Home Mangalorean News Kannada News ಕೆ.ದೇವಾನಂದ ಉಪಾಧ್ಯಾಯ ಮತ್ತು ಬಿ.ಎನ್. ರಾವ್‍ ಅವರಿಗೆ ದೆಹಲಿ ಕರ್ನಾಟಕ ಸಂಘದ ವಿಶಿಷ್ಟ ಕನ್ನಡಿಗ ಪ್ರಶಸ್ತಿ-2015

ಕೆ.ದೇವಾನಂದ ಉಪಾಧ್ಯಾಯ ಮತ್ತು ಬಿ.ಎನ್. ರಾವ್‍ ಅವರಿಗೆ ದೆಹಲಿ ಕರ್ನಾಟಕ ಸಂಘದ ವಿಶಿಷ್ಟ ಕನ್ನಡಿಗ ಪ್ರಶಸ್ತಿ-2015

Spread the love

ದೆಹಲಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ಕನ್ನಡಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ ಕನ್ನಡಿಗರಿಗೆ‘ವಿಶಿಷ್ಟ ಕನ್ನಡಿ’ಗ ಪ್ರಶಸ್ತಿಯನ್ನು ಕಳೆದ 25 ವರ್ಷಗಳಿಂದ ಸತತವಾಗಿನೀಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿಯನ್ನು ಸಿಂಡಿಕೇಟ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಕೆ.ದೇವಾನಂದ ಉಪಾಧ್ಯಾಯ ಮತ್ತು ದೆಹಲಿಯ ಹಿರಿಯ ಕನ್ನಡಿಗ ಹಾಗೂ ದೆಹಲಿಯ ಪ್ರತಿಷ್ಠಿತ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ಬಿ.ಎನ್. ರಾವ್‍ಅವರಿಗೆ  ನೀಡಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಈ ಪ್ರಶಸ್ತಿ ಪ್ರದಾನವು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ಅವರ ಅಧ್ಯಕ್ಷತೆಯಲ್ಲಿ ನವೆಂಬರ್29ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಶ್ರೀ ಕೆ.ದೇವಾನಂದಉಪಾಧ್ಯಾಯ : ದಕ್ಷಿಣಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕೆ. ದೇವಾನಂದ ಉಪಾಧ್ಯಾಯರು ತಾನು ವಿಜ್ಞಾನವನ್ನು ಕಲಿತು ಮುಂದೆ ಸಂಶೋಧಕರಾಗ ಬಯಸಿದ್ದರು. ಉಪಾಧ್ಯಾಯರು ಕುಟುಂಬದ ಆರ್ಥಿಕ ಹೊರೆಯನ್ನು ನಿಭಾಯಿಸುವ ಹೊಣೆಯರಿತು ಪದವಿ ಪೂರೈಸಿ ತಕ್ಷಣ ಬ್ಯಾಂಕ್ ನೌಕರಿಗೆ ಸೇರಿಕೊಂಡರು.

ಕೈಗೊಂಡ ವೃತ್ತಿಯ ಮೇಲಿನ ಪ್ರೀತಿ ಮತ್ತು ನಿರಂತರ ಕಲಿಕೆ ಉಪಾಧ್ಯಾಯರನ್ನು ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಹುದ್ದೆಗೆ ಏರಿಸಿದೆ. ವೃತ್ತಿಗೆ ಸೇರಿದ ಬಳಿಕವೇ ಕಾನೂನು ಪದವಿ, ಎಂ.ಬಿ.ಎ. ಮೊದಲಾದ ಉನ್ನತ ಪದವಿಗಳನ್ನು ಪಡೆದಿದ್ದು ಅವರ ನಿರಂತರ ಕಲಿಕೆಗೆ ಸಾಕ್ಷಿ. ದೆಹಲಿಗೆ ನಾಲ್ಕನೇ ಬಾರಿಗೆ ವರ್ಗಾವಣೆಗೊಂಡು ಬಂದ ಉಪಾಧ್ಯಾಯರು ಆರಂಭದಲ್ಲೇ ಜನ ಸಾಮಾನ್ಯರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ನೀಡಬೇಕೆನ್ನುವ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿ ‘ಸಿಂಡ್ ಸೇವಿಂಗ್‍ ಕ್ಲಿನಿಕ್’ ಎಂಬ ವಿನೂತನ ಕಾರ್ಯಕ್ರಮವನ್ನು ದೆಹಲಿಯ 50 ವಸತಿ ಪ್ರದೇಶಗಳಲ್ಲಿ ಬಿರುಸಿನಿಂದ ಆರಂಭಿಸಿದ್ದರು. ಅದರಂತೆ ‘ಮನೆ ಬಾಗಿಲಿಗೆ ಬ್ಯಾಂಕ್’ ಎಂಬ ಉಪಾಧ್ಯಾಯರ ಕನಸು ದೆಹಲಿಯ ವಿವಿಧ ಶಾಖೆಗಳ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸಿತ್ತು.

