10 ಕೋಟಿ ವೆಚ್ಚದ ಪೆರಂಪಳ್ಳಿ ಸೇತುವೆಗೆ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ
ಉಡುಪಿ : ಉಡುಪಿ ತಾಲೂಕು ಅಮ್ಮುಂಜೆ ಪರಂಪಳ್ಳಿ (ಪರಾರಿ) ಕಿ.ಮೀ .1.50 ರಲ್ಲಿ ಸ್ವರ್ಣಾ ನದಿಗೆ ಅಡ್ಡಲಾಗಿ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಸೇತುವೆ ಕಾಮಗಾರಿಗೆ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಚುನಾವಣಾ ಪೂರ್ವದಲ್ಲಿ ತಾವು ನೀಡಲಾಗಿದ್ದ ಈ ಸೇತುವೆ ನಿರ್ಮಾಣದ ಭರವಸೆಯನ್ನು ಈಡೇರಿಸಲಾಗುತ್ತಿದೆ , ಅಲ್ಲದೆ 9 ಕೋಟಿ ವೆಚ್ಚ ನೀವಾರ ಕೋರಾಡಿ ಸೇತುವೆ ಕಾಮಗಾರಿ, 13 ಕೋಟಿ ವೆಚ್ಚದಲ್ಲಿ ಮಲ್ಪೆ -ಪಡುಕೆರೆ ಸೇತುವೆ ಕಾಮಗಾರಿ ನಡೆಯುತ್ತಿದ್ದು ಉಳಿದ ಶೇತುವೆಗಳ ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಿ, ಪೂರ್ಣಗೊಳಿಸಲಾಗುವುದು, ತಾವು 2025 ದೃಷ್ಠಿಯಿಂದ ಯೋಜಿಸಿದ್ದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ತಾವು ಶಾಸಕರಾದ ಈ ಮೂರು ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಉಪ್ಪೂರು ನಲ್ಲಿ 43 ಕೋಟಿ ವೆಚ್ಚದಲ್ಲಿ ಜಿ.ಟಿ.ಟಿ.ಸಿ ಕಾಲೇಜು ಪ್ರಾರಂಭಿಸಲು ಅನುಮತಿ ನೀಡಿದ್ದು, ಇದಕ್ಕಾಗಿ ಈಗಾಗಲೇ 5 ಎಕರೆ ಜಾಗವನ್ನು ಗುÀರುತಿಸಲಾಗಿದೆ, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವವರಿಗೆ ಶೇ.100 ಉದ್ಯೋಗ ಸಿಗಲಿದೆ , ಇಂದು ಶಿಲಾನ್ಯಾಸ ಮಾಡಿದ ಈ ಸೇತುವೆಗೆ ಮಣಿಪಾಲ ಕಡೆಗೆ 182 ಮೀ ಉದ್ದ 5.50 ಮೀ ಅಗಲ ಹಾಗೂ ಕೊಳಲಗಿರಿ ಕಡೆಎ 393 ಮೀ ಉದ್ದ ಹಾಗೂ 5.50 ಮೀ ಅಗಲ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು, ಕೂಡು ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕರು ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ಅಗತ್ಯವಿರುವ ಜಾಗವನ್ನು ಸ್ವಾಧೀನ ಮಡಿಕೊಳ್ಳು ಸಹಕರಿಸುವಂತೆ ಹಾಗೂ ಭೂ ಸ್ವಾಧೀನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರವನ್ನು ನೀಡಲಾಗುವುದು , ಈ ಸೇತುವೆ ನಿರ್ಮಾಣದಿಂದ ಮಂದಾರ್ತಿ ಮುಂತಾದ ಪ್ರದೇಶಗಳ ಜನತೆ 15 ನಿಮಿಷದಲ್ಲಿ ಮಣಿಪಾಲ ತಲುಪಲು ಸಾಧ್ಯವಿದೆ. 15 ತಿಂಗಳ ಅವಧಿಯಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಶೀಂಬ್ರದಲ್ಲಿ ಎಡಿಬಿ ಮತ್ತು ಅಮೃತ್ ಯೋಜನೆಯಡಿ 50 ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಉಪ್ಪೂರು ಹಾಗೂ ಹಾವಂಜೆ ಗ್ರಾಮಗಳಿಗೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಶೀಘ್ರದಲ್ಲಿ ಈ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ರೈತರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಪ್ರಯೋಜನ ಕಲ್ಪಿಸಿಕೊಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಜಿ.ಪಂ. ಸದಸ್ಯ ಜನಾರ್ಧನ ತೋನ್ಸೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ತಾ.ಪಂ. ಸದಸ್ಯ ದಿನಕರ ಹೇರೂರು ನಗರಸಭೆಯ ಸದಸ್ಯರಾದ ಯುವರಾಜ್, ಮೈಮಾಡಿ ಸುಧಾಕರ ಶೆಟ್ಟಿ, ಜನಾರ್ಧನ ಭಂಡಾರ್ ಕರ್, ವೆರೋನಿಕಾ ಕರ್ನೇಲಿಯೋ, ಧರ್ಮಗುರುಗಳಾದ ಮಹಮದ್ ಮುಸ್ಲಿಯಾರ್. ವಿಲ್ ಫ್ರೆಡ್ ಫ್ರಾಂಕ್, ಡೇವಿಡ್ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.
ಡಾ. ರಾಘವೇಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು, ರಮೇಶ್ ಕರ್ಕೆರಾ ಸ್ವಾಗತಿಸಿದರು ಸುರೇಂದ್ರ ಪೂಜಾರಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.