15 ದಿನಗಳ ಒಳಗೆ ನೀರಿನ ಬಾಕಿ ಶುಲ್ಕ ಪಾವತಿಸದವರ ಸಂಪರ್ಕ ಕಡಿತ ; ಮೇಯರ್ ಕವಿತಾ ಸನೀಲ್
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 50000 ಮಂದಿ ನೀರಿನ ಬಿಲ್ಲನ್ನು ಬಾಕಿ ಇರಿಸಿದ್ದು, ಮುಂದಿನ 15 ದಿನಗಳಲ್ಲಿ ಪಾವತಿ ಮಾಡದೆ ಹೋದಲ್ಲಿ ನೋಟಿಸ್ ಜಾರಿಮಾಡುವುದಲ್ಲದೆ ಅವರುಗಳ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಮೇಯರ್ ಕವಿತಾ ಸನೀಲ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪಾಲಿಕೆಯ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅತೀಹೆಚ್ಚು ಎಂದರೆ ರೂ 7.47 ಲಕ್ಷ, ರೂ 7.41 ಮತ್ತು ರೂ. 7.3 ಲಕ್ಷರೂ ಗಳ ಬಿಲ್ಲನ್ನು ಕಳೆದ 2004 ರಿಂದ ಬಾಕಿ ಇರಿಸಲಾಗಿದೆ ಎಂದ ಸನೀಲ್, ಅಂತಹವರಿಗೆ 15 ದಿನಗಳ ಸಮಯ ನೀಡಲಾಗುವುದು. ನಗರದ ಅಭಿವೃದ್ಧಿಗೆ ಹಣದ ಅವಶ್ಯಕತೆಯಿಂದು, ಇಷ್ಟು ಮೊತ್ತದ ಬಿಲ್ಲನ್ನು ಸಾರ್ವಜನಿಕರು ಬಾಕಿ ಇಟ್ಟಾಗ ನಗರದ ಅಭಿವೃದ್ದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಾನು ಮೇಯರ್ ಆಗಿ ಆಯ್ಕೆಯಾದಾಗ ಸುಮಾರು ರೂ 22.37 ಕೋಟಿ ಬಿಲ್ಲು ಬಾಕಿದ್ದು ಎಲ್ಲರಿಗೂ ನೋಟಿಸ್ ನೀಡಲಾಗಿದೆ ಅಲ್ಲದೆ ಕೆಲವರ ಕನೆಕ್ಷನ್ ಕೂಡ ಕಡಿತಗೊಳಿಸಲಾಗಿದೆ. ನೀರಿನ ಕಡಿತ ಮಾಡಿದ ಬಳಿಕ ಪಾಲಿಕೆ ರೂ 2 ಕೋಟಿಯ ತನಕ ಬಿಲ್ಲು ಪಾವತಿಯಾಗಲು ಸಹಕಾರಿಯಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 85000 ನೀರಿನ ಕನೆಕ್ಷನ್ ಇದ್ದು, ಅದರಲ್ಲಿ ಸುಮಾರು 50000 ಕನೆಕ್ಷನ್ ಗಳು ತಮ್ಮ ಬಿಲ್ಲನ್ನು ಬಾಕಿ ಇರಿಸಿದ್ದಾರೆ. ಸುಮಾರು 166 ಮಂದಿಯು 1 ಲಕ್ಷಕ್ಕಿಂತ ಅಧಿಕ ಮೊತ್ತ ಬಾಕಿ ಇರಿಸಿದರೆ, 350 ಕ್ಕೂ ಅಧಿಕ ಮಂದಿ 50000 ದಿಂದ 1 ಲಕ್ಷದ ವರೆಗೆ ಹಾಗೂ 2780 ಮಂದಿ ರೂ 10000 ದಿಂದ 50000 ದ ವರೆಗೆ ಬಾಕಿ ಇರಿಸಿದ್ದಾರೆ ಎಂದರು.
ಮಸಾಜ್ ಪಾರ್ಲರ್ ಮುಚ್ಚಿದ ಕುರಿತು ಹೈಕೋರ್ಟಿನಿಂದ ದಂಡ ವಿಧಿಸಿದ ಕುರಿತು ಮಾತನಾಡಿದ ಅವರು ಮಸಾಜ್ ಪಾರ್ಲರ್ ನವರಿಗೆ ಕೋರ್ಟಿಗೆ ಹೋಗಲು ಅವಕಾಶ ಇಲ್ಲ ಕಾರಣ ಅದಕ್ಕೆ ಸೂಕ್ತ ಲೈಸನ್ಸ್ ಇಲ್ಲದೆ ಅದು ಕಾರ್ಯಾಚರಿಸುತ್ತಿತ್ತು. ಅವರು ಲೈಸನ್ಸ್ ಪಡೆದಿರುವುದು ಸೆಲೂನ್ ನಡೆಸುವ ಉದ್ದೇಶಕ್ಕಾಗಿ ಆದರೆ ನಾವು ಧಾಳಿ ನಡೆಸಿದಾಗ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿತ್ತು ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ, ಸಬಿತಾ ಮಿಸ್ಕೀತ್ ಹಾಗೂ ಇತರರು ಉಪಸ್ಥಿತರಿದ್ದರು.