20 ದಿನಗಳಲ್ಲಿಯೇ ಖತರ್ನಾಕ್ ವ್ಯಕ್ತಿಗಳ ಖೇಲ್ ಬಂದ್ ಮಾಡಿದ ಎಸ್ಪಿ ಅಣ್ಣಾಮಲೈ!

Spread the love

20 ದಿನಗಳಲ್ಲಿಯೇ ಖತರ್ನಾಕ್ ವ್ಯಕ್ತಿಗಳ ಖೇಲ್ ಬಂದ್ ಮಾಡಿದ ಎಸ್ಪಿ ಅಣ್ಣಾಮಲೈ!

(ಉಡುಪಿಯಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಕಾರ್ಯವೈಖರಿಯಿಂದ ಮನೆಮಾತಾದ ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ತನ್ನ ಕಾರ್ಯವೈಖರಿ ಮುಂದುವರೆಸಿದ್ದಾರೆ. ಅಣ್ಣಾಮಲೈ ನಡೆಸಿರುವ ನೇರ ಕಾರ್ಯಾಚರಣೆಯ ಕೆಲ ಪ್ರಸಂಗಗಳು ನಾಡಿನ ಹೆಸರಾಂತ ದಿನಪತ್ರಿಕೆ ಪ್ರಜಾವಾಣಿ ಪ್ರಕಟಿಸಿದೆ. ಪತ್ರಿಕೆಯ ಕ್ರಪೆಯೊಂದಿಗೆ ಪತ್ರಿಕೆಯ ವರದಿಗಾರ ಕೆ ಎಂ ಸಂತೋಷ್ ಕುಮಾರ್ ಅವರ ವರದಿಯನ್ನು ಯಥಾವತ್ತಾಗಿ ಓದುಗರಿಗೆ ನೀಡುತ್ತಿದ್ದೇವೆ.)

ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಪ್ರಕರಣದ ನಂತರ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಲಯ ತಪ್ಪಿದ ವಾತಾವರಣವಿತ್ತು. ಸಾರ್ವಜನಿಕ ವಿಶ್ವಾಸಕ್ಕೂ ಇಲಾಖೆ ದೂರವಾಗಿದೆ ಎನ್ನುವ ಅಪಸ್ವರ ಇತ್ತು. ‘ಜನರ ವಿಶ್ವಾಸ ಮರಳಿ ಗಳಿಸುವ ಜವಾಬ್ದಾರಿ ಇದೆ. ಇಲಾಖೆಗೂ ಪುನಶ್ಚೇತನ ನೀಡುವ ತುರ್ತು ಅಗತ್ಯವೂ ಇದೆ’ ಎನ್ನುವ ಮಾತನ್ನು ನೂತನ ಎಸ್‌ಪಿ ಕೆ.ಅಣ್ಣಾಮಲೈ ಕೂಡ ಬಹಿರಂಗವಾಗಿಯೇ ಹೇಳಿದ್ದರು.

sp-annamalai-udupi

ಹೌದು! ಹಿಂದಿನ ಎಸ್‌ಪಿ ಕೆ.ಸಂತೋಷ್‌ಬಾಬು ಅವರು ವರ್ಗಾವಣೆಯಾದ ಮೇಲೆ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದಿರುವ ಕೆ.ಅಣ್ಣಾ ಮಲೈ ಕೇವಲ 20 ದಿನಗಳು ಕಳೆಯುವುದರೊಳಗೆ ಜಿಲ್ಲೆಯ ಜನರಲ್ಲಿ ಅಕ್ಷರಶಃ ಸಂಚಲನ ಮೂಡಿಸಿದ್ದಾರೆ. ಕರ್ತವ್ಯ ಮರೆತು ಕೈಕಟ್ಟಿ ಕುಳಿತ್ತಿದ್ದ ಸಿಬ್ಬಂದಿಗೂ ಚುರುಕು ಮುಟ್ಟಿಸಿದ್ದಾರೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರಿಗೂ ಬಿಸಿ ಮುಟ್ಟಿಸುತ್ತಿದ್ದಾರೆ.

