ಬ್ರಹ್ಮಾವರ: ಬ್ರಹ್ಮಾವರ ಕೊಂಕಣಿ ಓರ್ಥೊಡಕ್ಸ್ ಸಭೆಯ ಸಂಸ್ಥಾಪಕ ದಿ ವಂ ಆರ್ಚ್‍ಬಿಷಪ್ ಅಲ್ವಾರಿಸ್ ಮಾರ್ ಜೂಲಿಯಸ್ ಹಾಗೂ ಸೈಂಟ್ ಮೇರಿಸ್ ಸೀರಿಯನ್ ಓರ್ಥೊಡಕ್ಸ್ ಕ್ಯಾಥೆಡ್ರಲ್ ಇದರ ಪ್ರಥಮ ಧರ್ಮಗುರು ವಂ ಆರ್ ಝಡ್ ನೊರೋನ್ಹಾ ಅವರಿಗೆ ಭಾನುವಾರ ‘ಆಶೀರ್ವದಿಸಲ್ಪಟ್ಟವರು” ಎಂದು ಅಧಿಕೃತವಾಗಿ ಘೋಷಣೆಯನ್ನು ಮಾಡಲಾಯಿತು.
ಸೈಂಟ್ ಮೇರಿಸ್ ಸೀರಿಯನ್ ಓರ್ಥೊಡಕ್ಸ್ ಕ್ಯಾಥೆಡ್ರಲ್ ಬ್ರಹ್ಮಾವರ ಹಾಗೂ ಅದರ ಸಹ ಇಗರ್ಜಿಗಳಿಗೆ ಮೂರು ದಿನಗಳ ಪ್ರಥಮ ಭೇಟಿಗಾಗಿ ಆಗಮಿಸಿದ ಭಾರತೀಯ (ಮಲಂಕರ) ಸೀರಿಯನ್ ಓರ್ಥೊಡಕ್ಸ್ ಸಭೆಯ ಮಹಾಧರ್ಮಾಧ್ಯಕ್ಷ ಬಸೆಲಿಯೋಸ್ ಮಾರ್ಥೋಮಾ ಪೌಲೋಸ್ || ಅವರು ಭಾನುವಾರ ವಿಶೇಷ ಪೂಜೆಯಲ್ಲಿ ಕಿಕ್ಕಿರಿದು ತುಂಬಿದ ಪ್ರಾರ್ಥನಾ ಸಭೆಯಲ್ಲಿ ದಿ ವಂ ಆರ್ಚ್‍ಬಿಷಪ್ ಅಲ್ವಾರಿಸ್ ಮಾರ್ ಜೂಲಿಯಸ್ ಮತ್ತು ವಂ ಆರ್ ಝಡ್ ನೊರೋನ್ಹಾ ಅವರಿಗೆ ‘ಆಶೀರ್ವದಿಸಲ್ಪಟ್ಟವರು” ಎಂಬ ಬಿರುದಿನೊಂದಿಗೆ ಅಧಿಕೃತವಾಗಿ ಘೋಷಣೆ ಮಾಡಿದರು. ಈ ಬಿರುದಿನಿಂದ ಇಬ್ಬರೂ ಧರ್ಮಗುರುಗಳು ಕೂಡ ಸಂತ ಪದವಿಗೆ ಸಂಪೂರ್ಣ ಹತ್ತಿರದ ಸಾಲಿನಲ್ಲಿದ್ದಾರೆ
ಈ ವೇಳೆ ಆಶೀರ್ವಚನ ನೀಡಿ ಮಾತನಾಡಿದ ಅವರು ದಿ ವಂ ಆರ್ಚ್‍ಬಿಷಪ್ ಅಲ್ವಾರಿಸ್ ಮಾರ್ ಜೂಲಿಯಸ್ ಹಾಗೂ ವಂ ಆರ್ ಝಡ್ ನೊರೋನ್ಹಾ ಧರ್ಮಗುರುಗಳು ತಮ್ಮ ಅವಿರತ ಸೇವೆ ಹಾಗೂ ತ್ಯಾಗಭರಿತ ಜೀವನದ ಫಲದಿಂದ ಪವಿತ್ರ ಧರ್ಮಸಭೆಯ ದೈವ ಸಾನಿದ್ಯವನ್ನು ಹತ್ತಿರದಿಂದ ಅನುಭವಿಸಿದ ತಾರೆಗಳಾಗಿದ್ದಾರೆ. ಅವರ ಜೀವನದ ಪ್ರೇರಣೆಯಿಂದಾಗಿ ಇಂದಿಗೂ ಈ ಭಾಗದ ಕ್ರೈಸ್ತ ಸಮುದಾಯ ತಮ್ಮ ವಿಶ್ವಾಸವನ್ನು ಧರ್ಮಸಭೆಯ ಮೇಲೆ ಗಟ್ಟಿಯಾಗಿಸಲು ಸಹಾಯವಾಗಿದೆ. ಜನರ ಸೇವೆಗಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟು ಸಮುದಾಯದಲ್ಲಿ ವಿಶ್ವಾಸವನ್ನು ಶಾಶ್ವವಾಗಿರಿಸುವಲ್ಲಿ ಅವಿರತ ಶ್ರಮಿಸಿದರು. ಇದರಿಂದಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಜನರಿಂದ ಬಂದ ಬೇಡಿಕೆಯಿಂದಾಗಿ ಅವರು ಇಂದು ಸಂತ ಪದವಿಗೆ ಹತ್ತಿರವಾಗಿದ್ದಾರೆ. ಜನರು ಇನ್ನೂ ಕೂಡ ಅವರ ದೈವ ಭಕ್ತಿಯ ಜೀವನದಿಂದ ಪ್ರೇರಣೆಗೊಂಡು ಅವರು ಹಾಕಿಕೊಟ್ಟ ದಾರಿಯಲ್ಲಿ ಬದುಕಬೇಕಾಗಿದೆ. ಆಲ್ವಾರಿಸ್ ಹಾಗೂ ನೊರೊನ್ಹಾ ಧರ್ಮಗುರುಗಳು ಕೇವಲ ಅಕ್ಷರದಲ್ಲಿ ಬರೆದು ಇಟ್ಟಿರುವ ಸಂತರಾಗದೆ ಪ್ರತಿಯೊಬ್ಬರ ಹೃದಯದಲ್ಲಿ ಸದಾ ಉಳಿಯುವ ಸಂತರಾಗಿ ಶಾಶ್ವತವಾಗಿರಬೇಕಾಗಿದೆ ಅದಕ್ಕೆ ನಾವು ಜೀವಿಸುವ ಜೀವನ ಅವರಿಗೆ ಮಾದರಿಯಾಗಬೇಕು.