ಉಪಾಧ್ಯಾಯರು ಕರ್ನಾಟಕ ರಾಜ್ಯ ಜೇಸಿಸ್‍ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಎಲ್ಲಾ 8 ಪ್ರಶಸ್ತಿಗಳನ್ನು ಬಗಲಿಗೇರಿಸಿದ್ದು ಇಂದಿಗೂ ಒಂದು ದಾಖಲೆ. ಉಪಾಧ್ಯಾಯರು ಮುಂದೆ ಭಾರತೀಯ ಜೂನಿಯರ್‍ ಛೇಂಬರ್‍ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ನಿವೃತ್ತಿಯ ನಂತರ  ಮಣಿಪಾಲ್‍ ಅಕಾಡೆಮಿ ಆಫ್ ಬ್ಯಾಂಕಿಂಗ್, ಬೆಂಗಳೂರು ನಲ್ಲಿ ಅಸೋಸಿಯೇಟ್ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆ ಪ್ರತಿ ವರ್ಷ 5000 ಪದವೀಧರರನ್ನು 21 ಬ್ಯಾಂಕ್‍ಗಳಿಗೆ ನೂತನ ಜವಾಬ್ದಾರಿಯುತ ಅಧಿಕಾರಿಗಳಾಗಿ ಆಗಲು ಒಂದು ವರ್ಷದ ತರಬೇತಿ ನೀಡುವುದು.ಅಲ್ಲದೆ ಈ ಸಂಸ್ಥೆಯು ಉಪಾಧ್ಯಾಯರಿಗೆ 2013ರಲ್ಲಿ ‘ಅತ್ಯುತ್ತಮ ಶಿಕ್ಷಕ’ ಮತ್ತು 2014ರಲ್ಲಿ ‘ಅತ್ಯುತ್ತಮ ಜನ ನಿರ್ವಾಹಕ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಸಿಂಡಿಕೇಟ್ ಬ್ಯಾಂಕಿನ ರಾಷ್ಟ್ರೀಯ ವಿನಿಮಯ ಕಂಪೆನಿಯ ಮಹಾಪ್ರಬಂಧಕರಾಗಿ ಉಪಾಧ್ಯಾಯರು ಗಲ್ಫ್‍ರಾಷ್ಟ್ರ ದೋಹಾಕತಾರ್‍ಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಕರ್ನಾಟಕ ಸಂಘ ಮತ್ತು ತುಳು ಕೂಟಗಳನ್ನು ಸ್ಥಾಪಿಸಿ ಅದರ ಬೆಳವಣಿಗೆಗೆ ಕಾರಣರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿಯಲ್ಲಿದ್ದಾಗ ಉಪಾಧ್ಯಾಯರು ದೆಹಲಿಯ ಕನ್ನಡಪರ ಚಟುವಟಿಕೆಗಳಿಗೆ ನೀಡಿದ ಬೆಂಬಲ ಅತ್ಯಂತ ವಿಶಿಷ್ಟವಾದದ್ದು. ತಮ್ಮ ಎಲ್ಲಾ ಕಾರ್ಯಚಟುವಟಿಕೆಗಳ ನಡುವೆಯೂ ಅವರು ಸದಾ ನಗುನಗುತ್ತಾ ಕನ್ನಡಿಗರ ಆಗು-ಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇದಕ್ಕೆ ನಿದರ್ಶನವೆಂಬಂತೆ ಅವರು ದೆಹಲಿಯ ಕನ್ನಡ ಬಳಗ ರಾಜೇಂದ್ರ ನಗರದ ಅಧ್ಯಕ್ಷರಾಗಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ದೆಹಲಿ ಕರ್ನಾಟಕ ಸಂಘದ ಸಾಂಸ್ಕøತಿಕ ಸಮುಚ್ಚಯ ಉದ್ಘಾಟನಾ ಸಮಾರಂಭದ ಸ್ಮರಣ ಸಂಚಿಕೆಯ ಗೌರವ ಸಂಪಾದಕರಾಗಿದ್ದು ಹಾಗೂ ಆ ಸಂಚಿಕೆಗಾಗಿ ಅವರು ರೂ.18 ಲಕ್ಷಕ್ಕೂ ಮೀರಿ ಜಾಹೀರಾತು ಸಂಗ್ರಹಿಸಿದ್ದು ಒಂದು ವಿಶಿಷ್ಟ ಸಾಧನೆ. ಸಂಘದ ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅವರ ಕಳಕಳಿ ಉಲ್ಲೇಖನೀಯ. ಉಪಾಧ್ಯಾಯರ ಕೊಡುಗೆಗಳಿಗೆ ಬೆಂಗಳೂರಿನ ಕಲಾನಿಕೇತನ ಸಂಸ್ಥೆ ‘ಸಾಧನಾಚೈತ್ರ’ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀ ಬಿ.ಎನ್. ರಾವ್ : ಕರ್ನಾಟಕದ ಚಿನ್ನದ ನಾಡು ಎಂದು ಪ್ರಸಿದ್ದವಾಗಿರುವ ಕೋಲಾರದ ಅಪ್ಪೇನಹಳ್ಳಿಯವರು. ಕಡುಬಡತನದಲ್ಲಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರು ಹಾಗೂ ಮುಂಬಯಿಯಲ್ಲಿ ನಡೆಯಿತು. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಆಸಕ್ತಿ ಇರಲಿಲ್ಲ. ಜೀವನದ ಕಡು ಸತ್ಯ ಅರಿವಾಗತೊಡಗಿದಾಗ ತಮ್ಮ ಮುಂದಿನ ಜೀವನಕ್ಕೆ ಓದು ಬಹಳ ಮುಖ್ಯಎಂದು ತಿಳಿದು ಚೆನ್ನಾಗಿ ಓದಲು ಶುರುಮಾಡಿದರು. ಪ್ರತಿ ಭಾನುವಾರ ತಪ್ಪದೆ ಸಾರ್ವಜನಿಕ ಲೈಬ್ರೆರಿಯಲ್ಲಿ ಹೋಗಿ ಆಗಿನ ಎಲ್ಲ ದಿನಪತ್ರಿಕೆಗಳನ್ನು ಓದುತ್ತಿದ್ದರು .(ಸಂಯುಕ್ತ ಕರ್ನಾಟಕ, ಪ್ರಜಾವಾಣಿ) ಆ ಸಮಯದ ಹೆಸರಾಂತ ಲೇಖಕರಾದ ತ.ರಾ.ಸು, ಅ.ನ.ಕೃ., ಕುವೆಂಪು, ಎಸ್.ಎಲ್. ಭೈರಪ್ಪ ಇವರ ಕಾದಂಬರಿಗಳು, ಸಣ್ಣಕತೆಗಳು, ಮಾಸ್ತಿ ವೆಂಕಟೇಶ್‍ ಅಯ್ಯಂಗಾರ್, ಡಿ.ವಿ.ಜಿ. ಅವರ ಗೀತೆಗಳು, ನಿಬಂಧಗಳು ಗೋಕಾಕ್, ತೀ.ನಂ.ಶ್ರೀಕಂಠಯ್ಯನವರ ಕೃತಿಗಳನ್ನೂ ಓದತೊಡಗಿದರು. ರಾವ್ ಹೈಸ್ಕೂಲ್‍ನಲ್ಲಿದ್ದಾಗ ಎರಡು ನಾಟಕಗಳನ್ನು ಬರೆದು ಸ್ವತಃ ನಿರ್ದೇಶನ ಮಾಡಿದರು. ಇವು ಆಕಾಶÀವಾಣಿಯಲ್ಲಿ ಪ್ರಸಾರವಾದುವು. ಇವರು ಕನ್ನಡ ಚರ್ಚಾಕೂಟಗಳಲ್ಲೂ ಭಾಗವಹಿಸುತ್ತಿದ್ದರು.

ಪಿ.ಯು.ಸಿಯ ನಂತರದ ಹೆಚ್ಚಿನ ವಿದ್ಯಾಭ್ಯಾಸವನ್ನು ದೆಹಲಿಯಲ್ಲಿ ಮಾಡಿದರು. ಸಂಗೀತ ಕಚೇರಿಗಳು, ನಾಟಕಗಳು ಅಪರೂಪವಾಗಿ ಕನ್ನಡ ಚಲನಚಿತ್ರಗಳನ್ನು ನೋಡುವ ಅವಕಾಶ ದೊರೆಯುತ್ತಿತ್ತು ಅವುಗÀಳಿಗೆ ತಪ್ಪದೇ  ಹೋಗುತ್ತಿದ್ದರು. ಬಿ.ಎಸ್ಸಿ.ನಂತರ ಮುಂದೆ ಅವರು ಎಂ.ಎ.ಮಾಡಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು ಸೇರಿದರು. ವಿಶ್ವವಿದ್ಯಾಲಯದಲ್ಲಿ ಕನ್ನಡ ಡಿಪಾರ್ಟ್‍ಮೆಂಟ್ ಬಹಳ ಚುರುಕಾಗಿ ಕೆಲಸ ಮಾಡುತ್ತಿತ್ತು. ಅಲ್ಲಿ ನಡೆಯುವ ಭಾಷಣ, (ಕುವೆಂಪು ಸಹ ಭಾಷಣ ಮಾಡಿದ್ದರು) ಚರ್ಚಾಕೂಟಗಳು ಇತ್ಯಾದಿಗಳಿಗೆ ತಪ್ಪದೆ ಹೋಗುತ್ತಿದ್ದರು.