ಕೇವಲ 20 ದಿನಗಳಲ್ಲಿ ‘ಮಾಯಮಂತ್ರ’ ಮಾಡಿದರಾ? ಅವರ ಕೈಯಲ್ಲಿರುವ ‘ಪೊಲೀಸ್‌ ದಂಡ’ ಮಂತ್ರದಂಡವೇ? ಎನ್ನುವ ಪ್ರಶ್ನೆ ಯಾರಿಗಾದರೂ ಮೂಡಬಹುದು! ಅವರು ಮಾಡುತ್ತಿರುವುದು ಇಷ್ಟೇ; ಅಪರಾಧ ಚಟುವಟಿಕೆ ನಿಯಂತ್ರಿಸಲು ಆಯಾ ವೃತ್ತ, ಠಾಣೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಗಡುವು ನೀಡಿದರು.

‘ವಾರದ ನಂತರ ತಾನೇ ಮಾರುವೇಷದಲ್ಲಿ ಕಾರ್ಯಾಚರಣೆಗೆ ಇಳಿಯುತ್ತೇನೆ, ಅಪರಾಧ ಚಟುವಟಿಕೆಗಳು ಕಂಡುಬಂದರೆ ಆ ವ್ಯಾಪ್ತಿಯ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತಕ್ಕ ಬೆಲೆ ತೆರಬೇಕಾಗುತ್ತದೆ’ ಎನ್ನುವ ಪರೋಕ್ಷ ಎಚ್ಚರಿಕೆ ರವಾನಿಸಿದರು.

ಇಷ್ಟು ಮಾಡಿ ಅವರು ಕಚೇರಿಯಲ್ಲಿ ಸುಮ್ಮನೆ ಕುಳಿತುಕೊಂಡರಾ? ಇಲ್ಲ; ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸುಳಿವು ಕೊಡದೆ ನೇರ ಕಾರ್ಯಾಚರಣೆಗೆ ಇಳಿದಿದ್ದಾರೆ.

ಅಣ್ಣಾಮಲೈ ನಡೆಸಿರುವ ನೇರ ಕಾರ್ಯಾಚರಣೆಯ ಕೆಲ ಪ್ರಸಂಗಗಳು ಹೀಗಿವೆ.
ಹೆಲ್ಮೆಟ್‌ ಕಡ್ಡಾಯ: ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಾಗ ಸಮವಸ್ತ್ರ ಮತ್ತು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಲೇಬೇಕು. ಬೈಕ್‌ ಚಾಲನೆಗೂ ಪೊಲೀಸರಿಗೆ ಪ್ರತ್ಯೇಕ ಹೆಲ್ಮೆಟ್‌ ಕಡ್ಡಾಯ.

ನಿಯಮ ಉಲ್ಲಂಘಿಸಿದರೆ ಸ್ಥಳದಲ್ಲೇ ಅಮಾನತು ಎನ್ನುವ ಖಡಕ್‌ ಎಚ್ಚರಿಕೆಯನ್ನು ಮೊದಲ ಪತ್ರಿಕಾಗೋಷ್ಠಿಯಲ್ಲಿ ರವಾನಿಸಿದರು. ಆ ಮೂಲಕ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಂತೆ ಪರೋಕ್ಷವಾಗಿ ನಾಗರಿಕರಿಗೂ ಕಠಿಣ ಸಂದೇಶ ರವಾನಿಸಿದರು.

