾನ ಯಂತ್ರಗಳ ಬಳಕೆ ಹಾಗೂ ಹೆಚ್ಚು ಕಾರ್ಮಿಕರುಗಳನ್ನು ನಿಯೋಜಿಸುವುದರೊಂದಿಗೆ ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಆದ್ಯತೆಯ ಮೆರೆಗೆ ಪೂರ್ಣಗೊಳಿಸಲು ಮುಂದಾಗಬೇಕೆಂದು ಅಭಿಯಂತರುಗಳಿಗೆ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಸಂತೆ ಕಟ್ಟೆ ಅಂಡರ್ಪಾಸ್, ಇಂದ್ರಾಳಿ ಸೇತುವೆ, ಕರಾವಳಿ ಜಂಕ್ಷನ್ನಿಂದ ಮಲ್ಪೆ ರಸ್ತೆ, ಪರ್ಕಳದಿಂದ ಆಗುಂಬೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳು ಮಂದಗತಿಯಲ್ಲಿದ್ದು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿವೆ ಎಂಬ ದೂರುಗಳು ಪ್ರತಿನಿತ್ಯ ಕೇಳಿಬರುತ್ತಿದೆ. ಕಾಮಗಾರಿಯ ವೇಗವನ್ನು ಹೆಚ್ಚಿಸುವುದರೊಂದಿಗೆ ಅಲ್ಪ ಸಮಯದಲ್ಲಿ ಪೂರ್ಣಗೊಳಿಸಲು ಅಧಿಕಾರಿ ಹಾಗೂ ಗುತ್ತಿಗೆದಾರರು ಕಾರ್ಯಪ್ರವೃತರಾಗಬೇಕು ಎಂದರು.

ಸಂತೆಕಟ್ಟೆ ಬಳಿ ರಸ್ತೆ ಕಾಮಗಾರಿಯು ದಿನವೊಂದಕ್ಕೆ 10 ಮೀಟರ್ ಸಹ ಆಗುತ್ತಿಲ್ಲ. ಈ ರೀತಿ ಕಾಮಗಾರಿಯನ್ನು ಮಾಡಿದರೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗುತ್ತದೆ. ಈ ಬಗ್ಗೆ ಇಂಜಿನಿಯರ್ಗಳು ನಿಗಾವಹಿಸಬೇಕು ಎಂದರು.

ಕರಾವಳಿ ಬೈಪಾಸಿನಿಂದ ಮಲ್ಪೆ ವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಆಗತ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಭೂಮಿಯ ಮಾಲೀಕರಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪರಿಹಾರ ಒದಗಿಸಿ ಸಾಮಾಜಿಕ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಳ್ಳದ ಬಗ್ಗೆ ಸಾರ್ವಜನಿಕರಿಗೆ ಬೇಸರ ಉಂಟಾಗಿದೆ. ಈ ಕಾಮಗಾರಿಯನ್ನು ಸಹ ಆದ್ಯತೆ ಮೇಲೆ ಕೈಗೊಳ್ಳಬೇಕು. ಸಾಧ್ಯವಾದಷ್ಟು ಶೀಘ್ರದಲ್ಲೆ ಪೂರ್ಣಗೊಳಿಸಲು ಮುಂದಾಗಬೇಕು ಎಂದರು.

ಪರ್ಕಳದಲ್ಲಿ ರಸ್ತೆ ಕಾಮಗಾರಿಕೆ ಅಗ್ಯತವಿರುವ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು, ಸಾಣೂರು-ಬಿಕ್ಕರ್ನಕಟ್ಟೆ ರಸ್ತೆ ಅಭಿವೃದ್ಧಿಗೆ ಬೇಕಿರುವ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡು ಅಲ್ಲಿ ಇರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಯನ್ನು ಪಡೆದು ಕಾಮಗಾರಿಗಳನ್ನು ಪಾರಂಭಿಸಲು ಸೂಚಿಸಿದರು.

ಹೆಜಮಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ದಾರಿ ದೀಪಗಳು ಅಳವಡಿಕೆ, ಅವುಗಳ ನಿರ್ವಹಣೆ ಮಾಡಬೇಕು. ತಪ್ಪಿದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಇದಕ್ಕೆ ಆಸ್ಪದ ನೀಡಬಾರದು ಎಂದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿಯಿಂದ ಹಾಳಾಗಿರುವ ಒಳಚರಂಡಿಗಳ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ನಗರಸಭಾ ಸದಸ್ಯರಾದ ಗಿರೀಶ್ ಕಾಂಚನ್ ಹಾಗೂ ಸುಂದರ್ ಜೆ ಕಲ್ಮಾಡಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love