ಹೋಟೆಲ್ ತಿಂಡಿ ತಿಂದು ದಲಿತರ ಮನೆಯೂಟ ಎಂದು ಪೋಸು ನೀಡಿದ ರಾಜ್ಯ ಬಿಜೆಪಿ ನಾಯಕರು!
ತುಮಕೂರು: ಗುರುವಾರ ತುಮಕೂರಿನಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಮುಖವಾಡ ಬಯಲಾಗಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಯೂರಪ್ಪ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ 45 ದಿನಗಳ ಜನಸಂಪರ್ಕ ಅಭಿಯಾನವನ್ನು ತುಮಕೂರು ನಗರದಿಂದ ಆರಂಭಿಸಿದ್ದರು.
ಮರಳೂರು ದಿಣ್ಣೆಯ ನಿವಾಸಿ ಬಿಜೆಪಿ ದಲಿತ ಕಾರ್ಯಕರ್ತ ಮಧು ಎನ್ನುವವರ ಮನೆಯಲ್ಲಿ ತಟ್ಟೆ ಇಡ್ಲಿ, ಚಿತ್ರಾನ್ನ, ಕೇಸರಿ ಬಾತ್ನ್ನು ಹಲವು ನಾಯಕರು ಸೇವಿಸಿದ್ರು. ಹೋಟೆಲಿನಿಂದ ತಿಂಡಿಯನ್ನು ತಂದು ದಲಿತರ ಮನೆಯಲ್ಲಿ ಸೇವಿಸಿ, ದಲಿತರೆಂದರೇ ತಮಗೆ ಬೇಧವಿಲ್ಲ ಅಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
ಅಸಲಿಗೆ ಬಿಜೆಪಿ ನಾಯಕರು ಸೇವಿಸಿದ ಉಪಹಾರವನ್ನು ತುಮಕೂರು ನಗರದ ಅರಳೂರು ಹೋಟೆಲಿನಿಂದ ತರಿಸಲಾಗಿತ್ತು. ಈ ಹೋಟೆಲಿನಿಂದ 500 ತಟ್ಟೆ ಇಡ್ಲಿ, ಚಿತ್ರಾನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲಾಗಿತ್ತು.
ಎಂದು ಹೋಟೆಲ್ ಮಾಲೀಕ ಶಿವಕುಮಾರ ಖಾಸಗಿ ಟಿವಿಗೆ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ್, ಶೋಭಾಕರಂದ್ಲಾಜೆ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ದಲಿತರ ಮನೆ ಊಟ ಮಾಡಿದ್ದೇವೆ ಎಂದು ಬೀಗಿದ್ದರು. ಈ ಘಟನೆಯಿಂದ ರಾಜ್ಯ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.