100ನೇ ವರ್ಷದ ಸಂಭ್ರಮದಲ್ಲಿ ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕುಂದಾಪುರ: ಸ್ಥಾಪನೆಯ 100ನೇ ವರ್ಷದ ಸಂಭ್ರಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿ, ಮತ್ತೆ ಶಾಲೆಯ ಗತವೈಭವವನ್ನು ಮರು ಸ್ಥಾಪಿಸಬೇಕು ಎನ್ನುವ ಚಿಂತನೆಯಲ್ಲಿ ತಾಲ್ಲೂಕಿನ ನೂಜಾಡಿ ಗ್ರಾಮದ ಬಗ್ವಾಡಿ ಎಂಬ ಪುಟ್ಟ ಊರಿನಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ಶಿಕ್ಷಣಾಸಕ್ತರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.
ಅಕ್ಷರಾಭ್ಯಾಸಕ್ಕಾಗಿ ಕಿ.ಮೀ ದೂರದವರೆಗೆ ಕಾಡು, ಗುಡ್ಡೆ, ಗದ್ದೆಗಳ ಅಂಚುಗಳಲ್ಲಿ ನಡೆದುಕೊಂಡೇ ಹೋಗುತ್ತಿದ್ದ ಬಗ್ವಾಡಿಯ ಆಸುಪಾಸಿನ ಮಕ್ಕಳಿಗೆ ಶಿಕ್ಷಣಾಭ್ಯಾಸಕ್ಕೆ ಅನುಕೂಲವಾಗುವಂತೆ ಊರ ಹಿರಿಯರು ಬೇಡಿಕೆಯಂತೆ 1925 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿ ಶಾಲೆಯನ್ನು ಸರ್ಕಾರ ಆರಂಭಿಸಿತ್ತು.
ಪ್ರಾರಂಭದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳ ಪ್ರವೇಶ ಪಡೆದುಕೊಂಡಿದ್ದ ಈ ಹಿರಿಯ ವಿದ್ಯಾ ಶಾಲೆ, ಕಳೆದ ನೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಮಕ್ಕಳ ಶಿಕ್ಷಾಣಾಸಕ್ತಿಯ ಹಸಿವನ್ನು ತಣಿಸಿದೆ. ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡು ಉನ್ನತ ಶಿಕ್ಷಣ ಗಳಿಸಿ, ದೇಶ-ವಿದೇಶದಲ್ಲಿ ಒಳ್ಳೆಯ ಅಧಿಕಾರ ಸ್ಥಾನದಲ್ಲಿ ಇರುವ ಹಾಗೂ
ಕೈಗಾರಿಕೋದ್ಯಮಿಗಳಾಗಿರುವ ಇಲ್ಲಿನ ಪ್ರಾರ್ಥನಾ ವಿದ್ಯಾರ್ಥಿಗಳಲ್ಲಿ ನಮ್ಮ ಶಾಲೆ ಎನ್ನುವ ಅಭಿಮಾನಗಳಿದೆ.
2025 ರಲ್ಲಿ ಶಾಲೆ ನೂರು ಸಾರ್ಥಕ ವರ್ಷಗಳನ್ನು ಪೊರೈಸುತ್ತಿರುವ ಹಿನ್ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕ ವೃಂದ, ಜನಪ್ರತಿನಿಧಿಗಳು ಹಾಗೂ ಊರವರು 2024 ರಲ್ಲಿ ಸಭೆ ಸೇರಿ ಶತಮಾನ ಪೂರೈಸುತ್ತಿರುವ ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಮಾಡಬೇಕು ಹಾಗೂ ಅದರ ಪೂರ್ವದಲ್ಲಿ ಶಾಲೆಯ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎನ್ನುವ ತೀರ್ಮಾನ ಕೈಗೊಂಡಿದ್ದರು.
ಸಭೆಯ ತೀರ್ಮಾನದಂತೆ ಶತಮಾನೋತ್ಸವ ಸಮಿತಿಯನ್ನು ರಚನೆ ಮಾಡಿ, ಶಾಲೆಯ ಹಳೆ ವಿದ್ಯಾರ್ಥಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೇರೆ ಬೇರೆ ಆಯಾಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಅಧಿಕಾರಿ ಬಿ.ಎನ್.ಶೆಟ್ಟಿ ಅವರನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಶಾಲೆಯ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಮಾರು 2000 ಚದರ ಅಡಿಯ 20 ಲಕ್ಷ ವೆಚ್ಚದಲ್ಲಿ, ನಾಲ್ಕು ತರಗತಿ ಕೊಠಡಿ ಒಳಗೊಂಡಂತೆ ಸಾಂಸ್ಕೃತಿಕ ಸಭಾಭವನ ‘ ಶತಮಾನೋತ್ಸವ ಭವನ ‘ ಕ್ಕೆ 2024 ರ ಜುಲೈಯಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ, ಊರ ಹಿರಿಯರು ಹಾಗೂ ದಾನಿಗಳು ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು.
ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶತಮಾನೋತ್ಸವ ಭವನದ ನಿರ್ಮಾಣ ಕಾರ್ಯ ಮುಗಿದಿದೆ. ಪ್ರಕೃತಿ ಮಡಿಲ ನಡುವೆ ಬಾನಿಗೆ ಮುತ್ತಿಡುವಂತೆ ಆಕರ್ಷಕವಾದ ಹಾಗೂ ಸುಸಜ್ಜಿತವಾದ ಕಟ್ಟಡ ಎದ್ದು ನಿಂತಿದೆ.
