Home Mangalorean News Kannada News ಹೊರದೇಶಗಳಲ್ಲಿ ದುಡಿಯುವವರ ಸಮಸ್ಯೆ ಪರಿಹಾರಕ್ಕೆ ಎನ್.ಆರ್.ಐ ಸೆಲ್ – ಭೂ ಬಾಲನ್

ಹೊರದೇಶಗಳಲ್ಲಿ ದುಡಿಯುವವರ ಸಮಸ್ಯೆ ಪರಿಹಾರಕ್ಕೆ ಎನ್.ಆರ್.ಐ ಸೆಲ್ – ಭೂ ಬಾಲನ್

Spread the love

ಹೊರದೇಶಗಳಲ್ಲಿ ದುಡಿಯುವವರ ಸಮಸ್ಯೆ ಪರಿಹಾರಕ್ಕೆ ಎನ್.ಆರ್.ಐ ಸೆಲ್ – ಭೂ ಬಾಲನ್

ಉಡುಪಿ: ಹೊರದೇಶಗಳಲ್ಲಿ ದುಡಿಯುತ್ತಿರುವ ಜಿಲ್ಲೆಯ ಜನರು , ಹೊರದೇಶದಲ್ಲಿ ಯಾವುದೇ ಸಮಸ್ಯೆಗಳಲ್ಲಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎನ್.ಆರ್.ಐ. ಸೆಲ್‍ನ ಮೂಲಕ ನೆರವು ಪಡೆಯುವಂತೆ ಅನಿವಾಸಿ ಭಾರತೀಯರ ಹಿತರಕ್ಷಣಾ ಸಮಿತಿಯ ಸಂಚಾಲಕರು ಮತ್ತು ಕುಂದಾಪುರ ಉಪ ವಿಭಾಗಾಧಿಕಾರಿ ಭೂ ಬಾಲನ್ ತಿಳಿಸಿದ್ದಾರೆ.

ಅವರು ಮಂಗಳವಾರ, ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ , ಜಿಲ್ಲಾಡಳಿತ ಹಾಗೂ ಅನಿವಾಸಿ ಭಾರತೀಯ ಹಿತರಕ್ಷಣಾ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ನಡೆದ , ಹೊರದೇಶಗಳಲ್ಲಿ ದುಡಿಯುವ ಅವಿದ್ಯಾವಂತ ಕಾರ್ಮಿಕರ ಹಿತರಕ್ಷಣೆಯಲ್ಲಿ ಸಂಘ ಸಂಸ್ಥೆಗಳ ಹಾಗೂ ಸರಕಾರಿ ಅಧಿಕಾರಿಗಳ ಪಾತ್ರ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೊರದೇಶದಲ್ಲಿ ಉದ್ಯೋಗಕ್ಕಾಗಿ ಜಿಲ್ಲೆಯ ಬಹಳ ಮಂದಿ ತೆರಳಿದ್ದು, ಅವರಲ್ಲಿ ವಿದ್ಯಾವಂತರು, ಅವಿದ್ಯಾವಂತರು, ತಾಂತ್ರಿಕ ಪರಿಣಿತಿ ಹೊಂದಿರುವವರು, ಅಕುಶಲ ಕಾರ್ಮಿಕರು, ಪುರುಷರು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಇದ್ದಾರೆ, ಆದರೆ ಅಲ್ಲಿಗೆ ತೆರಳುವ ಬಹಳ ಮಂದಿಗೆ ಅಲ್ಲಿನ ದೇಶದ ಕಾನೂನು ಕುರಿತ ಅರಿವು ಇಲ್ಲದೇ , ಅಲ್ಲಿ ಸಮಸ್ಯೆಗಳಿಗೆ ಒಳಗಾದಾಗ ಯಾರನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು ಎನ್ನುವ ಮಾಹಿತಿ ಇಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಾರೆ ಆದ್ದರಿಂದ ಹೊರದೇಶದಲ್ಲಿ ದುಡಿಯುತ್ತಿರುವವರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಎನ್.ಆರ್.ಐ.ಸೆಲ್ ನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಭೂ ಬಾಲನ್ ತಿಳಿಸಿದರು.

ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ಪ್ರತಿಯೊಂದು ದೇಶವು ತನ್ನದೇ ಆದ ಕಾನೂನುಗಳನ್ನು ಹೊಂದಿದ್ದು, ಉದ್ಯೋಗಕ್ಕಾಗಿ ಆ ದೇಶಗಳಿಗೆ ತೆರಳುವ ಜನ ಅವುಗಳನ್ನು ಪಾಲನೆ ಮಾಡಬೇಕಾಗುತ್ತದೆ, ಉಡುಪಿ ಜಿಲ್ಲೆಯ ಸುಮಾರು 2 ರಿಂದ 3 ಸಾವಿರ ಮಂದಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಹುತೇಕ ಮಂದಿ ಅಲ್ಲಿಗೆ ತೆರಳುವಾಗ ಖಾಸಗಿ ಏಜೆಂಟರುಗಳ ಮೂಲಕ ತೆರಳುತ್ತಾರೆ ಖಾಸಗಿ ಏಜೆಂಟರುಗಳ ಮೂಲಕ ವಿದೇಶಕ್ಕೆ ತೆರಳಿದರೆ , ವಿದೇಶದಲ್ಲಿನ ಅವರ ಔದ್ಯೋಗಿಕ ಮಾಹಿತಿ ಪಡೆಯುವುದು ಕಷ್ಟ. ವಿದೇಶದಲ್ಲಿ ಉದ್ಯೋಗ ಒದಗಿಸುವ ಸಂಸ್ಥೆಗಳು ನೊಂದಣಿಯಾಗಿರಬೇಕು, ಈ ನೊಂದಣಿ ಮಾಡಲು 8 ಲಕ್ಷ ರೂ ಗಳ ನಿಶ್ಚಿತ ಠೇವಣಿ ಹಗೂ 50 ಲಕ್ಷ ರೂ ಗಳ ಬ್ಯಾಂಕ್ ಖಾತ್ರಿ ನೀಡಬೇಕಾಗುತ್ತದೆ ಹಾಗೂ ತಾವು ಉದ್ಯೋಗ ಒದಗಿಸಿದ ನೌಕರರ ವಿವರಗಳನ್ನು ಪ್ರತಿ ತಿಂಗಳು ಸಲ್ಲಿಸಬೇಕಾಗುತ್ತದೆ ಆದರೆ ರಾಜ್ಯದಲ್ಲಿ ಯಾವುದೇ ನೊಂದಾಯಿತ ವಿದೇಶದಲ್ಲಿ ಉದ್ಯೋಗ ಒದಗಿಸುವ ಸಂಸ್ಥೆಗಳು ಇಲ್ಲ ಎಂದು ಡಾ.ಶಾನುಭಾಗ್ ಹೇಳಿದರು.

ವಿದೇಶದಲ್ಲಿ ಉದ್ಯೋಗಿಗಳಾಗಿದ್ದ ಅನಿವಾಸಿ ಭಾರತೀಯರು, ಅಲ್ಲಿನ ಕಾನೂನುಗಳಿಂದ ಎದುರಿಸಿದ ಸಮಸ್ಯೆಗಳು ಮತ್ತು ಸಂಘ ಸಂಸ್ಥೆಗಳ ನೆರವಿನ ಮೂಲಕ ಅವರು ಸಮಸ್ಯೆಗಳಿಂದ ಮುಕ್ತವಾದ ಕುರಿತು ಡಾ. ಶಾನುಭಾಗ್ ವಿವರಿಸಿದರು.

ವಿದೇಶಗಳಲ್ಲಿ ದುಡಿಯುಲು ತೆರಳುವ ಜಿಲ್ಲೆಯ ಜನತೆ , ವಿದೇಶಗಳಲ್ಲಿ ಎದುರಿಸಬಹುದಾದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರ ಮತ್ತು ಸರಕಾರದಿಂದ ಪಡೆಯಬಹುದಾದ ನೆರವು ಕುರಿತ ಸೂಕ್ತ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ, ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಡಾ.ಶಾನುಭಾಗ್ ಹೇಳಿದರು.

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ್ ಕಣಿವೆ ಉಪಸ್ಥಿತರಿದ್ದರು.


Spread the love

Exit mobile version