ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು.
ಪಕ್ಷದ ಕೋಡಿಯಾಲಬೈಲ್ ಕಛೇರಿಯಲ್ಲಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕರುಗಳಾದ ಶ್ರೀ ಸುನೀಲ್ ಕುಮಾರ್, ಕ್ಯಾ|ಗಣೇಶ್ ಕಾರ್ಣಿಕ್, ಶಾಸಕ ಎಸ್.ಅಂಗಾರ, ಜಿಲ್ಲಾಧ್ಯಕ್ಷರುಗಳಾದ ಕೆ.ಪ್ರತಾಪಸಿಂಹ ನಾಯಕ್, ತಿಂಗಳೆ ವಿಕ್ರಮಾರ್ಜುನ ಹೆಗಡೆ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಕಾರ್ಯದರ್ಶಿ ಶ್ಯಾಮಲ ಕುಂದರ್, ಉಭಯ ಜಿಲ್ಲೆಯ ಮಾಜಿ ಶಾಸಕರುಗಳು, ಕೃಷ್ಣ ಪಾಲೆಮಾರ್, ರುಕ್ಮಯ್ಯ ಪೂಜಾರಿ, ಮೋನಪ್ಪ ಭಂಡಾರಿ, ಲಾಲಾಜಿ ಮೆಂಡನ್, ದ.ಕ.ಜಿಲ್ಲಾ ಪಂಚಾಯತಿನ ಅಧ್ಯಕ್ಷೆ ಆಶಾ ತಿಮ್ಮಪ್ಪ, ಉಪಾಧ್ಯಕ್ಷ ಸತೀಶ್ ಕುಂಪಲ ಹಾಗೂ ಇತರ ಜಿ.ಪಂ., ತಾ.ಪಂ., ಜನಪ್ರತಿನಿಧಿಗಳು, ಇತರ ಪ್ರಮುಖ ಕಾರ್ಯಕರ್ತರ ಸಭೆಯು ಜರಗಿತು.
ಸಂಸದ ನಳಿನ್ ಕುಮಾರ್ ಬಿಜೆಪಿ ಮೂಲಕ 3ನೇ ಬಾರಿ ವಿಧಾನಪರಿಷತ್ತಿನ ಸ್ಥಳೀಯಾಡಳಿತ ಸಂಸ್ಥೆಗೆ ಸ್ಪರ್ಧೆ ಮಾಡುತ್ತಿರುವ ಕೋಟ ಶ್ರೀನಿವಾಸ ಪೂಜಾರಿಯವರು ಪಂಚಾಯತ್‍ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ ಸದನದ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ದುಡಿದಿದ್ದು, ಈ ಹಿನ್ನಲೆಯಲ್ಲಿ ಪಾರ್ಟಿ ಮತ್ತೊಮ್ಮೆ ಪೂಜಾರಿಯವರ ಸ್ಪರ್ಧೆಗೆ ಅವಕಾಶ ನೀಡಿದೆ. ಅವಳಿ ಜಿಲ್ಲೆಗಳಲ್ಲಿ ಬಿಜೆಪಿ ಒಟ್ಟು ಸಂಘಟನಾತ್ಮಕ ಹೋರಾಟದ ಮೂಲಕ ರಾಜ್ಯದಲ್ಲೇ ಗರಿಷ್ಠ ಮತಗಳ ಅಂತರದಿಂದ ಜಯ ಗಳಿಸಲಿದೆ ಎಂದು ತಿಳಿಸಿ, ಒಂದೆಡೆ ಬಿಜೆಪಿಯ ಒಮ್ಮತದ ಹೋರಾಟ, ಮತ್ತೊಂದೆಡೆ ಕಾಂಗ್ರೆಸ್‍ನಲ್ಲಿ ಬಂಡುಕೋರರ ಆರ್ಭಟ ಇದರ ಫಲಿತಾಂಶ ಮುಂದಿನ ಜಿಲ್ಲೆ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಶಕ್ತಿ ನೀಡಲಿದೆ ಎಂದು ಹೇಳಿ, ಅಭ್ಯರ್ಥಿಗೆ ಶುಭವನ್ನು ಕೋರಿದರು. ಅದೇ ರೀತಿ ಉಳಿದ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗೆ ಶುಭ ಹಾರೈಸಿದರು. ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಪಕ್ಷ ತನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಪ್ರಾಮಾಣಿಕವಾಗಿ ಪಕ್ಷ ಮತ್ತು ಜವಾಬ್ದಾರಿಯುತ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡುತ್ತೇನೆ ಚುನಾವಣೆಯಲ್ಲಿ ಗೆಲ್ಲಿಸಲು ಎಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.