ಈಗ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ತಲೆ ಮೇಲೂ ಇಲಾಖೆ ಹೆಲ್ಮೆಟ್‌ ಕಾಣಿಸುತ್ತಿವೆ. ರಸ್ತೆಯಲ್ಲಿ ಬೈಕ್‌ ಓಡಿಸುವ ಶೇ 95ಕ್ಕೂ ಹೆಚ್ಚು ಜನರು ಹೆಲ್ಮೆಟ್‌ ಧರಿಸುವುದು ಕಾಣಿಸುತ್ತಿದೆ. ಬಾಕಿ ಶೇ 5 ಜನರು ದಂಡ ತೆತ್ತ ಮೇಲೆಯೇ ಪಾಠ ಕಲಿಯಬಹುದು!

ಮಟ್ಕಾ ಅಡ್ಡೆ ಮೇಲೆ ದಾಳಿ: ಒಂದು ದಿನ ಸಂಜೆ ಅಣ್ಣಾ ಮಲೈ ಹರಿದ ಬಟ್ಟೆ ಧರಿಸಿ, ಸೈಕಲ್ಲೇರಿ ಕಾರ್ಮಿಕನ ಸೋಗಿನಲ್ಲಿ ಕೈಮರದ ಕಡೆಗೆ ಹೋದರು. ಅಲ್ಲಿ ಮಟ್ಕಾ ಆಡಿಸುವ ವ್ಯಕ್ತಿ ಪತ್ತೆ ಹಚ್ಚಿ ‘ನನಗೆ ರೂ20ಕ್ಕೆ ಮಟ್ಕಾ ಬರಿಯಪ್ಪ’ ಅಂದ್ರು.

ಮಟ್ಕಾ ಆಡಿಸುವಾತ ನಮ್ಮತ್ರ ರೂ 20 ಆಟವಿಲ್ಲ, ಏನಿದ್ದರೂ ರೂ 50, ರೂ 100ರ ಮೇಲೆ ಎಂದ. ಆತನ ಕೊರಳಪಟ್ಟಿ ಹಿಡಿದು ಠಾಣೆಗೆ ಎಳೆತಂದು ಕೇಸು ಜಡಿದರು. ಈಗ ಏನಿಲ್ಲವೆಂದರೂ ದಿನಕ್ಕೆ ಸರಾಸರಿ 2 ಮಟ್ಕಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಬೀಡಿ, ಸಿಗರೇಟ್‌, ಗುಟ್ಕಾ ಮಾರಾಟಕ್ಕೆ ದಂಡ : ಒಂದು ದಿನ ಬೆಳ್ಳಂಬೆಳಿಗ್ಗೆ ಎದ್ದು ಸರಿಯಾಗಿ ಮುಖವನ್ನು ತೊಳೆಯದೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ‘ಸಿವಿಲ್‌ ಡ್ರೆಸ್‌’ನಲ್ಲಿ ಗವನಹಳ್ಳಿ ಕಡೆಗೆ ಹೊರಟರು. ಗವನಹಳ್ಳಿಯ ಒಂದು ಪ್ರಾವಿಜನ್‌ ಅಂಗಡಿ ಮುಂದೆ ನಿಂತು ಒಂದು ಪ್ಯಾಕು ಸಿಗರೇಟು, ಒಂದು ಕಟ್ಟು ಬೀಡಿ, ಒಂದು ಪ್ಯಾಕ್‌ ಗುಟ್ಕಾ ಖರೀದಿಸಿದರು. ಅಂಗಡಿ ಮಾಲೀಕನಿಗೆ ರೂ 30 ಸಾವಿರ ದಂಡವಿಧಿಸಿ, ರಸೀದಿ ಕೈಗೆ ಇಟ್ಟಾಗಲೇ ಆತನಿಗೆ ಇವರು ಎಸ್‌ಪಿ ಅಣ್ಣಾ ಮಲೈ ಅಂತಹ ಗೊತ್ತಾಗಿದ್ದು.

