ಹೆಮ್ಮಾಡಿ ಪಂಚಗಂಗಾ ಸೊಸೈಟಿ ಚುನಾವಣೆ: 13 ಸ್ಥಾನಗಳಲ್ಲಿಯೂ ಕಾಂಗ್ರೆಸ್ ಗೆ ಗೆಲುವು!
ಕುಂದಾಪುರ: ಭಾನುವಾರ ನಡೆದ ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ(ರಿ.)ದ ಚುನಾವಣೆಯಲ್ಲಿ 13ಕ್ಕೆ 13 ಸ್ಥಾನಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಕಳೆದ ಅವಧಿಯಲ್ಲೂ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶತಾಯಗತಾಯ ಪೈಪೋಟಿ ನಡೆಸಿತ್ತು. ಆದರೂ ಕೂಡ ಈ ಹಿಂದಿನ ಅಧಿಕಾರಾವಧಿಯಲ್ಲಿ ಸದಸ್ಯರು ಜನರಿಗೆ ನೀಡಿದ ಸೇವೆ ಈ ಬಾರಿ ಮತವಾಗಿ ಪರಿವರ್ತನೆಗೊಂಡಿದ್ದು ಕೈ ಗೆಲುವಿನ ನಗೆ ಬೀರಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಮೆರವಣಿಗೆ:
ಗೆಲುವಿನ ಸುದ್ದಿಯನ್ನು ಚುನಾವಣಾಧಿಕಾರಿಗಳು ಪ್ರಕಟಿಸುತ್ತಲೇ ಕೈ ಬೆಂಬಲಿಗರ ಹರ್ಷ ಮುಗಿಲುಮುಟ್ಟಿತು. ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡ ವಿಜೇತ ಅಭ್ಯರ್ಥಿಗಳು, ಬಳಿಕ ಕಾರ್ಯಕರ್ತರೊಂದಿಗೆ ಪೇಟೆಯವರೆಗೆ ಮೆರವಣಿಗೆ ಮೂಲಕ ಸಾಗಿದರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದಲ್ಲದೇ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಪರ ಘೋಷಣೆ ಕೂಗಿ ಗೆಲುವಿನ ಉತ್ಸಾಹ ಪ್ರದರ್ಶಿಸಿದರು.
ಗೆಲುವಿನ ಸರದಾರರು:
ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ರಾಘವೇಂದ್ರ ಪೂಜಾರಿ, ಚಂದ್ರಮತಿ ಹೆಗ್ಡೆ, ಸುನೀತಾ ಪೂಜಾರಿ, ಸಂಜೀವ ಹಕ್ಲಾಡಿ, ಶಾರದಾ, ಆನಂದ ಬಿಲ್ಲವ ಉಪ್ಪಿನಕುದ್ರು, ಚಂದ್ರ ಪೂಜಾರಿ, ಚಂದ್ರ ಎಸ್ ನಾಯ್ಕ್, ತಮ್ಮಯ್ಯ ದೇವಾಡಿಗ, ಸಂತೋಷ್ ಕುಮಾರ್ ಶೆಟ್ಟಿ ತೋಟಬೈಲು, ಸುಧಾಕರ ಎನ್ ದೇವಾಡಿಗ.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿ, ಮುಖಂಡರಾದ ರಘುರಾಮ್ ದೇವಾಡಿಗ ಆಲೂರು, ಸತ್ಯನಾರಾಯಣ ರಾವ್, ಹರೀಶ್ ತೋಳಾರ್, ಹರೀಶ್ ಕೊಡ್ಪಾಡಿ, ಸಾಧು ಎಸ್ ಬಿಲ್ಲವ, ಎಚ್. ಹಸನ್ ಸಾಹೇಬ್, ಕೃಷ್ಣಮೂರ್ತಿ ರಾವ್, ನಾಗರಾಜ್ ಪುತ್ರನ್, ರಾಜು ಪೂಜಾರಿ ಕಾಳೂರಮನೆ, ಜೋಗ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.