Home Mangalorean News Kannada News 17ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಉಚಿತ ಚಿಕಿತ್ಸೆ

17ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಉಚಿತ ಚಿಕಿತ್ಸೆ

Spread the love

17ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಉಚಿತ ಚಿಕಿತ್ಸೆ

ಮ0ಗಳೂರು : ಅಕ್ಟೋಬರ್ 17 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗುವುದು.

ಈ ಕಾರ್ಯಕ್ರಮದ ಪೂರ್ವಸಿದ್ಧತೆಗಾಗಿ ಬುಧವಾರ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಭೆ ಜರುಗಿತು. ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಜೊತೆಗೆ ಆಯುರ್ವೇದ ಚಿಕಿತ್ಸಾ ಪದ್ಧತಿಗಳಲ್ಲಿ ನೋವು ನಿವಾರಣೆಗಾಗಿ ಲಭ್ಯವುಳ್ಳ ವಿಶಿಷ್ಟ ಚಿಕಿತ್ಸಾ ಪದ್ಧತಿಗಳ ಪರಿಚಯ, ಉಚಿತ ಚಿಕಿತ್ಸಾಸೇವೆಗಳೊಂದಿಗೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಮಾಜದ ಎಲ್ಲಾ ಸ್ಥರಗಳ ಜನರನ್ನು ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಡಳಿತ,ಆಯುಷ್ ಇಲಾಖೆ, ಆಯುಷ್ ಕಾಲೇಜುಗಳು ಹಾಗೂ ವಿವಿಧ ಸಂಘಸಂಸ್ಥೆಗಳು ಸಹಕಾರ ನೀಡುತ್ತಿವೆ. ಜಿಲ್ಲೆಯಾದ್ಯಂತ ಕರ್ತವ್ಯನಿರತ ವೃತ್ತಿಪರ ಖಾಸಗಿ ಆಯುರ್ವೇದ ವೈದ್ಯರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ವೈದ್ಯಪದ್ಧತಿಯಾದ ಅಯುರ್ವೇದದ ಪ್ರಯೋಜನವನ್ನು ಮನೆ ಮನೆಗೆ ತಲುಪಿಸಲು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿ, ಅ.17ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯುರ್ವೇದ ಮಹಾವಿದ್ಯಾಲಯಗಳಲ್ಲಿ ಸರಕಾರಿ ಹಾಗೂ ಖಾಸಗಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಉಚಿತ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವ ಜೊತೆಗೆ ಕಟಿಬಸ್ತಿ, ಜಾನುಬಸ್ತಿ, ಗ್ರೀವಾಬಸ್ತಿ ಇತ್ಯಾದಿ ನೋವುನಿವಾರಣೆಗಾಗಿ ವಿಶಿಷ್ಟ ಚಿಕಿತ್ಸಾಕ್ರಮಗಳ ಉಚಿತ ಸೇವೆ ನೀಡಲಾಗುತ್ತದೆ. ತಾಲ್ಲೂಕುಮಟ್ಟದಲ್ಲಿ ಕಾರ್ಯಾಗಾರ, ಪ್ರದರ್ಶನಮಳಿಗೆಗಳು ಜನಜಾಗೃತಿ ಜಾಥಾ ಮೊದಲಾದ ಕಾರ್ಯಕ್ರಮಗಳನ್ನು ಆಯುರ್ವೇದ ಚಿಕಿತ್ಸಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದರು.

ಪ್ರಧಾನ ಕಾರ್ಯಕ್ರಮವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಆರ್‍ಎಪಿಸಿಸಿ ಸಭಾಂಗಣದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ .ಬಿ.ರಮಾನಾಥ ರೈಯವರು ಉದ್ಘಾಟನೆ ಮಡಲಿದ್ದಾರೆ. ಸ್ಥಳೀಯ ಶಾಸಕರಾದ .ಜೆ.ಆರ್.ಲೋಬೋ ರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯುರ್ವೇದ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಅವರು ಹೇಳಿದರು.


Spread the love

Exit mobile version