ಬೆಳ್ತಂಗಡಿ: ರಾಜ್ಯದ ಪೊಲೀಸ್ ಇಲಾಖೆ ಕಾನೂನಿನ ಚೌಕಟ್ಟಿನಲ್ಲಿ ಜನಪರವಾಗಿ ಮತ್ತು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಇತರ ರಾಜ್ಯಗಳಿಗೆ ಹೋಲಿಸಿದರೆ ದೇಶದಲ್ಲೆ ಜನಸೇವೆಯಲ್ಲಿ ಶ್ರೇಷ್ಠವಾಗಿದೆ. ಸಹಾಯ ಬಯಸಿ ಬಂದವರಿಗೆ ಸೂಕ್ತ ಸಹಕಾರ ನೀಡಿ ರಕ್ಷಣೆ ಕೊಡುವುದೇ ಪೊಲೀಸರ ಕರ್ತವ್ಯವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ಧರ್ಮಸ್ಥಳದಲ್ಲಿ ಸೋಮವಾರ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಿಪ್ರ ಗತಿಯಲ್ಲಿ ಪರಿವರ್ತನೆ ಆಗುತ್ತಿರುವ ಆಧುನಿಕ ಕಾಲದಲ್ಲಿ ಜನರ ಮನಸ್ಸಿನಲ್ಲಿ ದೇವರ ಭಯ, ಭೀತಿ, ಭಕ್ತಿ ಕಡಿಮೆಯಾಗುತ್ತಿದೆ. ದೇವರ ಮೂರ್ತಿಗಳನ್ನು ಕಳವು ಮಾಡುತ್ತಾರೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ 16000 ಹುದ್ದೆಗಳು ಖಾಲಿ ಇದ್ದು 8000 ಮಂದಿಯನ್ನು ಈಗಾಗಲೇ ನೇಮಕ ಮಾಡಲಾಗಿದೆ. ಉಳಿದ 8000 ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. 500 ಮಂದಿ ಎಸ್.ಐ ಗಳನ್ನು ನೇಮಕ ಮಾಡಲಾಗುವುದು ಎಂದರು.ದ.ಕ ಜಿಲ್ಲೆಯಲ್ಲಿ 160 ಪೊಲೀಸರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
2015 ರಲ್ಲಿ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಪ್ರಸಕ್ತ ವರ್ಷ ಹೊಸ ಪೊಲೀಸ್ ಠಾಣೆ ತೆರೆಯುವುದಿಲ್ಲ.
11000 ಪೊಲೀಸ್ ಗೃಹಗಳನ್ನು ನಿರ್ಮಿಸಲು ಯೋಜಿಸಿದ್ದು ಈಗಾಗಲೇ 3000 ಮನೆಗಳನ್ನು ನಿರ್ಮಿಸಲಾಗಿದೆ. ಈ ವರ್ಷ 5000 ಪೊಲೀಸ್ ಗೃಹಗಳನ್ನು ನಿಮರ್ಿಸಲಾಗುವುದು. ಧರ್ಮಸ್ಥಳದಲ್ಲಿರುವ ಪೊಲೀಸರಿಗೂ ಮನೆ ನಿರ್ಮಿಸಿ ಕೊಡಲಾಗುವುದು. ಹೊಸ ಪೊಲೀಸ್ ಠಾಣೆಗೆ ಆದಷ್ಟು ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು. ದೇಶದಲ್ಲಿ ಶೇ. 60 ರಷ್ಟು ಯುವಜನತೆಯಿದ್ದು ಅವರು ಉತ್ತಮ ಉದ್ಯೋಗ ಮತ್ತು ಶಿಕ್ಷಣ ಬಯಸುತ್ತಾರೆ. ಈ ದಿಸೆಯಲ್ಲಿ ಅವರಿಗೆ ಉತ್ತಮ ಅವಕಾಶ ನೀಡಿ ಸಮಾನತೆ ಮತ್ತು ಭ್ರಾತೃತ್ವದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಸಲಹೆ ನೀಡಿದರು.
ಬೆಳ್ತಂಗಡಿಗೆ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರು ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಬಹುದಿನದ ನಿರೀಕ್ಷೆಯಾದ ಪೊಲೀಸ್ ಠಾಣೆ ಉದ್ಘಾಟನೆಯಾಗಿರುವುದು ಐತಿಹಾಸಿಕ ಘಟನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಪೊಲೀಸರು ತಮ್ಮ ಅಧಿಕಾರವನ್ನು ನ್ಯಾಯಯುತವಾಗಿ ಬಳಸಿ ಎಲ್ಲಾ ವ್ಯವಹಾರಗಳು ಕಾನೂನಿನಡಿಯಲ್ಲಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಖಾಸಗಿ ವಾಹನಗಳಲ್ಲಿ ಬರುತ್ತಿರುವುದರಿಂದ ವಾಹನಗಳ ನಿಯಂತ್ರಣವನ್ನು ಪೊಲೀಸರು ಮಾಡಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ.ವಸಂತ ಬಂಗೇರ ಅಧ್ಯಕ್ಷತೆ ವಹಿಸಿದರು. ಸಚಿವ ಕೆ. ಅಭಯಚಂದ್ರ ಜೈನ್, ಪೊಲೀಸ್ ಮಹಾನಿರೀಕ್ಷಕ ಅಮೃತ್ಪಾಲ್ , ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಯುತ ಪೂಜಾರಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ಧನ್ಯವಾದವಿತ್ತರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ಮಂಗಳೂರಿನಲ್ಲಿ ಸದ್ಯದಲ್ಲಿಯೆ ಹೊಸ ಜೈಲು ನಿರ್ಮಾಣ ಮಾಡಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆ ತೆರೆಯಲಾಗುವುದು ಎಂದರು.
ಬಿ.ಜೆ.ಪಿ ಹೊರತು ಪಡಿಸಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಲು ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಅನುಮತಿ ನೀಡಲಾಗಿದೆ. 15 ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
ಮೈಸೂರು ಘಟನೆಗೆ ಖಂಡನೆ : ಮೈಸೂರಿನಲ್ಲಿ ರಾಜು ಎಂಬಾತನ ಹತ್ಯೆ ಭಾನುವಾರ ಆಕಸ್ಮಿಕವಾಗಿ ನಡೆದಿದ್ದು ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು. ಅಲ್ಲಿನ ನಾಗರಿಕರು ಅಹಿತಕರವಾಗಿ ವರ್ತಿಸಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ ಸಚಿವರು ಈಗಾಗಲೇ ಪ್ರಕರಣವನ್ನು ಸಿ.ಸಿ.ಬಿ ಗೆ ವರ್ಗಾಯಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮೈಸೂರಿಗೆ ಕಳುಹಿಸಿದ್ದು ಆರೋಪಿಗಳನ್ನು ಆದಷ್ಟು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದರು.