ಕೋಟ: ಕಳೆದ 36 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಕೋಡಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ನಂತರ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಪಕ್ಷದ ವಿವಿಧ ಹುದ್ದೆಯನ್ನಲಂಕರಿಸಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ್ದಿದ್ದೇನೆ ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಕಾರ್ಯಕರ್ತರನ್ನು ಕಡೆಗಣಿಸಿದೆ ಮತ್ತು ಕಾರ್ಯಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ತಿಳಿಸಿದರು.
ಅವರು ಬುಧವಾರ ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾ ಭವನದಲ್ಲಿ ಮಂಗಳೂರಿಗೆ ವಿಧಾನ ಪರಿಷತ್ ಚುನಾವಣೆಗೆ ಕಾರ್ಯಕರ್ತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೆರಳುವ ಮುನ್ನ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಒಂದು ತಿಂಗಳ ಹಿಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆಯಲಾದ ಸಭೆಯಲ್ಲಿ ಎಲ್ಲರು ಅಭ್ಯರ್ಥಿಗಳು ಎನ್ನುವ ರೀತಿಯಲ್ಲಿ ಸಿದ್ಧತೆ ನಡೆಸಿ, ಆಕಾಂಕ್ಷಿಗಳು ಸಂಜೆ ಒಳಗೆ ಅರ್ಜಿ ನೀಡುವಂತೆ ಸೂಚಿಸಿದ್ದರು. ಆದರೆ ಆ ಸಂದರ್ಭ ಪ್ರತಾಪ್‍ಚಂದ್ರ ಶೆಟ್ಟಿ ಅವರು ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರಲಿಲ್ಲ ಆದರೂ ಕೆಲವು ಬೆಂಬಲಿಗರ ಒತ್ತಾಯಕ್ಕೆ ಪಕ್ಷ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಉಳಿದವರಿಗೆ ಬೇಸರ ಮೂಡಿಸಿದೆ. ಪಕ್ಷಕ್ಕೆ ಹೆಗ್ಡೆಯಂತ ದಕ್ಷ ಪ್ರಾಮಾಣಿಕ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಇರುವುದು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ನಾನು ಕೂಡ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಬಳಿಕ ಮಾತನಾಡಿದ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, 9 ವರ್ಷಗಳಿಂದ ನಾನು ಸ್ಪರ್ದಿಸುವುದಿಲ್ಲ ಮುಂದೆ ರೈತ ಸಂಘದ ಮುಖಂಡನಾಗಿ ದುಡಿಯುತ್ತೇನೆ ಎಂದ ಪ್ರತಾಪಚಂದ್ರಶೆಟ್ಟಿ ಅವರಿಗೆ ಈ ಭಾಗದ ಸಂಪೂರ್ಣ ಕಾರ್ಯಕರ್ತರ ನಿರ್ಧಾರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕ ಪಕ್ಷೀಯವಾಗಿ ಅಭ್ಯರ್ಥಿಯಾಗಿ ಘೋಷಿಸಿರುವುದು ಸರಿಯಲ್ಲ. ಪಕ್ಷಕ್ಷೆ ಕಾರ್ಯಕರ್ತರ ಅವಶ್ಯಕತೆ ಇದೆ, ಎಲ್ಲವನ್ನು ಮುಖಂಡರೇ ತೀರ್ಮಾನ ತೆಗೆದುಕೊಳ್ಳುವುದಾದರೆ ಕಾರ್ಯಕರ್ತರ ಅವಶ್ಯಕತೆ ಪಕ್ಷಕ್ಕೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಈ ಭಾಗದಿಂದ ನಾನು, ಭುಜಂಗ ಶೆಟ್ಟಿ ಮತ್ತು ಶಂಕರ ಕುಂದರ್ ಅವರು ನಾಮಪತ್ರ ಸಲ್ಲಿಸಿದ್ದೇವೆ, ನಮ್ಮಲ್ಲಿ ಒಮ್ಮತವಿದೆ. ಹೈಕಮಾಂಡಗೆ ಅಭ್ಯರ್ಥಿ ಆಯ್ಕೆಯಲ್ಲಿ ಪುನರ್‍ವಿಮರ್ಶೆಗೆ ಅವಕಾಶವಿದೆ. ಪ್ರತಾಪಚಂದ್ರ ಶೆಟ್ಟಿ ಅವರೂ ಕೂಡ ಪಕ್ಷಕ್ಕಾಗಿ ತ್ಯಾಗ ಮಾಡುವ ವಿಚಾರ ಪ್ರಸ್ತಾಪಿಸುವುದನ್ನು ಗಮನಿಸಿದ್ದೇವೆ. ಒಂದು ಆಶಾಬಾವ ಇನ್ನು ಕೂಡ ಇದೆ ಎಂದರು.
ಈ ಸಂದರ್ಭ ಕೋಟ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಐರೋಡಿ ಪಂಚಾಯಿತಿ ಅಧ್ಯಕ್ಷ ಮೊಸೆಸ್ ರೋಡ್ರಿಗಸ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್, ನಾಮ ನಿರ್ದೇಶಕ ಸದಸ್ಯರಾದ ಮಹಾಬಲ ಮಡಿವಾಳ, ಕಾರ್ಕಡ ಅಚ್ಯುತ ಪೂಜಾರಿ, ಬ್ಲಾಕ್ ಕಾರ್ಯದರ್ಶಿ ಗೋಪಾಲ ಬಂಗೇರ, ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.
ಕೋಟ: ನಿಷ್ಟಾವಂತ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿದೆ ; ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್
Spread the love
Spread the love