ಶಾಲೆಯ ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ, ಶಾಲೆಯ ಮೇಲಿನ ಅಭಿಮಾನದಿಂದ, ಊರಿನ ಜನರ ಪ್ರೀತಿ ವಿಶ್ವಾಸ, ಗೌರವಗಳಿಗೆ ಮನ್ನಣೆ ನೀಡಿ, ಬಗ್ವಾಡಿ ಮೆತ್ತಿನಮನೆ ಕುಟುಂಬಿಕರು, ಬಗ್ವಾಡಿ ಮೆತ್ತಿನಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ವತಿಯಿಂದ ಶತಮಾನೋತ್ಸವ ಭವನದ ನಿರ್ಮಾಣದ ಹೆಚ್ಚಿನ ಮೊತ್ತವನ್ನು ಭರಿಸಿದ್ದಾರೆ. ಕಟ್ಟಡದ ಮೇಲ್ಪಾವಣಿಗೆ ಹೆಂಚನ್ನು ಮಾಜಿ ಶಾಸಕರಾದ ಬಿ.ಎಮ್.ಸುಕುಮಾರ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ್ದಾರೆ.
ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳಿಗೆ ದಿನಗಳು ದೂರವಿರುವುದರಿಂದಾಗಿ, ಶಾಲೆಯ ವಿದ್ಯಾರ್ಥಿಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಈ ಕಟ್ಟಡ ಬಳಕೆಯಾಗಬೇಕು ಎನ್ನುವ ಸದುದ್ದೇಶದಿಂದ ಇಂದು ( ಜ.23) ರಂದು ಸರಳ ಕಾರ್ಯಕ್ರಮದ ಮೂಲಕ ಮೆತ್ತಿನಮನೆ ಕುಟುಂಬಿಕರ ಉಪಸ್ಥಿತಿಯಲ್ಲಿ ಶತಮಾನೋತ್ಸವ ಭವನದ ಕಟ್ಟಡದ ಹಸ್ತಾಂತರ ನಡೆಯಲಿದೆ.
ಭವಿಷ್ಯದ ಯೋಜನೆಗಳು:
ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆಯ ಮೂಲಭೂತ ಕೊರತೆಗಳನ್ನು ಸರಿದೂಗಿಸಿ, ಹಿರಿಯ ಶಿಕ್ಷಣ ದೇಗುಲಕ್ಕೆ ಬೇಕಾಗಿರುವ ಅಡುಗೆ ಮನೆ ಹಾಗೂ ದಾಸ್ತಾನು ಕೊಠಡಿ ನಿರ್ಮಾಣ, ಹಳೆ ಕೊಠಡಿಗಳ ದುರಸ್ತಿ, ಶಾಲೆಯ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ, ಪ್ರವೇಶ ದ್ವಾರದ ದುರಸ್ತಿ, ಶೌಚಾಲಯ ಸೇರಿದಂತೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲು ಕಾರ್ಯಯೋಜನೆ ರೂಪಿಸಲಾಗಿದೆ.
ಯೋಜಿತ ಯೋಜನೆಗಳ ಅನುಷ್ಠಾನ ಹಾಗೂ ಶತಮಾನೋತ್ಸವ ಆಚರಣೆಗಾಗಿ 35 ಲಕ್ಷ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಶಾಲೆಯ ಪ್ರಾರ್ಥನಾ ವಿದ್ಯಾರ್ಥಿಗಳು, ಊರ ಶಿಕ್ಷಣಾಭಿಮಾನಿಗಳು ಹಾಗೂ ದಾನಿಗಳ ನೆರವನ್ನು ಪಡೆದುಕೊಳ್ಳಲು ಉದ್ದೇಶಿಸಲಾಗಿದೆ.
2025 ರ ಏಪ್ರಿಲ್ ತಿಂಗಳಲ್ಲಿ ಜನಪ್ರತಿನಿಧಿಗಳು, ಗಣ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಊರಿನವರ ಸಹಕಾರದಿಂದ ಶತಮಾನೋತ್ಸವ ಸಂಭ್ರಮದ ಆಚರಣೆ ನಡೆಯಲಿದೆ
ಶಾಲೆಯ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡುವ ಶತಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಎನ್.ಶೆಟ್ಟಿ ಅವರು, ಊರ ಹಾಗೂ ಆಸುಪಾಸಿನ ಊರಿನ ಬಡ ಮತ್ತು ಸಾಮನ್ಯ ವರ್ಗದ ಮಕ್ಕಳಿಗೆ ಸುಸಜ್ಜಿತವಾದ ವ್ಯವಸ್ಥೆಗಳೊಂದಿಗೆ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಧೈಯವಾಗಿದೆ. ಶಾಲೆಯ ಈವರೆಗಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು ಹಾಗೂ ಊರಿನವರು ಸಹಕಾರ ಮತ್ತು ಮಾರ್ಗದರ್ಶನ ಯಾವತ್ತೂ ಸ್ಮರಣೀಯ ಎನ್ನುತ್ತಾರೆ.