ಅವರು ವಾಸವಾಗಿದ್ದ ಧಾರವಾಡ ಸಿಟಿಯಿಂದ 5ಕಿ.ಮೀ.,ದೂರದಲ್ಲಿ ಸಾಧನಕೇರಿಯಲ್ಲಿ ಜ್ಞಾನಪೀಠ ಪಡೆದ ದ.ರಾ.ಬೇಂದ್ರೆಯವರು ವಾಸವಾಗಿದ್ದರು. ರಾವ್‍ ಅವರು ಬೇಂದ್ರೆಯವರ ಅಭಿಮಾನಿ ಅವರ ಮನೆಯ ಮುಂದೆ ಸುತ್ತಲೂ ಓಡಾಡುತ್ತಿದ್ದರಂತೆ. ಆದರೆಅದು ಯಾಕೋ ಒಳಗೆ ಹೋಗಿ ಅವರನ್ನು ನೋಡಿ ಮಾತನಾಡಲು ನಾಚಿಕೆಯೋ, ಭಯವೋ ಇದ್ದದ್ದರಿಂದ ಬೇಂದ್ರೆ ಅವರನ್ನು ನೋಡುವ ಸೌಭಾಗ್ಯ ಕಳೆದುಕೊಂಡರಂತೆ. ಇದು ಅವರನ್ನು ಈಗಲೂ ಕಾಡುತ್ತಿದೆ ಅನ್ನುತ್ತಾರೆ.

