13 ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ಅನುಮೋದನೆ

Spread the love

13 ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ಅನುಮೋದನೆ

ಉಡುಪಿ :  ಹೊಸದಾಗಿ ಪತ್ತೆ ಹಚ್ಚಲಾದ 13 ಮಂದಿ ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದಿಸಲಾಯಿತು.

ಇಂದು ಜಿಲ್ಲಾ ಪಂಚಾಯತ್‍ನ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಪೀಡಿತರ ಆರೋಗ್ಯ ಸುಧಾರಣೆ ಮತ್ತು ಪುನರ್ವಸತಿ ಕಾರ್ಯಕ್ರಮದ ಸಾಮಾನ್ಯ ಸಮಿತಿ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತಲ್ಲದೆ 3.8.2017ರ ಸಭೆಯ ಪಾಲನಾ ವರದಿಯನ್ನು ಸಚಿವರು ಪರಿಶೀಲಿಸಿದರು.

ನಾಡಾ ಗ್ರಾಮದ ಸೇನಾಪುರ ಗ್ರಾಮದಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ ಬಗ್ಗೆ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರ್ದೇಶಕರೊಂದಿಗೆ ಚರ್ಚಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಸಚಿವರು ಸೂಚನೆ ನೀಡಿದರಲ್ಲದೆ, ಕಾರ್ಯಾನುಷ್ಠಾನ ಸಂಬಂಧ ನಂತರದ ಹಂತದಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ತಾವೇ ಮಾತುಕತೆ ನಡೆಸುವ ಭರವಸೆಯನ್ನೂ ನೀಡಿದರು.

ಹಾಸಿಗೆ ಹಿಡಿದ ಎಂಡೋಸಲ್ಫಾನ್ ಪೀಡಿತರಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ಕ್ಲಿನಿಕ್ ವಿತ್ ಫಿಸಿಯೋಥೆರಪಿ ಸೇವೆಯನ್ನು ಒದಗಿಸಲು ಹೊರಗುತ್ತಿಗೆ ಸಂಸ್ಥೆಗಳಿಂದ ಟೆಂಡರ್ ಕರೆದು ನಡೆಸುವ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ರಾಜ್ಯ ಎಂಡೋಸಲ್ಫಾನ್ ಸೆಲ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿ ಎಚ್ ಒ ಡಾ ರೋಹಿಣಿ ಸಭೆಗೆ ಮಾಹಿತಿ ನೀಡಿದರು.

ಎಂಡೋಸಲ್ಫಾನ್ ಪೀಡಿತರಿಗೆ ಸಾಧನಾ ಸಲಕರಣೆಗಳಾದ ವಾಟರ್ ಬೆಡ್ ನ್ನು 26 ಮಂದಿಗೆ, ಒಂದು ಗಾಲಿ ಕುರ್ಚಿ, 1 ವಾಕರ್‍ನ್ನು ನೀಡಲಾಗಿದೆ. ಇನ್ನೈದು ವಾಟರ್ ಬೆಡ್, 2 ವಾಕರ್, 2 ಗಾಲಿ ಕುರ್ಚಿಗೆ ಬೇಡಿಕೆ ಬಂದಿದ್ದು ಖರೀದಿಗೆ ಕಾರ್ಯಾದೇಶ ನೀಡಲಾಗಿದೆ ಎಂದೂ ಡಾ. ರೋಹಿಣಿ ಹೇಳಿದರು.

ಆರೋಗ್ಯ ಸೇವೆಗಾಗಿ ಕೆಎಂಸಿಯೊಂದಿಗೆ ಒಡಂಬಡಿಕೆಯಿದ್ದು, 124 ಮಂದಿಗೆ 28,39,779 ರೂ.ಗಳ ವೈದ್ಯಕೀಯ ಮರುವೆಚ್ಚ ಪಾವತಿಯನ್ನು ಮಾಡಲಾಗಿದೆ. ಇವರ ವೈದ್ಯಕೀಯ ವೆಚ್ಚ ಪಾವತಿಗೆ ಯಾವುದೇ ರೀತಿಯ ತೊಂದರೆಗಳಿಲ್ಲ ಎಂದು ಡಿಹೆಚ್ ಒ ಸ್ಪಷ್ಟ ಪಡಿಸಿದರು.

ಎಂಡೋಸಲ್ಫಾನ್ ಪೀಡಿತರು ಚಿಕಿತ್ಸೆಗಾಗಿ ಪ್ರಯಾಣಿಸುವಾಗ ಅವರಿಗೆ ಬಸ್ ಪಾಸ್ ನೀಡಲು ಸತಾಯಿಸಬೇಡಿ ಎಂದು ಎಚ್ಚರಿಕೆ ನೀಡಿದ ಸಚಿವರು, ಅರ್ಜಿಗಳನ್ನು ಸ್ವೀಕರಿಸಿ ಪಾಸು ವಿತರಿಸಿ ಎಂದು ನಿಗಮದ ಅಧಿಕಾರಿಗೆ ಸೂಚಿಸಿದರು.

ಈವರೆಗೆ ಒಟ್ಟು 983 ಪಾಸುಗಳನ್ನು ವಿತರಿಸಲಾಗಿದೆ.

ಸಭೆಯಲ್ಲಿದ್ದ ವಿಕಲಚೇತನರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ಹೆಬ್ಬಾರ ಅವರು, ಬೈಂದೂರು ಮತ್ತು ನಾವುಂದ ಗ್ರಾಮ ಪಂಚಾಯಿತಿಯಲ್ಲಿ ರ್ಯಾಂಪ್ ಬೇಕೆಂದರು. ಯುನಿವರ್ಸಲ್ ಐಡಿ ಹಾಗೂ ಶಾಶ್ವತ ಪುನರ್ವಸತಿ ಕೇಂದ್ರದ ಅಗತ್ಯವನ್ನು ಹೇಳಿದರು.

ಯುನಿವರ್ಸಲ್ ಐಡಿಗೆ ಸಂಬಂಧಿಸಿದ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ಉತ್ತರಿಸಿದರು. ರ್ಯಾಂಪ್ ಹಾಕಿಸಲು ಜಿಲ್ಲಾಧಿಕಾರಿಗಳು ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಉಪಾಧ್ಯಕ್ಷರಾದ ಶೀಲಾಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಸಹಾಯಕ ಆಯುಕ್ತರಾದ ಭೂಬಾಲನ್, ವಿಕಲಚೇತನರ ಮತ್ತು ಪಾಲಕರ ಒಕ್ಕೂಟದ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು. ಡಾ ರೋಹಿಣಿ ಸ್ವಾಗತಿಸಿ ವಂದಿಸಿದರು.


Spread the love