2 ತಿಂಗಳಲ್ಲಿ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಬಿಜೆಪಿ ಜಿಲ್ಲಾಧ್ಯಕ್ಷರು ತಲೆ ಬೊಳಿಸಿಕೊಳ್ಳಬೇಕು – ಅಮೃತ್ ಶೆಣೈ
ಉಡುಪಿ: ಎರಡು ತಿಂಗಳೊಳಗೆ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಬಿಜೆಪಿ ಜಿಲ್ಲಾಧ್ಯಕ್ಷರು ಇಂದ್ರಾಳಿಯ ರೈಲ್ವೆ ಸೇತುವೆಯ ಬಳಿ ಕುಳಿತು ತಲೆ ಬೊಳಿಸಿಕೊಳ್ಳಬೇಕು. ಈ ಸವಾಲನ್ನು ಸ್ವೀಕರಿಸಿ ಎರಡು ದಿನದೊಳಗೆ ಘೋಷಣೆ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ನಾವು ಎರಡು ಮೂರು ದಿನ ಕಾದು ನೋಡುತ್ತೇನೆ. ಇಲ್ಲದಿದ್ದರೆ ನೀವು ಕ್ಷಮೆ ಕೇಳಬೇಕು. ಸುಮ್ಮನೆ ಇದರಲ್ಲಿ ರಾಜಕೀಯ ಮಾಡಬಾರದು. ಮುಗಿಯುವ ಹಂತದಲ್ಲಿ ಪ್ರತಿಭಟನೆ ಮಾಡುವಂತಹ ಚಿಲ್ಲರೆ ರಾಜಕೀಯ ನಾವು ಯಾರು ಮಾಡಿಲ್ಲ. ಕಾಮಗಾರಿ ಮುಗಿಯುತ್ತಿಲ್ಲ ಎಂದು ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೇ ತಿಂಗಳ ಅಂತ್ಯದೊಳಗೆ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಮುಗಿಯದಿದ್ದರೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಈ ಸೇತುವೆ ನಿರ್ಮಿಸುವ ಮೂಲಕ ಜೂ.1ರಂದು ಸ್ಥಳೀಯ ಶಾಲಾ ಮಕ್ಕಳು ಯಾವುದೇ ಭಯ ಇಲ್ಲದೆ ಆರಾಮವಾಗಿ ಶಾಲೆಗೆ ಹೋಗುವ ವಾತಾವರಣ ಕಲ್ಪಿಸಬೇಕು. ಇಲ್ಲದಿದ್ದರೆ ನಾವು ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಮತ್ತು ಸಂಸದರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಳಿಕ ಸಂಸದರು ಅಲ್ಲಿಯೇ ಅಧಿಕಾರಿಗಳನ್ನು ಕರೆದು ಸಭೆ ಮಾಡಬೇಕು. ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಮುಗಿಯುವ ಹಂತದಲ್ಲಿ ಪ್ರತಿಭಟನೆ ಮಾಡುತ್ತಾರೆಂದು ನಮ್ಮನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ನಾವು ಈ ವಿಚಾರದಲ್ಲಿ ಮೂರು ಮೂರು ಬಾರಿ ಗಡುವು ನೀಡಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸಲು ಇವರಿಗೆ ಇನ್ನೆಷ್ಟು ದಿನ ಬೇಕು. ಇನ್ನು ಎರಡು ತಿಂಗಳೊಳಗೆ ಇವರು ಕಾಮಗಾರಿ ಮುಗಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ, ಮುಖಂಡರಾದ ರಮೇಶ್ ಕಾಂಚನ್, ಅನ್ಸಾರ್ ಅಹ್ಮದ್, ಚಾರ್ಲ್ಸ್ ಆ್ಯಂಬ್ಲರ್, ಇದ್ರೀಸ್ ಹೂಡೆ, ಬನ್ನಂಜೆ ಸುರೇಶ್ ಶೆಟ್ಟಿ, ಮಹಾಬಲ ಕುಂದರ್, ಅಬ್ದುಲ್ ಅಝೀಝ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.