1,250 ರೂಪಾಯಿಗೆ ಏರಿಕೆ ಕಂಡ ಶಂಕರಪುರ ಮಲ್ಲಿಗೆ ದರ; ರೈತರ ಮುಖದಲ್ಲಿ ಮಂದಹಾಸ
ಉಡುಪಿ: ಬೇಡಿಕೆ ಕುದುರಿದ್ದರಿಂದಾಗಿ ಶಂಕರಪುರ ಮಲ್ಲಿಗೆ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಒಂದು ಅಟ್ಟೆಗೆ ಕಟ್ಟೆಯಲ್ಲಿ ಗರಿಷ್ಠ ದರ 1,250 ರೂ. ತಲುಪಿದೆ.
ಉಡುಪಿ ಮಲ್ಲಿಗೆಯ ದರ ದಾಖಲೆ ಏರಿಕೆ ಕಂಡಿದೆ. ಪೇಟೆಂಟ್ ಪಡೆದ ಈ ವಾಣಿಜ್ಯ ಬೆಳೆಯ ದರ ಮತ್ತೊಮ್ಮೆ ಗಗನಮುಖಿಯಾಗಿದೆ. ಪ್ರತೀ ಅಟ್ಟೆ ಹೂವು ಅಂದರೆ ಮೂರು ಸಾವಿರ ಹೂವಿನ ಎಸೆಳಿಗೆ ಬರೋಬ್ಬರಿ 1250 ರೂ ದರ ನಿಗದಿಯಾಗಿದೆ.
ಪಿತೃಪಕ್ಷದಲ್ಲಿ ಮಲ್ಲಿಗೆಯ ದರ ತುಂಬಾ ಇಳಿಮುಖವಾಗಿದ್ದು, ಸೆಪ್ಟಂಬರ್ 28ರ ವೇಳೆಗೆ ಹೂವಿನ ಅಟ್ಟೆಗೆ ಕೇವಲ 170 ರುಪಾಯಿ ಇತ್ತು.ಬಳಿಕ ಚೇತರಿಕೆ ಕಂಡು ಅಕ್ಟೋಬರ್ ಒಂದರಂದು 670 ರುಪಾಯಿ, ಮೂರರಂದು 950 ರಪಾಯಿಗೆ ಏರಿಕೆಯಾಗಿತ್ತು. ಇದೀಗ ದಾಖಲೆಯ 1250 ರುಪಾಯಿಗೇರಿದೆ.
ಉಡುಪಿಯ ಶಂಕರಪುರ ಮಲ್ಲಿಗೆ ಅಂದ್ರೆ ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಬೇಕಾದ ಪುಷ್ಪ. ತನ್ನ ಸುವಾಸನೆ ಮತ್ತು ಶುದ್ಧತೆಯಿಂದ ಎಲ್ಲರನ್ನೂ ಸೆಳೆದ ಸುಗಂಧಿರಾಣಿ. ಜಾತ್ರೋತ್ಸವದ ಸೀಸನ್ ಇದು. ದೇವರ ಶಯನಕ್ಕೆ ಮಲ್ಲಿಗೆಯೇ ಬೇಕು. ಮದುವೆ ಆಗ್ಬೇಕು ಅಂದ್ರೆ ಕಡಿಮೆ ಪಕ್ಷ ಅಂದ್ರೂ ನಾಲೈದು ಚೆಂಡು ಮಲ್ಲಿಗೆ ಹೂವು ಬೇಕೇ ಬೇಕು. ಶಂಕರಪುರ ಮಲ್ಲಿಗೆ, ರಾಷ್ಟ್ರೀಯ ಮಾನ್ಯತೆ ಪಡೆದ ಮಲ್ಲಿಗೆ ಹೂ. ಯಾರಾದ್ರು ಉಡುಪಿ ಮಲ್ಲಿಗೆಯನ್ನ ಮುಡ್ಕೊಂಡು ಒಂದಷ್ಟು ದೂರದಲ್ಲಿ ಹೋದ್ರೆ ಸಾಕು ಅದ್ರ ಘಮ ಎಲ್ಲೆಡೆ ಪಸರಿಸುತ್ತದೆ. ಶುಭಕಾರ್ಯಗಳು ಶುರುವಾಗುತ್ತಿದ್ದಂತೆ ಶಂಕರಪುರ ಮಲ್ಲಿಗೆಯ ಬೆಲೆ ಗಗನಕ್ಕೇರಿದೆ.
ಮುಂದಿನ ದಿನಗಳಲ್ಲಿ ನವರಾತ್ರಿ ಸಹಿತ ಅನೇಕ ಹಬ್ಬಗಳ ಆಚರಣೆ ಇರೋದರಿಂದ, ಹೂವಿನ ದರದಲ್ಲಿ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆ ಕೊರೋನಾದಿಂದ ಕಂಗೆಟ್ಟ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.