ಬ್ರಹ್ಮಾವರ: ಸೋದರತ್ತೆಯಿಂದ ಬಾಲಕಿಗೆ ಹಿಂಸೆ ಆರೋಪ; ಮಾನವ ಹಕ್ಕುಗಳ ಸಂಘಟನೆಯಿಂದ ರಕ್ಷಣೆ

Spread the love

ಬ್ರಹ್ಮಾವರ: ಬ್ರಹ್ಮಾವರ ಬೈಕಾಡಿ ಸಾಲಿಕೇರಿಯ ಗಾಂಧಿನಗರದಲ್ಲಿ ಸಾಕು ಮಗಳನ್ನು ಹಿಂಸಿಸುತ್ತಾ ಮನೆಗೆಲಸ ಮಾಡಿಕೊಂಡು ಅತ್ಯಂತ ಕ್ರೂರವಾಗಿ ವರ್ತಿಸುತ್ತಿದ್ದ ಮನೆಗೆ ಮಂಗಳವಾರ ಮಧ್ಯಾಹ್ನ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಬ್ರಹ್ಮಾವರ ಪೊಲೀಸ್ ಸಹಕಾರದಲ್ಲಿ ಧಿಢೀರ್ ಧಾಳಿ ನಡೆಸಿ, ಹಿಂಸೆಗೆ ಒಳಗಾಗಿದ್ದ ಹುಡುಗಿಯನ್ನ ರಕ್ಷಿಸಿದ ಪ್ರಕರಣ ನಡೆದಿದೆ. ಊರಿನವರ ನೀಡಿದ ಸಹಕಾರದಿಂದ ಹುಡುಗಿ ಸದ್ಯ ನರಕದಿಂದ ಮುಕ್ತಿ ಪಡೆದು ಹೊಸ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿ ಮಾನವ ಹಕ್ಕುಗಳ ಸಂಘಟನೆಗೆ ನೆರಳಿನಡಿ ಬಂದಿದ್ದಾಳೆ.

hr_brahmavar 08-12-2015 15-27-41 hr_brahmavar 08-12-2015 15-27-58 hr_brahmavar 08-12-2015 15-32-36 hr_brahmavar 08-12-2015 15-39-18

ಬ್ರಹ್ಮಾವರದ ಹಾರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೈಕಾಡಿ ಗಾಂಧಿನಗರ ಕಾಲೋನಿಯ ಗಿರಿಜಾ(50) ಸದ್ಯ ಹುಡುಗಿಯೊಂದಿಗೆ ರಾಕ್ಷಸೀಯವಾಗಿ ವರ್ತಿಸಿ ಸಾರ್ವಜನಿಕರಿಂದ ಛೀಮಾರಿಗೆ ಒಳಗಾದವರು. 5 ವರ್ಷ ಹಿಂದೆ 7ನೇ ತರಗತಿ ಕಲಿಯುತ್ತಿದ್ದ ನೇತ್ರಾವತಿ(17) ಅವಳು ತಂದೆ ತಾಯಿಯ ಮರಣಾನಂತರ ನೋಡುವವರು ದಿಕ್ಕಿಲ್ಲದ ಕಾರಣ ಆಶ್ರಯವನ್ನರಸಿ ತನ್ನ ಅತ್ತೆ ಗಿರಿಜಾ ಅವರ ಮನೆಗೆ ಬಂದು ನೆಲೆಸಿದ್ದಳು. ಮೊದಲು ಅಕ್ಕರೆಯಿಂದಲೇ ನೋಡಿಕೊಳ್ಳುತ್ತಿದ್ದ ಗಿರಿಜಾ ಅವರು ನೇತ್ರಾವತಿಯನ್ನು ಶಾಲೆಗೆ ಸೇರಿಸಿದ್ದರು. ಆದರೆ 9ನೇ ತರಗತಿ ಕಲಿಯುತ್ತಿರುವ ವೇಳೆ ಪದೇ ಪದೇ ಚಿಕ್ಕ ಪುಟ್ಟ ವಿಚಾರ ಹಿಡಿದು ನೇತ್ರಾವತಿಯನ್ನು ಹಿಂಸಿಸುವುದನ್ನು ಮಾಡುತ್ತಿದ್ದ ಹಿನ್ನಲೆಯಲ್ಲಿ, ಎದುರು ವಾದಿಸುದಕ್ಕೆ ಶುರು ಮಾಡಿದ್ದಾಳೆ ಎಂದು ಮತ್ತಷ್ಟು ಹಿಂಸೆ ನೀಡುತ್ತಿದ್ದರು. ನಿರಂತರ ಹಿಂಸೆ ನಡುವೆಯೇ ಜೀವನ ನಡೆಸಿದ್ದ ನೇತ್ರಾವತಿ ತನ್ನ ನೋವನ್ನು ಯಾರೊಂದಿಗೂ ಕೂಡ ಹೇಳಿಕೊಳ್ಳಲು ಕೂಡ ಬಿಡುತ್ತಿರಲಿಲ್ಲ ಮತ್ತು ಮನೆಯ ಹಿಂದೆ ನಾಯಿ ಮಲಗಲು ಇರುವಂತೆ ಇರುವ ಜಾಗದಲ್ಲಿ ಮಲಗುವ ವ್ಯವಸ್ಥೆ ನೀಡಿದ್ದರು, ಹಳೆಯ ಹರಕು ಜಾಪೆಯಲ್ಲಿ ಭಯದಿಂದಲೇ ರಾತ್ರಿ ಕಳೆಯುತ್ತಿದ್ದೆ ಎಂದು ತಿಳಿಸಿದ್ದಾಳೆ.

