ಹೊಸ ವರ್ಷದ ಆಚರಣೆ ; ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ – ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್

Spread the love

ಹೊಸ ವರ್ಷದ ಆಚರಣೆ ; ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ – ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್

ಮಂಗಳೂರು: ಹೊಸ ವರ್ಷದ ಆಚರಣೆ ಸಂಬಂಧ ಡಿ. 31/ಜ.1ರ ರಾತ್ರಿ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಿಗೆ, ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಅಗತ್ಯ ಸೂಚನೆಗಳನ್ನು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.

ಡಿ.31ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ಆಚರಿಸುವ ಯಾವುದೇ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳ ಮಾಲಕರು/ ವ್ಯವಸ್ಥಾಪಕರು/ ಆಡಳಿತ ವರ್ಗದವರು ಪೊಲೀಸ್ ಕಮಿಷನರ್ ಕಚೇರಿಯಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೆ ಕಾರ್ಯಕ್ರಮ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು. ಕಾರ್ಯಕ್ರಮ ಆಯೋಜಕರು ವಿವಿಧ ಇಲಾಖೆಗಳಿಂದ ಪಡೆದ ಪರವಾನಿಗೆಯಲ್ಲಿ ನೀಡಿದ ಶರ್ತಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕಾರ್ಯಕ್ರಮ ಆಯೋಜಕರು ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ವಾಹನ, ತುರ್ತು ಚಿಕಿತ್ಸಾ ವಾಹನ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಎಂದು ತಿಳಿಸಿದರು.

ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೊಟೇಲ್ಗಳಲ್ಲಿ ಸರಕಾರ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚುವರಿ ಸಮಯ ಮದ್ಯ ವಿತರಿಸಲು ಉದ್ದೇಶಿಸಿದರೆ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅನುಮತಿ ಪಡೆದ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಕಮಿಷನರ್ ಕಚೇರಿಗೆ ಸಲ್ಲಿಸುವುದು. ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಆಯೋಜಕರು ನೇಮಿಸಬೇಕು ಎಂದರು.

ಕಾರ್ಯಕ್ರಮ ನಡೆಸುವ ಸ್ಥಳದ ಮುಖ್ಯ ದ್ವಾರ, ಒಳ ಆವರಣ ಮತ್ತು ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಯಾವುದೇ ಸಮಯದಲ್ಲಿ ಅದರ ರೆಕಾರ್ಡಿಂಗ್/ ಫೂಟೇಜ್ ಪರಿಶೀಲನೆಗೆ ಲಭ್ಯವಿರಬೇಕು. ಬಾರ್, ಮದ್ಯದಂಗಡಿ ಮತ್ತು ಮದ್ಯ ವಿತರಿಸುವ ಸ್ಥಳಗಳಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಸಂಬಂಧ ಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುವುದು. ಹೊಸ ವರ್ಷಾಚರಣೆಯನ್ನು ನಡೆಸುವ ಹೊಟೇಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು, ಸಾರ್ವಜನಿಕ ರಸ್ತೆಯ ಮೇಲೆ ಪಾರ್ಕಿಂಗ್ ಮಾಡಿದಲ್ಲಿ ವ್ಯವಸ್ಥಾಪಕರ ಮೇಲೆ ಕ್ರಮ ಜರಗಿಸಲಾಗುವುದು. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದರು.

ಯಾವುದೇ ಅಹಿತಕರ ಘಟನೆಗಳಾಗದಂತೆ ಆಯೋಜಕರೇ ಮುಂಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದರೆ ವ್ಯವಸ್ಥಾಪಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಧ್ವನಿವರ್ಧಕಗಳನ್ನು ಬಳಸಿದರೆ ಶಬ್ದಮಿತಿಯು ರಾತ್ರಿ ವೇಳೆ ವಾಣಿಜ್ಯ ಪ್ರದೇಶದಲ್ಲಿ 55 ಡಿಬಿ ಹಾಗೂ ವಸತಿ ಪ್ರದೇಶದಲ್ಲಿ 45 ಡಿಬಿ ಗಿಂತ ಮೀರ ಕೂಡದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹಾಗೂ ಇನ್ನಿತರ ಬಸ್ಸು ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲು ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಮಾನ ಮಾಡುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸು ವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾಹನಗಳಲ್ಲಿ ವೀಲಿಂಗ್ ಮತ್ತು ಡ್ರಾಗ್ರೇಸ್ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಪಡೆಯು ನಗರದ ಎಲ್ಲಾ ಪ್ರದೇಶಗಳಲ್ಲಿ ಚಾಲನೆಯಲ್ಲಿರುತ್ತದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.

ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಬೀಚ್ನಲ್ಲಿ ಮದ್ಯಪಾನ ಮಾಡುವುದು, ಅಶ್ಲೀಲವಾಗಿ ವರ್ತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ನೆಪದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರ ಮನೆಗಳ ಮುಂದೆ, ವಿದ್ಯಾರ್ಥಿಗಳ ಹಾಸ್ಟೆಲ್, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಕಂಪೌಂಡ್ನೊಳಗಡೆ ಶುಭಾಶಯ ಕೋರುವ ನೆಪದಲ್ಲಿ ಅನಧಿಕೃತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪು ಹೋಗಿ ಕಿರಿಕಿರಿ/ಅಸಭ್ಯವಾಗಿ ವರ್ತನೆ ಮಾಡುವುದನ್ನು ಮತ್ತು ಬಲವಂತವಾಗಿ ಶುಭಾಶಯ ಕೋರುವು ದನ್ನು ನಿಷೇಧಿಸಲಾಗಿದೆ ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲಿಯನ್ನು ಎಸೆಯುವುದನ್ನು ನಿಷೇಧಿಸಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.


Spread the love