ಎಂ.ಎ. ಮುಗಿಸಿಕೊಂಡು ಕರ್ನಾಟಕದಲ್ಲಿ ಉದ್ಯೋಗ ಸಿಗದೇ ಆಗ ಪ್ರೊಫೆಶನಲ್‍ ಕೋರ್ಸ್‍ ಆದ ಲೈಬ್ರೆರಿ ಸೈನ್ಸ್‍ ಓದಲು ಮತ್ತೆ ದೆಹಲಿಗೆ ಹೆಸರಾಂತ ‘ಲೈಬ್ರೇರಿ ಸೈನ್ಸ್‍ ಇನ್ಸಿಟ್ಯೂಟ್’ಗೆ ಬಂದು ಸೇರಿಕೊಂಡರು. ಈ ಸಮಯದಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ಅಪರೂಪದ ನಾಟಕಗಳು, ಸಂಗೀತ ಇತ್ಯಾದಿ ನೋಡುತ್ತಿದ್ದರು. ಮಾಸ್ಟರ್‍ ಆಫ್ ಲೈಬ್ರೇರಿ ಸೈನ್ಸ್  ಮುಗಿಸಿದ ತಕ್ಷಣ ಒಳ್ಳೆಯ ಕೆಲಸ ಐಜಿಬಿ ಯಲ್ಲಿ ಸಿಕ್ಕಿತು. ಅಲ್ಲಿಒಂದು ವರುಷದ ನಂತರ ಮತ್ತೆ ಐಸಿಎಸ್‍ಎಸ್ ನಲ್ಲಿ 2 ವರುಷ ಕೆಲಸ ಮಾಡಿ ನಂತರ 1971ರಲ್ಲಿ ಜವಾಹರಲಾಲ ನೆಹರು ಯುನಿವರ್ಸಿಟಿಯಲ್ಲಿ ಅಸಿಸ್ಟೆಂಟ್ ಲೈಬ್ರೇರಿಯನ್ ಆಗಿ ಸೇರಿಕೊಂಡರು. ಜೆ.ಎನ್.ಯು. ಆಗತಾನೆ ಹೊಸದಾಗಿ ಪ್ರಾರಂಭವಾಗಿತ್ತು. ಜೆ.ಎನ್.ಯು.ವಿನಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ಎಂ.ಫಿಲ್. ಸೋಶಿಯಾಲಜಿ ಮಾಡಿದರು. ಜೆ.ಎನ್.ಯು.ವಿನಲ್ಲಿ 30 ವರುಷಗಳು ಕೆಲಸ ಮಾಡಿ 2001ರಲ್ಲಿ ನಿವೃತ್ತರಾದರು. ಅವರ ಕೆಲಸದ ಅವಧಿಯಲ್ಲಿ ದೆಹಲಿ ಸ್ಟೇಟ್ ಬುಕ್ ಸೆಲ್ಲರ್ಸ್- ಪಬ್ಲಿಷರ್ಸ್ ಅಸೋಸಿಯೇಶನ್ 1997ರಲ್ಲಿ ಅವರ ಕೆಲಸವನ್ನು ಮೆಚ್ಚಿ ‘ಬೆಸ್ಟ್‍ ಯುನಿವರ್ಸಿಟಿ ಲೈಬ್ರೇರಿಯನ್’ ಎಂಬ ಉಪಾಧಿಕೊಟ್ಟು ಸನ್ಮಾನಿಸಿದೆ.

ದೆಹಲಿ ಕರ್ನಾಟಕ ಸಂಘದ ಆಜೀವ ಸದಸ್ಯರಾಗಿರುವರಾವ್‍ ಅವರು  40 ವರುಷಗಳಿಂದ ಸಂಘದೊಡನೆ ಸಂಬಂಧವಿಟ್ಟುಕೊಂಡಿದ್ದಾರೆ. ಸಂಘದ ಎಲ್ಲ ಚಟುವಟಿಕೆಗಳಲ್ಲಿ, ಸಂಘದ ಸಾಂಸ್ಕøತಿಕ ಸಮುಚ್ಚಯದ ಉದ್ಘಾಟನಾ ಸಮಾರಂಭವೂ ಸೇರಿದಂತೆ, ಆಸಕ್ತಿಯಿಂದ ಭಾಗವಹಿಸಿದ್ದಾರೆ.


Spread the love

Exit mobile version