ಹೋಂ ಸ್ಟೇ ಮೂಲಕ ಆದಾಯ ವೃದ್ದಿ- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ಜಿಲ್ಲೆಯ ಕಡಲತೀರದಲ್ಲಿನ ಮನೆಗಳಲ್ಲಿ ಹೋಂ ಸ್ಟೇ ಆರಂಭಿಸುವುದರಿಂದ ಉತ್ತಮ ಆದಾಯ ಪಡೆಯುವುದರ ಜೊತೆಗೆ , ಪ್ರವಾಸೋದ್ಯಮವನ್ನು ಅಭಿವೃದ್ದಿಗೊಳಿಸಲು ಸಾಧ್ಯ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.
ಅವರು ಶುಕ್ರವಾರ , ರಜತಾದ್ರಿಯಲ್ಲಿ , ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ವತಿಯಿಂದ 2017-18 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮ ಹಾಗೂ ಹೋಂ ಸ್ಟೇ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೋಂ ಸ್ಟೇ ಪ್ರಮಾಣಪತ್ರ ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಹೋಂ ಸ್ಟೇ ಆರಂಭಿಸುವವರಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಒಂದು ವಾರದೊಳಗೆ ಪ್ರಮಾಣಪತ್ರ ನೀಡಲಾಗುವುದು, ಕಡಲ ತೀರದಲ್ಲಿರುವ ಮನೆಗಳಲ್ಲಿ ಹೋಂ ಸ್ಟೇ ಆರಂಭಿಸಿ, ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸಿ , ಉತ್ತಮ ಆದಾಯ ಗಳಿಕೆ ಸಾಧ್ಯವಿದೆ ಎಂದು ಸಚಿವರು ಹೇಳಿದರು.
ಪ್ರವಾಸಿ ಟ್ಯಾಕ್ಸಿಗಳಿಗೆ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು 2 ಲಕ್ಷದಿಂದ 3 ಲಕ್ಷಗಳಿಗೆ ಹೆಚ್ಚಿಸಲಾಗಿದ್ದು, ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ, ಪ್ರವಾಸಿ ಟ್ಯಾಕ್ಸಿ ಪಡೆದ ಚಾಲಕರು, ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ದಿಯ ರಾಯಭಾರಿಗಳಂತೆ ಕಾರ್ಯ ನಿರ್ವಹಿಸಬೇಕು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಅವರನ್ನು ಸಂತೃಪ್ತಗೊಳಿಸಬೇಕು ಎಂದು ಸಚಿವರು ಹೇಳಿದರು.
2017-18 ನೇ ಸಾಲಿನ ಪರಿಶಿಷ್ಟ .ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಒಟ್ಟು 19 ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ 11 ಮಂದಿಗೆ ಹೋಂ ಸ್ಟೇ ಆರಂಭಿಸುವ ಕುರಿತಂತೆ ಪ್ರಮಾಣಪತ್ರಗಳನ್ನು ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾದ ವಿಲ್‍ಪ್ರೈಡ್ ಡಿಸೋಜಾ ಹಾಗೂ ಅನಿತಾ ಉಪಸ್ಥಿತರಿದ್ದರು.