ತನ್ನ ಮೂರು ದಿನದ ಐತಿಹಾಸಿಕ ಭೇಟಿಯಲಿಲ್ಲಿ ತಾನು ಈ ಭಾಗದ ಜನರು ಪವಿತ್ರ ಧರ್ಮಸಭೆಯ ಮೇಲೆ ಇಟ್ಟಿರುವ ವಿಶ್ವಾಸವನ್ನು ಗಮನಿಸಿದ್ದೇನೆ. ತಾನು ತನ್ನ ಹುದ್ದೆಯನ್ನು ಸ್ವೀಕರಿಸಿದ ಪ್ರಥಮ ಹಂತದಲ್ಲಿಯೇ ರೋಮನ್ ಕ್ಯಾಥೊಲಿಕ್‍ರ ಪರಮ ಶ್ರೇಷ್ಟ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಇತರ ಕ್ರೈಸ್ತ ಸಭೆಗಳ ಉನ್ನತ ನಾಯಕರುಗಳನ್ನು ಕೂಡ ಭೇಟಿ ಮಾಡಿ ಜನರನ್ನು ಇನ್ನಷ್ಟು ಪವಿತ್ರ ಧರ್ಮಸಭೆಯಲ್ಲಿ ವಿಶ್ವಾಸವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇನೆ. ಈ ಭಾಗದಲ್ಲಿ ಧರ್ಮಸಭೆಯ ಮೇಲೆ ಇಟ್ಟಿರುವ ವಿಶ್ವಾಸ ನಿಜಕ್ಕೂ ಅಭಿನಂದನೀಯ ಇದು ಇನ್ನಷ್ಟು ಹೆಚ್ಚಾಗಬೇಕು. ಮಲಂಕರ ಸೀರಿಯನ್ ಓರ್ಥೊಡಕ್ಸ್ ಸಭೆಯು ಸದಾ ತಮ್ಮೊಂದಿಗೆ ಇದ್ದು ಈ ಭಾಗದಲ್ಲಿ ಇನ್ನಷ್ಟು ಅಭಿವೃಧ್ದಿ ಕಾಣಲು ಸಹಕಾರ ನೀಡಲಿದೆ ಎಂದರು.
ವಂ ಆರ್ ಝಡ್ ನೊರೋನ್ಹಾ ಕುಟುಂಬಿಕರು ಹಾಗೂ ಸುಮಾರು 2000 ಕ್ಕೂ ಅಧಿಕ ಭಕ್ತಾದಿಗಳು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಬ್ರಹ್ಮಾವರ ಮೆಟ್ರೊಪಾಲಿಟನ್ ಧರ್ಮಾಧ್ಯಕ್ಷ ವಂ ಯಾಕೂಬ್ ಮಾರ್ ಇಲಿಯಾಸ್, ಸೈಂಟ್ ಮೇರಿಸ್ ಸೀರಿಯನ್ ಓರ್ಥೊಡಕ್ಸ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ವಂ ಸಿ ಎ ಐಸಾಕ್, ಸಹಾಯಕ ಧರ್ಮಗುರುಗಳಾದ ವಂ ಲಾರೆನ್ಸ್ ಡಿ’ಸೋಜಾ, ವಂ ಲೋರೆನ್ಸ್ ಡೇವಿಡ್ ಕ್ರಾಸ್ತಾ, ವಂ ನೊಯೆಲ್ ಲೂವಿಸ್, ವಂ ಅಬ್ರಾಹಾಂ ಕುರಿಯಾಕೊಸ್, ಚರ್ಚಿನ ಟ್ರಸ್ಟಿಗಳಾದ ಅನಿಲ್ ರಾಡ್ರಿಗಸ್, ವಿಲ್ಸನ್ ಲೂವಿಸ್, ಜೋನ್ಸನ್ ಕ್ರಾಸ್ತಾ ಇನ್ನಿತರರು ಉಪಸ್ಥಿತರಿದ್ದರು.