 ಈ ವರ್ಷ ಉಡುಪಿಯ ಹುಡುಗಿಯರ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸೋಮವಾರದಂದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಶುರು ಮಾಡಿದ ಗಿರಿಜ ಅವರು ನೇತ್ರಾವತಿ ಹೊಡೆದು ಕಣ್ಣಿಗೆ ಮೆಣಸಿನ ಪುಡಿ ಹಾಕಿ ಹಿಂಸಿಸಿದ್ದರು. ಈ ಬಗ್ಗೆ ದೊಡ್ಡ ಜಗಳವಾದಾಗ ಅಕ್ಕ ಪಕ್ಕದ ಮನೆಯವರು ಕೂಡ ಗಮನಿಸಿದ್ದಾರೆ. ಈ ಬಗ್ಗೆ ನೇತ್ರಾವತಿಯ ಸ್ನೇಹಿತರೋರ್ವರು ಮಾನವ ಹಕ್ಕು ಸಂಘಟನೆಗೆ ತಿಳಿಸಿ, ಕಿಟಕಿಯ ಮೂಲಕ ಮಾನವ ಹಕ್ಕು ಸಂಘಟನೆಯವರೊಂದಿಗೆ ತನಗೆ ಇಲ್ಲಿ ಆಗುತ್ತಿರುವ ಸಮಸ್ಯೆ ನೋವು ಹಿಂಸೆಯ ಬಗ್ಗೆ ತಿಳಿಸಿದ್ದಾಳೆ.

 ಮಂಗಳವಾರದಂದು ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಪ್ರಶಾಂತ್, ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ, ಪ್ರಭಾಕರ್ ಮತ್ತು ಇತರೇ ಕಾರ್ಯಕರ್ತರು ಈ ಪ್ರಕರಣದ ಬಗ್ಗೆ ಪೊಲೀಸ್‍ರಿಗೆ ಮಾಹಿತಿ ನೀಡಿ ಅನುಮತಿ ಪಡೆದು, ಪೊಲೀಸ್ ಸಿಬ್ಬಂದಿಗಳೊಂದಿಗೆ ತೆರಳಿ ಗಿರಿಜಾ ಅವರ ಮನೆಗೆ ಧಾಳಿ ನಡೆಸಿ ನೇತ್ರಾವತಿಯ ಬಳಿ ಎಲ್ಲಾ ಮಾಹಿತಿ ಪಡೆದು ಕರೆ ತಂದಿದ್ದಾರೆ. ಧಾಳಿ ನಡೆಸುವ ವೇಳೆ ಮನೆಯಲ್ಲಿ ಬೇರೆ ಊರಿನ ಇರ್ವರು ಯುವಕರು ಇರುವುದನ್ನು ಪತ್ತೆ ಹಚ್ಚಿದ ಸ್ಥಳೀಯರು ಪೊಲೀಸ್‍ರಿಗೆ ತಿಳಿಸಿ ಹೊರ ಬರುವಂತೆ ಕೋರಿದ್ದಾರೆ. ಇದೇ ವೇಳೆ ನೇತ್ರಾವತಿಯ ರಕ್ಷಣೆಗೆ ನಿಂತ ಸ್ಥಳೀಯ ಯುವಕರು ಮತ್ತು ಮನೆಯಲ್ಲಿ ಅವಿತಿದ್ದ ಯುವಕರ ನಡುವೆ ಮಾತಿನ ಚಕುಮಕಿ ನಡೆಯಿತು.

 ಬೈಕಾಡಿಯಿಂದ ನೇತ್ರಾವತಿಯನ್ನು ಕರೆ ತಂದು ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಡೆದ ಘಟನೆಯಿಂದ ಭಯ ಭೀತಳಾಗಿದ್ದ ನೇತ್ರಾವತಿಗೆ ಮಾನವ ಹಕ್ಕುಗಳ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯ ಯುವಕರು ಧೈರ್ಯ ಹೇಳುವ ಕಾರ್ಯ ಮಾಡಿದ್ದಾರೆ. ಇಷ್ಟು ದಿನಗಳವರೆಗೆ ಹುಡುಗಿಗೆ ಆಗುತ್ತಿದ್ದ ಅನ್ಯಾಯವನ್ನು ಕಣ್ಣಾರೆ ಕಾಣುತ್ತಿದ್ದ ಅಕ್ಕಪಕ್ಕದವರು ಈ ಪ್ರಕರಣ ನಡೆದ ಬಳಿಕ ಗಿರಿಜಾ ಅವರ ರಾಕ್ಷಸೀಯ ಗುಣಗಳ ಬಗ್ಗೆ ಮಾತನಾಡುತ್ತಿದ್ದಾರೆ. ಸ್ಥಳೀಯ ಉತ್ಸಾಹಿ ಯುವಕರ ತಂಡ ಮಾನವೀಯತೆಯ ನೆಲೆಯಲ್ಲಿ ಹುಡುಗಿಗೆ ಸಹಾಯ ಹಸ್ತ ಚಾಚಿರುವುದು ಗಿರಿಜಾ ಅವರ ಕಣ್ಣು ಕುಕ್ಕಿದ್ದು, ಮುಂದೆ ಎಲ್ಲರನ್ನು ನೋಡಿಕೊಳ್ಳುವುದಾಗಿ ಮಾಧ್ಯಮದವರ ಮುಂದೆ ಬೆದರಿಕೆ ಹಾಕಿದ ಘಟನೆಯೂ ಇದೇ ಸಂದರ್ಭ ನಡೆದಿದೆ.

ಮಾನವ ಹಕ್ಕುಗಳ ಸಂಘಟನೆಯ ಪ್ರಶಾಂತ್ ಪಿಆರ್‍ಎಸ್ ಮತ್ತು ಅರುಣ್ ಕುಂದರ್ ಕಲ್ಗದ್ದೆ ಮಾತನಾಡಿ ಸೋಮವಾರದಂದು ಈ ಘಟನೆಯ ಬಗ್ಗೆ ನಮಗೆ ಸ್ಥಳೀಯೋರ್ವರ ಮೂಲಕ ಮಾಹಿತಿ ಲಭಿಸಿದೆ. ಹುಡುಗಿಯನ್ನು ಕಾಲೇಜು ಬಿಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವುದರ ಬಗ್ಗೆ ಹುಡುಗಿಯೇ ತಿಳಿಸಿದ್ದಾಳೆ. ಆ ಹಿನ್ನಲೆಯಲ್ಲಿ ಹುಡುಗಿಗೆ 18 ವರ್ಷ ತುಂಬುವವರೆಗಿನ ಆಕೆಯ ಶಿಕ್ಷಣ ವಸತಿ ಮತ್ತು ಇನ್ನುಳಿದ ವ್ಯವಸ್ಥೆಯನ್ನು ಬ್ರಹ್ಮಾವರದ ಓಂ ಶ್ರೀ ಸೃಷ್ಠಿಧಾಮ ನೋಡಿಕೊಳ್ಳಲಿದೆ. ಉತ್ತಮ ಭವಿಷ್ಯ ರೂಪಿಸಿಕೊಡುವ ಆಶಯ ನಮ್ಮದು.

ನೊಂದ ಹುಡುಗಿ ನೇತ್ರಾವತಿ ಮಾತನಾಡಿ ದಿನ ನಿತ್ಯವು ಹೊಡೆಯುತ್ತಿದ್ದರು. ಸ್ನೇಹಿತೆಯ ಮನೆಗೆ ಹೋಗುವಂತಿರಲಿಲ್ಲ, ಮಂಗಳೂರು ಕಡೆಯಲ್ಲಿ ಮನೆಗೆಲಸ ಮಾಡಿ ಬದುಕುತ್ತಿರುವ ನನ್ನ ಅಜ್ಜಿ ಬಂದರೆ ನನ್ನ ಜೊತೆ ಮಾತನಾಡಲು ಬಿಡುವುದಿಲ್ಲ. ಇತ್ತೀಚೆಗೆ ಜಾಸ್ತಿ ಮಾತನಾಡಿದರೆ ನಿನಗೆ ಇನ್ನು ಆರು ತಿಂಗಳಿನಲ್ಲಿ ಮದುವೆ ಮಾಡಿಸುತ್ತೇನೆ ಎನ್ನುತ್ತಾರೆ. ಮನೆ ಹಿಂದೆ ಸೌದೆ ಕೊಟ್ಟಿಗೆಯಲ್ಲಿ ಮಲಗುತ್ತೇನೆ. ನನಗೆ ಇಲ್ಲಿ ಇರಲು ಇಷ್ಟ ಇಲ್ಲ ಹಿಂಸೆ ನೀಡಿ ಕೊಲ್ಲುತ್ತಾರೆ.


Spread the love