ಉಡುಪಿ : ಉಡುಪಿ ಜಿಲ್ಲಾ ಮಟ್ಟದಲ್ಲಿ “ಪಂಚಾಯತ್ ರಾಜ್ ಮತ್ತು ನಗರಾಡಳಿತ ಒಕ್ಕೂಟ”ವನ್ನು ರಚಿಸುವ ಉದ್ದೇಶದಿಂದ ಸಮಲೋಚನ ಸಭೆಯು ಜನವರಿ 11 ಸೋಮವಾರ ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಸಭಾಭವನದಲ್ಲಿ ಜರಗಿತು.
ನೂತನ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರು ಪಂಚಾಯತ್‍ರಾಜ್ ಮತ್ತು ನಗರ ಆಡಳಿತ ವ್ಯವಸ್ಥೆಯ ಧ್ವನಿಯಾಗಿ ಒಕ್ಕೂಟ ರಚನೆಯ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಸರಕಾರ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಂಕಷ್ಟ ವ್ಯವಸ್ಥೆಯ ದೋಷಗಳು ಆಗಾಬೇಕಾದ ಸುಧಾರಣೆಗಳ ಬಗ್ಗೆ ಗಟ್ಟಿಯಾದ ಧ್ವನಿ ಕೇಳಿಬರಲು, ತಳಮಟ್ಟದಲ್ಲಿ ಸಂಘಟನೆ ಅತೀ ಅಗತ್ಯ ಎಂದು ಸೋದಾರ್ಹಣವಾಗಿ ವಿವರಿಸಿದರು. ರಾಜ್ಯದಲ್ಲಿಯೇ ವಿನೂತವಾಗಿ ಉಡುಪಿ ಜಿಲ್ಲಾ ಮಟ್ಟದಲ್ಲಿ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯ ಜನಪ್ರತಿನಿಧಿಗಳ ಜೊತೆಗೆ ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರಸಭೆಯ ಜನಪ್ರತಿನಿಧಿಗಳನ್ನು ಸೇರಿಸಿ ಒಕ್ಕೂಟ ರಚನೆ ಮಾಡಿರುವುದು ಆಶಾದಾಯಕ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಮಟ್ಟದ ಪಂಚಾಯತ್ ರಾಜ್ ಮತ್ತು ನಗರಾಡಳಿತ ನೂತನ ಅಧ್ಯಕ್ಷರಾಗಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಹೆರ್ಗ ದಿನಕರ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಅಂತರಾಷ್ಟ್ರೀಯ ಗೂಗಲ್ ಗ್ರಾಮ ಪಂಚಾಯತ್ ಪ್ರಶಸ್ತಿ ಪುರಸ್ಕøತ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಬಳಿಕ ನೂತನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರನ್ನು ಸೇರಿಸಿಕೊಂಡು ಒಕ್ಕೂಟವನ್ನು ಇನ್ನಷ್ಟು ಬಲಪಡಿಸುವುದೆಂದು ಸರ್ವಾನುಮತದಿಂದ ನಿರ್ಣಾಯಿಸಲಾಯಿತು.
ಸಮಾಲೋಚನಾ ಸಭೆಯ ಸಂಚಾಲಕರು ಹಾಗು ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅರುಣ್ ಕುಮಾರ್ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಸ್ವಾಗತಿಸಿ ವಂದಿಸಿದರು. ಮಾಜಿ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಉಪೇಂದ್ರ ನಾಯಕ್, ಉಡುಪಿ ನಗರಸಭೆಯ ಸದಸ್ಯರಾದ ಯಶ್ ಪಾಲ್ ಸುವರ್ಣ, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕುಲಾಲ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಾರ್ಕಡ ರಾಜು ಪೂಜಾರಿ, ಕುಂದಾಪುರ ಪುರಸಭೆ ಸದಸ್ಯರಾದ ರಾಜೇಶ ಕಾವೇರಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಸುನೀತಾ ನಾಯ್ಕ, ಕಾರ್ಕಳ ಪುರಸಭಾ ವಿಪಕ್ಷ ನಾಯಕರಾದ ಪ್ರಕಾಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.