10 ವರ್ಷ ಸಂಸದರಿಲ್ಲದ ಕ್ಷೇತ್ರಕ್ಕೆ ಮಿಥುನ್ ರೈ ಗೆಲ್ಲಿಸಿ ಸ್ಥಾನ ತುಂಬಿಸುವುದೇ ನಮ್ಮ ಗುರಿ- ಐವಾನ್ ಡಿಸೋಜ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯನ್ನೇ ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಎರಡು ದಿನಗಳಲ್ಲಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಲಯ ರಚನೆ, ಬಂದರು ಅಭಿವೃದ್ಧಿ, ವಿಮಾನ ನಿಲ್ದಾಣದ ಖಾಸಗೀಕರಣ ಹಿಂಪಡೆದು ಅಭಿವೃದ್ಧಿ, ಐಐಟಿ ಸ್ಥಾಪನೆ, ವಿಜಯ ಬ್ಯಾಂಕ್ ಹೆಸರು ಉಳಿಸಿಕೊಳ್ಳುವುದು ಸೇರಿದಂತೆ ಹಲವು ಭರವಸೆಗಳು ನಮ್ಮ ಪ್ರಣಾಳಿಕೆಯಲ್ಲಿ ಇರಲಿವೆ. ಕಾಂಗ್ರೆಸ್ ಗೆಲುವು ಸಾಧಿಸಿದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮಿಥುನ್ ರೈ ಆಯ್ಕೆಯಾದ ಬಳಿಕ ಹೊಸ ಅಲೆ ಸೃಷ್ಟಿಯಾಗಿದೆ. ಇದನ್ನು ಕೊನೆ ತನಕ ಉಳಿಸಿಕೊಂಡು ಮತಗಳನ್ನಾಗಿ ಪರಿವರ್ತಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಸಂಸದ ನಳಿನ್ಕುಮಾರ್ ಕಟೀಲ್ ನಿಷ್ಕ್ರಿಯರಾಗಿದ್ದರೂ ಚೌಕಿದಾರ್ ಪೇಟ ಹಾಕಿ ಸುತ್ತುತ್ತಿದ್ದಾರೆ. ಕ್ಷೇತ್ರದಲ್ಲಿ 10 ವರ್ಷ ಸಂಸದರೇ ಇಲ್ಲದ ಪರಿಸ್ಥಿತಿ ಇತ್ತು. ಮಿಥುನ್ ಅವರನ್ನು ಗೆಲ್ಲಿಸಿ, ಖಾಲಿ ಸ್ಥಾನ ತುಂಬಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ವಿದೇಶದ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ ₹ 15 ಲಕ್ಷ ಜಮೆ ಮಾಡುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸದೇ ಜನತೆಗೆ ಮೋಸ ಮಾಡಿದ್ದಾರೆ. ನುಡಿದಂತೆ ನಡೆಯುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಈ ಬಾರಿ 15 ಕೋಟಿ ಬಡವರಿಗೆ ಮಾಸಿಕ ₹ 6,000 ವಾರ್ಷಿಕ ₹ 72,000 ನೀಡಲು ನಿರ್ಧರಿಸಿದೆ. ಇದು ಬಡತನದ ವಿರುದ್ಧದ ನಿರ್ಣಾಯಕ ಹೋರಾಟವಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆ ಜಾರಿಯಾಗಲಿದೆ. ಜನರು ವಿವೇಚನೆಯಿಂದ ಮತ ಚಲಾಯಿಸಿದರೆ ಅದು ಸಾಧ್ಯವಾಗಲಿದೆ ಎಂದರು.
ಐದು ವರ್ಷಗಳ ಹಿಂದೆ ‘ಚಾಯ್ ವಾಲಾ’ ಎಂದು ಬಿಂಬಿಸಿಕೊಂಡಿದ್ದ ಮೋದಿಯವರು ಈಗ ‘ಚೌಕಿದಾರ್’ ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಾರೆ. ಇದು ಜನರನ್ನು ಮೋಸಗೊಳಿಸಲು ಹೂಡಿರುವ ಆಟ. ಚಾಯ್ವಾಲಾ ಚೌಕೀದಾರ್ ಹೇಗಾಗುತ್ತಾರೆ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್ ಹಮೀದ್ ಕೆ.ಕೆ., ಸಿ.ಎಂ. ಮುಸ್ತಾ, ಆರೀಫ್ ಬಾವಾ, ಪ್ರೇಮ್ ಬಲ್ಲಾಳ್ಬಾಗ್, ಪೀಯೂಶ್ ತೊಕ್ಕೊಟ್ಟು ಉಪಸ್ಥಿತರಿದ್ದರು.