ಹೊರರಾಜ್ಯ, ಹೊರಜಿಲ್ಲೆಗಳ 27 ಮಂದಿ ವಾರಂಟು ಆಸಾಮಿಗಳ ಬಂಧನ

Spread the love

ಹೊರರಾಜ್ಯ, ಹೊರಜಿಲ್ಲೆಗಳ 27 ಮಂದಿ ವಾರಂಟು ಆಸಾಮಿಗಳ ಬಂಧನ

ಉಡುಪಿ : ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿಶೇಷ ಕಾರ್ಯಾಚರಣೆ ನಡೆಸಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ, ಒಟ್ಟು 27 ವಾರಂಟು ಆಸಾಮಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ತಂಡ ಪತ್ತೆ ಹಚ್ಚಿ ಬಂಧಿಸಿದೆ.

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜ್ಯಾರಿಯಾಗದೇ ಬಾಕಿ ಇರುವ ವಾರಂಟುಗಳ ಪರಾಮರ್ಶೆಯನ್ನು ನಡೆಸಿ, ಅವುಗಳನ್ನು ಪತ್ತೆ ಹಚ್ಚುವ ಸಲುವಾಗಿ ಹೊರರಾಜ್ಯಗಳಿಗೆ ಪೊಲೀಸ್ ಉಪನಿರೀಕ್ಷಕರ ನೇತೃತ್ವದ ಮೂರು ತಂಡಗಳನ್ನು ಹಾಗೂ ಹೊರಜಿಲ್ಲೆಗಳಿಗೆ ಎ.ಎಸ್.ಐ. ನೇತೃತ್ವದ 5 ತಂಡಗಳನ್ನು ರಚಿಸಿ, ತಂಡಗಳನ್ನು ದಿನಾಂಕ 23/03/2019ರಂದು ಕಳುಹಿಸಲಾಗಿತ್ತು. ಹೊರರಾಜ್ಯಗಳಿಗೆ ಸಂಬಂಧಿಸಿದಂತೆ, ಮಧ್ಯಪ್ರದೇಶದ ಇಂದೋರ್‌ನಿಂದ ಇಬ್ಬರು, ಮಹಾರಾಷ್ಟ್ರದ ಸಾಂಗ್ಲಿಯಿಂದ ಓರ್ವ ಮತ್ತು ಕೇರಳದಿಂದ ಮೂವರನ್ನು ಪಿ.ಎಸ್.ಐ. ನೇತೃತ್ವದ ತಂಡ ಪತ್ತೆ ಹಚ್ಚಿದೆ. ಅದೇ ರೀತಿ ಹೊರಜಿಲ್ಲೆಗಳಿಗೆ ತೆರಳಿದ 5 ತಂಡಗಳು ಒಟ್ಟು 21 ವಾರಂಟು ಆಸಾಮಿಗಳನ್ನು ಬಂಧಿಸಿದ್ದು, ಒಟ್ಟಾರೆಯಾಗಿ 27 ಮಂದಿ ವಾರಂಟು ಆಸಾಮಿಗಳನ್ನು ಪತ್ತೆ ಹಚ್ಚಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಈ ಪೈಕಿ ಕೇರಳದ ಕಾಸರಗೋಡಿನಲ್ಲಿ ದಸ್ತಗಿರಿಯಾದ ಆರೋಪಿ ಅಮೀರ್ ಆಲಿ ಎಂಬಾತನು ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಬೈಂದೂರು ಠಾಣೆಗೆ ಸಂಬಂಧಿಸಿದ ಕಳವು ಪ್ರಕರಣದ ಪ್ರಧಾನ ಆರೋಪಿಯಾಗಿದ್ದಾನೆ. ಈತನನ್ನು ಮಣಿಪಾಲ ಠಾಣಾ ಪಿ.ಎಸ್.ಐ. ಆದ ಶ್ರೀ ಶ್ರೀಧರ ನಂಬಿಯಾರ್‌ರವರ ನೇತೃತ್ವದ ತಂಡ ಕಾಸರಗೋಡಿನಲ್ಲಿ ಬಂಧಿಸಿತು. ಇದೇ ಪ್ರಕರಣದ ಇನ್ನೋರ್ವ ಆರೋಪಿ ಕೆ.ಪಿ. ಯೂಸುಫ್ ಎಂಬಾತನು ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿಕೊಂಡ ತಂಡ, ಆತನ ಮರಣ ಪ್ರಮಾಣ ಪತ್ರವನ್ನು ಪಡಕೊಳ್ಳುವಲ್ಲಿ ಯಶಸ್ವಿಯಾಯಿತು.

ತಂಡಗಳ ಒಟ್ಟಾರೆ ನಿರ್ವಹಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು, ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಯವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.


Spread the love