‘ಸರ್‌ ದಂಡದ ಮೊತ್ತ ಕಡಿಮೆ ಮಾಡಿ’ ಎಂದು ಅಂಗಡಿಯಾತ ಗೋಗರೆದ. ‘ಇಂದೇ ಕಟ್ಟುವುದಾದರೆ ಬರಿ ರೂ 30 ಸಾವಿರ. ನಾಳೆ, ನಾಡಿದ್ದು ಎನ್ನುವುದಾರೆ ರೂ 1 ಲಕ್ಷ’ ಎನ್ನುವ ಎಚ್ಚರಿಕೆ ನೀಡಿದರು. ಅಂಗಡಿಯಾತ ಮರು ಮಾತನಾಡದೆ ದಂಡ ಕಟ್ಟಿದ. ಆತನಷ್ಟೆ ಅಲ್ಲ, ದಿನಸಿ ಅಂಗಡಿಗಳ ವರ್ತಕರು ಬೆಚ್ಚಿಬಿದ್ದಿದ್ದಾರೆ. ಇವರು ಸದ್ಯಕ್ಕೆ ಸಿಗರೇಟು ಮತ್ತು ತಂಬಾಕು ಮಾರುವ ದುಸ್ಸಾಹಸಕ್ಕೆ ಇಳಿಯಲಾರರು ಎನಿಸುತ್ತದೆ.

ಇಸ್ಪೀಟ್‌ ಕ್ಲಬ್‌ ಮೇಲೆ ದಾಳಿ–ಕಪಾಳ ಮೋಕ್ಷ : ನಗರ ಸಮೀಪದ ಕ್ಲಬ್‌ ಮೇಲೆ ಒಂದು ದಿನ ಸಂಜೆ ಮಫ್ತಿಯಲ್ಲಿ ಭೇಟಿ ಕೊಟ್ಟ ಅವರು ಮೊದಲು ‘ಇಲ್ಲಿ ನಮ್ಮ ಇಲಾಖೆಯವರು ಯಾರಾದರೂ ಇದ್ದರೆ ತೋರಿಸಿ’ ಎಂದು ಕ್ಲಬ್‌ ಪರಿಚಾರಕರ ಕಿವಿಯಲ್ಲಿ ಪಿಸುಮಾತಿನಲ್ಲಿ ಕೇಳಿದರು.

ಅಲ್ಲಿದ್ದ ಕೆಲವರು ಪೊಲೀಸ್‌ ಪೊಲೀಸ್‌… ಎಂದು ಕೂಗಿದರು, ಯಾರೂ ಕೂಡ ಎದ್ದು ಓಡಲಿಲ್ಲ. ಆಡುತ್ತಿದ್ದವರಲ್ಲಿ ಒಬ್ಬ ‘ಪೊಲೀಸರು ಬಂದ್ರೆ ಏನ್‌ ಮಾಡ್ತಾರೆ, ಬರಲಿ ಬಿಡು ಗುರು ಏನ್‌ ಒಂದು ಪೆಟ್ಟಿ ಕೇಸು ತಾನೆ, ಹೋಗ್ತಾರೆ ಬಿಡು’ ಅಂದ.

ಆತನನ್ನು ಗುರುತಿಸಿ ಅಣ್ಣಾ ಮಲೈ ತಮ್ಮ ಬಳಿಗೆ ಕರೆದರು. ಆ ವ್ಯಕ್ತಿ ಸಾರ್‌ ನಾನು ‘….. ಪಕ್ಷದ ಲೀಡರ್‌, …….. ಅವರ ಕಡೆಯವನು’ ಎಂದು ಮಾಜಿ ಜನಪ್ರತಿನಿಧಿಯೊಬ್ಬರ ಹೆಸರು ಹೇಳಿ ಪರಿಚಯಿಸಿಕೊಳ್ಳಲು ಮುಂದಾದ.

