16 ಕೋಟಿ ರೂ ಮೀನುಗಾರಿಕಾ ಸಬ್ಸಿಡಿ ನೇರವಾಗಿ ಖಾತೆಗಳಿಗೆ ಬಿಡುಗಡೆ- ಪ್ರಮೋದ್ ಮಧ್ವರಾಜ್
ಉಡುಪಿ: ಮೀನುಗಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಾಕಿ ಇದ್ದ ಮೀನುಗಾರಿಕಾ ಸಬ್ಸಿಡಿ ಮೊತ್ತ 16 ಕೋಟಿ ಗಳನ್ನು ನೇರವಾಗಿ ಮೀನುಗಾರರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಸೋಮವಾರ, ಉಡುಪಿ ತಾ.ಪಂ. ಸಭಾಂಗಣದಲ್ಲಿ ಮೀನುಗಾರರಿಗೆ ಡೀಸಿಲ್ ಪಾಸ್ ಪುಸ್ತಕ ವಿತರಿಸಿ ಮಾತನಾಡಿದರು.
ತಾವು ಮೀನುಗಾರಿಕಾ ಸಚಿವರಾದ ನಂತರ ಮೀನುಗಾರ ಯುವಕರು ಸ್ವಂತ ಮೀನುಗಾರಿಕಾ ದೋಣಿಗಳೊಂದಿಗೆ ಸ್ವ ಉದ್ಯೋಗ ಕೈಗೊಳ್ಳಲು ಅವಶ್ಯವಿದ್ದ ಸಾಧ್ಯತಾ ಪತ್ರಗಳನ್ನು ನೀಡಲು ಆದ್ಯತೆಯಲ್ಲಿ ಕ್ರಮ ಕೈಗೊಂಡಿದ್ದು, ಇದರಿಂದ ಮೀನುಗಾರಿಕೆಗೆ ತೆರಳುವ ಯುವಕರು ಸೂಕ್ತ ದಾಖಲೆಗಳನ್ನು ಪಡೆಯುವಂತಾಗಿದ್ದು, ಕೋಸ್ಟ್ ಗಾರ್ಡ್ ಹಾಗೂ ಇತರೆ ಯಾವುದೇ ಪೊಲೀಸರಿಂದ ತಪಾಸಣೆ ಸಮಯದಲ್ಲಿ ಯಾವುದೇ ಸಮಸ್ಯೆಗೆ ಒಳಗಾಗದೇ ನಿರಾತಂಕವಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಹಾಗೂ ಹೊಸದಾಗಿ ಸಾಧ್ಯತಾ ಪತ್ರ ಪಡೆದ ಒಟ್ಟು 137 ಮಂದಿಗೆ ಡೀಸೆಲ್ ಪಾಸ್ ಪುಸ್ತಕ ವಿತರಿಸಿದ ಸಚಿವರು, ಸಾಧ್ಯತಾ ಪತ್ರ ಪಡೆದವರು ಡೀಸೆಲ್ ಪುಸ್ತಕದಲ್ಲಿ ನಮೂದಿಸಿದ ದೋಣಿಗೆ ಮಾತ್ರ ಡೀಸೆಲ್ ಪಡೆಯುವಂತೆ ಹಾಗೂ ಇತರೆ ದೋಣಿಗಳಿಗೆ ಅಕ್ರಮವಾಗಿ ಡೀಸೆಲ್ ನೀಡಿದ್ದಲ್ಲಿ ಸಂಬಂದಪಟ್ಟ ಡೀಸೆಲ್ ಬಂಕ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್, ಸಹಾಯಕ ನಿರ್ದೇಶಕ ಶಿವಕುಮಾರ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್ ಉಪಸ್ಥಿತರಿದ್ದರು.