ಮಂಗಳೂರು : ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ದಿನಗಳೆಂದು ಘೋಷಿಸುವ ನಿಯಮವನ್ನು ಹಿಂಪಡೆಯುವುದು, ಹಾಗೂ ಪುನರ್ ಪರಿಶೀಲಿಸುವುದು ಸೂಕ್ತ ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ನಗರಾಭಿವೃದಿ ಇಲಾಖೆಯ ಸರಕಾರದ ಪ್ರ. ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಆದೇಶದಲ್ಲಿ ನಮೂದಿಸಲಾದ ಕೆಲವೊಂದು ಹಬ್ಬಗಳಿಗೆ ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ಮಹತ್ವ ಇಲ್ಲ. ಉದಾಹರಣೆಗೆ ರಾಮಲಿಂಗ ಅಡಿಕಲಾರ್ ಮೆಮೋರಿಯಲ… ದಿನ ಎಂಬ ದಿನವು ವರ್ಷದಲ್ಲಿ ಯಾವ ದಿನ ಬರುತ್ತದೆ, ಯಾವ ಸಮುದಾಯದವರು ಆಚರಿಸುತ್ತಾರೆ, ಯಾವ ಜಿಲ್ಲೆಯಲ್ಲಿ ಈ ಸಮುದಾಯದವರು ವಾಸವಿದ್ದಾರೆ ಅಥವಾ ಈ ದಿನದ ಮಹತ್ವವೇನು ಎಂಬ ಬಗ್ಗೆ ಈ ಜಿಲ್ಲೆಯ ಜನತೆಗೆ ತಿಳಿದಿಲ್ಲ. ಅಂತಹ ದಿನಗಳಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡುವುದರಲ್ಲಿ ಔಚಿತ್ಯ ಕಂಡು ಬರುವುದಿಲ್ಲ ಎಂದವರು ತಿಳಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ
ಹಲವಾರು ಜಿಲ್ಲೆಗಳಲ್ಲಿ ಬೌದ್ಧ ಮತದವರು ನೆಲೆಸಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಇವರು ಮಾಂಸಹಾರಿಗಳಾಗಿದ್ದು ಮಾಂಸ ಮಾರಾಟ ನಿಷೇಧವನ್ನು ಒಪ್ಪುವುದಿಲ್ಲ. ಆ ಕಾರಣದಿಂದ ಬುದ್ದ ಜಯಂತಿ ದಿನ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡುವ ಔಚಿತ್ಯ ಕಂಡುಬರುವುದಿಲ್ಲ. ನಿರ್ದಿಷ್ಟಪಡಿಸಿದ ಹಲವಾರು ಸಣ್ಣಪ್ರಾಣಿಗಳ ಮಾರುಕಟ್ಟೆಯನ್ನು ಹೊರತುಪಡಿಸಿ ಕೆಲವೆಡೆ ಮಾತ್ರ ಮಾಂಸ ಮಾರಾಟ ಮಾಡುತ್ತಿ ರುವ ಅಂಗಡಿಗಳಿರುವ ಹಿನ್ನೆಲೆಯಲ್ಲಿ ಈ ಆದೇಶದಂತೆ ಪರಿಣಾಮ ಕಾರಿಯಾಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕಷ್ಟಸಾಧ್ಯವಾಗಿದೆ ಎಂದವರು ತಿಳಿಸಿದ್ದಾರೆ. ಪ್ರಾಣಿ ವಧೆ ನಿಷೇಧಿಸಿ ದರೂ ಸಹ ಶೀತಲೀಕರಣ ತಂತ್ರಜ್ಞಾನವನ್ನು ಬಳಸಿ ಹಲವಾರು ಕಡೆಗಳಲ್ಲಿ ಅಂತಹ ದಿನಗಳಲ್ಲಿ ಶೀತಲೀಕರಿಸಿರು ವಂತಹ ಮಾಂಸವನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತದೆ. ಹಾಲಿ ಸರಕಾರ ಹೊರಡಿಸಿರುವ ಆದೇಶದಲ್ಲಿ ಕೋಳಿ, ಮೀನು, ಮೊಟ್ಟೆಗಳನ್ನು ಹೊರತುಪಡಿಸಿದ್ದರೂ ಮಾಂಸ ಮಾರಾಟ ನಿಷೇಧಿಸಿದ ನಿರ್ದಿಷ್ಟ ದಿನಗಳಲ್ಲಿ ಇವುಗಳ ಮಾರಾಟ ಮಾಡಲು ಅವಕಾಶವಿರುವುದರಿಂದ, ಆಡು, ಕುರಿ ಮತ್ತಿತರ ಪ್ರಾಣಿಗಳಿಗೆ ಮಾತ್ರ ಇದು ಅನ್ವಯವಾಗುತ್ತಿದೆ. ಕೇವಲ ಆಡು, ಕುರಿ ಮತ್ತಿತರ ಪ್ರಾಣಿಗಳ ಬಗ್ಗೆ ಮಾತ್ರ ನಿಷೇಧವಿರುವ ಹಿನ್ನೆಲೆಯಲ್ಲಿ ಹೋಟೆಲುಗಳಲ್ಲಿ ದೊಡ್ಡ ಪ್ರಾಣಿಗಳ ಭಕ್ಷ್ಯ ತಯಾರಿಸಿದ್ದಾರೆಯೇ ಅಥವಾ ಕೋಳಿಯಂತಹ ಸಣ್ಣ ಪ್ರಾಣಿಗಳ ಭಕ್ಷ್ಯ ತಯಾರಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಿ ಕ್ರಮವನ್ನು ಜರಗಿಸಬೇಕಾಗಿರುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ಮುಜುಗರವನ್ನು ತರುವಂತಾಗಿದೆ ಎಂದವರು ತಿಳಿಸಿದ್ದಾರೆ. ಮುಕ್ತ ಮಾರುಕಟ್ಟೆ ಹಾಗೂ ಉದಾರೀಕರಣ ನೀತಿಯನ್ನು ಉತ್ತೇಜಿಸುವಂತಹ ರೀತಿ ನಿಯಮಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಯಮಗಳನ್ನು ಅಳವಡಿಸುವ ಕುರಿತು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ದಿನಗಳೆಂದು ಘೋಷಿಸುವ ನಿಯಮವನ್ನು ಹಿಂಪಡೆಯುವುದು ಹಾಗೂ ಪುನರ್ ಪರಿಶೀಲಿಸುವುದು ಸೂಕ್ತ ಎಂದು ಅವರು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು : ಮಾಂಸ ಮಾರಾಟ ನಿಷೇಧ ದಿನ ಘೋಷಣೆ ಹಿಂಪಡೆಯಲು ದ.ಕ. ಜಿಲ್ಲಾಧಿಕಾರಿ ಪತ್ರ
Spread the love
Spread the love