ಆತನ ಕೆನ್ನೆಗೆ ಪಟೀರ್‌ ಎಂದು ಏಟು ಕೊಟ್ಟರು. ಜೂಜಿನಲ್ಲಿ ಸೆರೆ ಸಿಕ್ಕಿದ 32 ಮಂದಿ ಜತೆಗೆ ಕಪಾಳ ಮೋಕ್ಷ ಮಾಡಿಸಿಕೊಂಡಾತನನ್ನು ಪೊಲೀಸ್‌ ವಾಹನಕ್ಕೆ ಹತ್ತಿಸಿದರು. ಇಸ್ಪೀಟ್‌ ಆಡುವಾಗ ‘ರೆಡ್‌ ಹ್ಯಾಂಡ್‌’ ಆಗಿ ಸಿಕ್ಕಿಬಿದ್ದು ತಮ್ಮ ಕೈಯಿಂದಲೇ ನುಣಿಚಿಕೊಂಡು ಪರಾರಿಯಾದ ಮೂವರು ಕಾನ್‌ಸ್ಟೆಬಲ್‌ಗಳನ್ನು ಸ್ಥಳದಲ್ಲೇ ಅಮಾನತುಗೊಳಿಸಿದರು.

ಸಿಬ್ಬಂದಿ ಸೇವಾನಿಷ್ಠೆ ಪರೀಕ್ಷೆ : ಅಣ್ಣಾ ಮಲೈ ಅವರಿಗೆ ತಮ್ಮ ಇಲಾಖೆ ಸಿಬ್ಬಂದಿಯ ಸೇವಾನಿಷ್ಠೆ ಪರಿಶೀಲಿಸುವ ಮನಸ್ಸಾಗಿ, ಒಂದು ದಿನ ರಾತ್ರಿ 2.30ರಿಂದ 3 ಗಂಟೆ ಸುಮಾರಿಗೆ ‘ನೈಟ್‌ ಡ್ರೆಸ್‌’ನಲ್ಲಿ ಸೈಕಲ್ಲೇರಿ ರಾಸ್ತಿ ಗಸ್ತಿನಲ್ಲಿದ್ದ ಬೀಟ್‌ ಪೊಲೀಸರನ್ನು ಹುಡುಕುತ್ತಾ ಹೊರಟರು.

ಎಂ.ಜಿ.ರಸ್ತೆಯ ಅಂಗಡಿಯೊಂದರ ಬಳಿ ಇಬ್ಬರು ಕಾನ್‌ಸ್ಟೆಬಲ್‌ಗಳು ಟೋಪಿ, ಲಾಠಿಗಳನ್ನು ದಿಂಬಿನ ಬಳಿ ಇಟ್ಟುಕೊಂಡು ಅಂಗಡಿ ಸೂರಿನಡಿಯೇ ಗಾಢ ನಿದ್ದೆಗೆ ಜಾರಿದ್ದರು. ಅಣ್ಣಾ ಮಲೈ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿದ್ರೆಯಿಂದ ಎಚ್ಚರಗೊಳಿಸಲಿಲ್ಲ.

ಟೋಪಿ ಮತ್ತು ಲಾಠಿ ಎತ್ತಿಕೊಂಡು ಬಂದರು. ಬೆಳಿಗ್ಗೆ ಇಬ್ಬರನ್ನು ಕಚೇರಿಗೆ ಕರೆಸಿ ‘ಎಲ್ರಪ್ಪಾ ನಿಮ್ಮ ಟೋಪಿ ಮತ್ತು ಲಾಠಿ’ ಎಂದು ಕೇಳಿದರು. ಪೆಚ್ಚುಮೋರೆಯಲ್ಲಿ ನಿಂತಿದ್ದ ಸಿಬ್ಬಂದಿಗೆ ರಾತ್ರಿ ತಪ್ಪಿನ ಅರಿವಾಗಿತ್ತು.

