ಹೆಮ್ಮಾಡಿಯ ಜನತೆ ಅರ್ಥಪೂರ್ಣ ದೀಪಾವಳಿ ಆಚರಿಸಿದ್ದಾರೆ: ಪತ್ರಕರ್ತ ಕೆ.ಸಿ ರಾಜೇಶ್
ಕುಂದಾಪುರ: ನಾವೆಲ್ಲ ಈ ದಿನ ನಿಶ್ಚಿಂತೆಯಿಂದ ಮನೆಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಆಚರಿಸುತ್ತಿರುವುದಕ್ಕೆ ದೇಶದ ಗಡಿಯಲ್ಲಿ ಹಗಲಿರುಳು ಕಾಯುವ ಯೋಧರು ಕಾರಣ. ಸೇನೆಗೆ ಸೇರುವ ಮೂಲಕ ಹೆಮ್ಮಾಡಿಯ ಹೆಮ್ಮೆಯಾಗಿರುವ ಸುನೀತಾ ಪೂಜಾರಿ ಅವರನ್ನು ಗೌರವಿಸುವುದರೊಂದಿಗೆ ಹೆಮ್ಮಾಡಿಯ ಜನ ಈ ದಿನ ಅರ್ಥಪೂರ್ಣ ದೀಪಾವಳಿ ಆಚರಿಸಿದ್ದಾರೆ ಎಂದು ಗೃಹ ರಕ್ಷಕ ದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್, ಪತ್ರಕರ್ತ ಕೆ.ಸಿ. ರಾಜೇಶ್ ಹೇಳಿದರು.
ಭಾರತದ ಗಡಿ ಭದ್ರತಾ ಪಡೆಗೆ ಸೇರ್ಪಡೆಗೊಂಡು, ಪಂಜಾಬ್‌ನ ಬಿಎಸ್‌ಎಫ್ ಶಿಬಿರದಲ್ಲಿ 11 ತಿಂಗಳ ಕಾಲ ತರಬೇತಿ ಮುಗಿಸಿ, ದೇಶದ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡು ಮೊದಲ ಬಾರಿಗೆ ಊರಿಗೆ ಆಗಮಿಸಿದ ಹೆಮ್ಮಾಡಿ ಸುನೀತಾ ಪೂಜಾರಿ ಅವರಿಗೆ ಊರವರ ಪರವಾಗಿ ಭಾನುವಾರ ಹೆಮ್ಮಾಡಿ ರಿಕ್ಷಾ ನಿಲ್ದಾಣದ ಬಳಿ ಆಯೋಜಿಸಲಾದ ಹುಟ್ಟೂರ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಮ್ಮಾಡಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಮಾತನಾಡಿ, ಈ ಇಬ್ಬರು ಯುವತಿಯರು ಊರಿನ ಇನ್ನಷ್ಟು ಮಕ್ಕಳಿಗೆ, ಯುವಕರಿಗೆ ಸೇನೆ ಸೇರಲು ಪ್ರೇರಕ ಶಕ್ತಿಯಾಗಲಿ. ಊರವರ ಈ ಅಭಿಮಾನವೇ ಆಕೆಯ ಸೇನೆಯ ಕಾರ್ಯಕ್ಕೆ ಇನ್ನಷ್ಟು ಪ್ರೇರಣೆಯಾಗಲಿದೆ. ಸುನೀತಾ ಪೂಜಾರಿಯವರನ್ನು ಧೈರ್ಯದಿಂದ ದೇಶ ಸೇವೆಗೆ ಕಳುಹಿಸಿದ ತಂದೆ – ತಾಯಿ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ ಎಂದರು.
ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುನೀತಾ ಪೂಜಾರಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ಓದಿಸಲು ಅಮ್ಮ ಬಹಳಷ್ಟು ಕಷ್ಟಪಟ್ಟಿದ್ದಾರೆ. ನಾನು ಈಗ ಈ ಹಂತಕ್ಕೆ ಬರುವಲ್ಲಿ, ಸೇನೆಗೆ ಸೇರುವಲ್ಲಿ ನನಗೆ ಅಮ್ಮನೇ ಪ್ರೇರಕ ಶಕ್ತಿ. ಒಬ್ಬಳೇ ಮಗಳಾದರೂ ಸೇನೆಗೆ ಹೋಗಬೇಡ ಎಂದು ಹೇಳಿಲ್ಲ. ನೀನು ಖಂಡಿತ ಇದನ್ನು ಸಾಧಿಸುತ್ತೀಯಾ ಎಂದು ಅಮ್ಮ ಧೈರ್ಯ ತುಂಬಿ ಕಳುಹಿಸಿದ್ದರಿಂದಲೇ ನಾನು ಈ ಯಶಸ್ಸು ಪಡೆಯುವಂತಾಯಿತು. ಏನಾದರೊಂದು ಸಾಧನೆ ಮಾಡಬೇಕು ಎನ್ನುವ ಹಂಬಲ ನನಗೆ ಚಿಕ್ಕಂದಿನಿಂದಲೇ ಇತ್ತು. ಅದಕ್ಕಾಗಿ ಪೊಲೀಸ್, ಅಂಚೆ ಪರೀಕ್ಷೆ ಎಲ್ಲಾ ಬರೆದೆ. ಆದರೆ ಯಶಸ್ಸು ಸಿಗಲಿಲ್ಲ. ಹಾಗಂತ ಪ್ರಯತ್ನ ಮಾತ್ರ ಬಿಡಲಿಲ್ಲ. ಬಿಎಸ್‌ಎಫ್ ಪರೀಕ್ಷೆಯಲ್ಲಿ ಪಾಸಾದೆ. ತರಬೇತಿ ಪಡೆದು, ಈಗ ದೇಶ ಸೇವೆಯ ನನ್ನ ಕನಸು ಸಾಕಾರಗೊಳ್ಳುತ್ತಿದೆ ಈ ನನ್ನ ಯಶಸ್ಸಿನಲ್ಲಿ ಮನೆಯವರು, ಕುಟುಂಬಸ್ಥರು, ಊರ ಅನೇಕರು ನೆರವಾಗಿದ್ದಾರೆ. ಊರವರ ಈ ಪ್ರೀತಿ, ಮನೆ ಮಗಳಂತೆ ಕಾಣುವ ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ನಿಮ್ಮೆಲ್ಲರ ಗೌರವಕ್ಕೆ ಕೃತಜ್ಞತೆಗಳು ಎಂದರು.
ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಭಟ್ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಶಾಲಾ ಶಿಕ್ಷಕಿ ಪ್ರತಿಮಾ ಆರ್. ಮೊಗವೀರ, ಜೆಸಿಐ ಕುಂದಾಪುರ ಸಿಟಿ ನಿಯೋಜಿತ ಅಧ್ಯಕ್ಷ ರಾಘವೇಂದ್ರ ಕುಲಾಲ್, ಗ್ರಾ.ಪಂ. ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ, ಮಾಜಿ ಸದಸ್ಯ ಸಯ್ಯದ್ ಯಾಸೀನ್ ಸಂತೋಷನಗರ, ಉದ್ಯಮಿ ಅಬ್ಬಾಸ್, ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ರವಿ ಕೆ., ಹೆಮ್ಮಾಡಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಸುನೀತಾ ತಾಯಿ ಗಂಗಾ, ಸಹೋದರ ಸುನೀಲ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ನಾರಾಯಣ ಪೂಜಾರಿ, ಬಾಬು ಪೂಜಾರಿ ಶಿರೂರು, ಸುನೀತಾ ಸಹೋದ್ಯೊಗಿ ಕಲ್ಕತ್ತಾದ ಆಯಂತಿಕಾ ಅವರನ್ನು ಗೌರವಿಸಲಾಯಿತು.
ಊರಿನ ಅನೇಕ ಮಂದಿ ಸೇರಿ ಕುಂದಾಪುರದಿಂದ ತಲ್ಲೂರು ಮೂಲಕವಾಗಿ ತೆರೆದ ವಾಹನದಲ್ಲಿ ಸುನೀತಾ ಪೂಜಾರಿ ಅವರನ್ನು ಮೆರವಣಿಗೆ ಮೂಲಕ ಹೆಮ್ಮಾಡಿಗೆ ಕರೆತರಲಾಯಿತು. ಬಳಿಕ ಗ್ರಾಮ ದೇವರಾದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆ ಬಳಿಕ ಹೆಮ್ಮಾಡಿಯ ಶ್ರೀ ಲಕ್ಷ್ಮಿ ನಾರಾಯಣ ರಿಕ್ಷಾ ನಿಲ್ದಾಣದಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಸಮ್ಮಾನಿಸಲಾಯಿತ
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಸ್ವಾಗತಿಸಿ, ವಸಂತ ಹೆಮ್ಮಾಡಿ ಕಾರ್‍ಯಕ್ರಮ ನಿರೂಪಿಸಿದರು.