ಹೋಳಿ ಆಚರಣೆಯ ಹೆಸರಿನಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವುದನ್ನು ನಿಲ್ಲಿಸಿ – ದಿನೇಶ್ ಮೆಂಡನ್
ಉಡುಪಿ: ಮಣಿಪಾಲದ ವಿವಿಧ ಕಡೆಗಳಲ್ಲಿ ಡಿ ಜೆ ಪಾರ್ಟಿ ಆಯೋಜಿಸಿ ಹಿಂದು ಭಾವನೆಗೆ ಧಕ್ಕೆ ತರುವುದನ್ನು ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ
ಹಿಂದೂ ಧರ್ಮದಲ್ಲಿ ಹೋಳಿ ಹಬ್ಬವನ್ನು ವಿಶ್ವದಾದ್ಯಂತ ಹಿಂದೂಗಳು ವಿಶೇಷವಾಗಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದು, ಭಗವಂತ ಶ್ರೀ ಕೃಷ್ಣ ಬಾಲ್ಯದಲ್ಲಿ ಲೋಕಕಂಟಕಿಯಾಗಿ ಹೋಲಿಕಾ ಎಂಬ ರಾಕ್ಷಸಿಯನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡಿದ ಪವಿತ್ರ ದಿನವಾಗಿದೆ. ತಾರಕಾಸುರನ ವಧೆಗೆ ಶಿವ ಪರಮಾತ್ಮನನ್ನು ಎಚ್ಚರಗೊಳಿಸಲು ಮನ್ಮಥ ದಹನವಾದ ಪ್ರತೀಕವಾಗಿ ಕಾಮ ದಹನವನ್ನು ಮಾಡುವ ಪದ್ಧತಿ ಇದೆ .
ಹಾಗಾಗಿ ಹಿಂದೂ ಧಾರ್ಮಿಕ ಕಾರ್ಯಕ್ರಮದ ದಿನದಂದು ಉಡುಪಿ ಜಿಲ್ಲೆಯ ನಗರ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳು ಆಯೋಜನೆ ಗೊಂಡಿದ್ದು, ಅಲ್ಲಿ ವಿವಿಧ ಡಿಜೆ ಪಾರ್ಟಿ, ಮತ್ತು ಅನೈತಿಕ ಚಟುವಟಿಕೆಗೆ ಕಾರಣವಾಗುವ ಮಾದಕ ದ್ರವ್ಯದ ಜೊತೆಗೆ ಡ್ರಗ್ಸ್ ಉಪಯೋಗವಾಗುವ ಸಾಧ್ಯತೆ ಇದ್ದು ಇದು ಸಮಾಜದ ಸ್ವಾಸ್ಥ್ಯ ಕೆಡಿಸುವ ಜೊತೆಗೆ ಯುವಕ ಯುವತಿಯರು ದಾರಿ ತಪ್ಪಲು ಕಾರಣವಾಗುತ್ತಿದೆ
ಉಡುಪಿ ಜಿಲ್ಲೆ ಶ್ರೀ ಕೃಷ್ಣನ ನೆಲೆಬೀಡು, ಈ ಕೃಷ್ಣನ ನಗರಿಯಲ್ಲಿ ಇಂತಹ ಯಾವುದೇ ಅಕ್ರಮ ಅನೈತಿಕತೆಯ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷದ್ ಬಜರಂಗದಳ ವಿರೋಧ ವ್ಯಕ್ತ ಪಡಿಸುತ್ತಿದ್ದು ಪೊಲೀಸ್ ಇಲಾಖೆ ಕೂಡ ಇದಕ್ಕೆ ಯಾವುದೇ ಅವಕಾಶ ನೀಡಬಾರದಾಗಿ ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಆಗ್ರಹಿಸಿದ್ದಾರೆ.