ಮಾನವೀಯ ಮುಖ : ಒಂದು ದಿನ ಮಧ್ಯಾಹ್ನ ಅವರ ಕಚೇರಿಗೆ ಏಳೆಂಟು ತಿಂಗಳ ತುಂಬು ಗರ್ಭಿಣಿ ತಮ್ಮ ಪೋಷಕರೊಂದಿಗೆ ಸಮಸ್ಯೆ ಹೊತ್ತು ಬಂದರು. ‘ಸರ್‌ ನನ್ನ ಅತ್ತೆ, ಮಾವ, ನಾದಿನಿ ಕಿರುಕುಳ ಕೊಡುತ್ತಿದ್ದಾರೆ. ಹಲ್ಲೆ ಮಾಡಿ, ಗಂಡನ ಮನೆಯಿಂದ ಹೊರ ಹಾಕಿದ್ದಾರೆ.

ನನ್ನ ಗಂಡನ ಮೇಲೂ ಪೊಲೀಸ್‌ ದೂರು ಕೊಟ್ಟಿದ್ದಾರೆ. ನನಗೆ ರಕ್ಷಣೆ ಬೇಕು. ನಾನು ಎಷ್ಟು ದಿನ ತವರು ಮನೆಯಲ್ಲಿರಲಿ, ಗಂಡನ ಮನೆ ಸೇರಬೇಕು…..’ ಎಂದು ಗೋಳು ತೋಡಿಕೊಂಡರು.

ಆ ತುಂಬು ಗರ್ಭಿಣಿಯ ಸಮಸ್ಯೆ ಆಲಿಸಿದ ಅಣ್ಣಾ ಮಲೈ ‘ನೋಡಿ ಅಮ್ಮಾ ನಿಮಗೆ ಒಬ್ಬ ಅಣ್ಣನಾಗಿ ಹೇಳ್ತೇನೆ, ನೀವು ಈಗ ಆ ಮನೆಗೆ ಹೋಗುವುದು ಬೇಡ. ಅಲ್ಲಿಗೆ ಹೋದರೆ ಕುಡಿಯುವ ನೀರು, ತಿನ್ನುವ ಆಹಾರ ಹೀಗೆ ಪ್ರತಿಯೊಂದನ್ನು ಹೋರಾಟ ಮಾಡಿ ಪಡೆಯಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಯಾಕೆ ಇಲ್ಲದ ಒತ್ತಡ ತಂದುಕೊಳ್ತೀರಿ, ಎರಡು ಜೀವದ ಪ್ರಶ್ನೆ ಅಮ್ಮಾ ಯೋಚನೆ ಮಾಡಿ. ಸುಸೂತ್ರ ಹೆರಿಗೆ ಆಗುವವರೆಗೆ ತಾಯಿ ಮನೆಯಲ್ಲಿರಿ. ಇನ್ನು 3 ತಿಂಗಳು ಬಿಟ್ಟು ಬನ್ನಿ, ನಾನು ನಿಮಗೆ ನ್ಯಾಯ ಕೊಡಿಸುತ್ತೇನೆ’ ಎನ್ನುವ ಸಾಂತ್ವನ ಹೇಳಿದರು. ಆ ಗರ್ಭಿಣಿಯ ಮುಖದಲ್ಲಿ ಮಂದಹಾಸ ಮತ್ತು ಕಣ್ಣುಗಳಲ್ಲಿ ಆನಂದಭಾಷ್ಪ ಒಟ್ಟೊಟ್ಟಿಗೆ ಕಾಣಿಸಿದವು.


Spread the love
3 Comments
Inline Feedbacks
View all comments
Original R.Pai
8 years ago

Glad to hear how there are still honest and motivated people in Police dept. It’s not easy for them to do their job in the face of all the hurdles created by local politicians, their cronies and corrupt businessmen.

HS Dsouza, Udupi
8 years ago

Where there is a will there is way. I salute S.P Annamalai. Keep up the good work Sir. We Udupi people are fortunate to have your service. We need more and more honest officers like you. Wish you all the best and good health

8 years ago

We need more and more good officers like SP Annamalai in Karnataka. People afraid to interact with police since they are either corrupt or support the people with money power. The officers like Annamalai can change such feeling. All the best sir