ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ವಿಶ್ವ ಪ್ರಸಿದ್ದ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಳ ಚಿನ್ನಾಭರಣ ದುರುಪಯೋಗದ ಹಗರಣದ ಕುರಿತು ಸಿಐಡಿ ತನಿಖೆಗೆ ಸರಕಾರವನ್ನು ಒತ್ತಾಯಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಶುಕ್ರವಾರ ಬೆಳಪುವಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕೊಲ್ಲೂರು ದೇವಳದಲ್ಲಿ ಈ ಹಿಂದಿನ ಆಡಳಿತಾವಧಿಯಲ್ಲಿ ಭಕ್ತರು ನೀಡಿದ ಆಭರಣ ದುರುಪಯೋಗ ಆಗಿರುವ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಯೊಂದಿಗೆ ಒತ್ತಾಯಿಸಿದ್ದೇನೆ. ಇದೀಗ ಕೊಲ್ಲೂರು ದೇವಳದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಭಕ್ತರು ದೇವಳಕ್ಕೆ ಹರಕೆಯ ರೂಪದಲ್ಲಿ ನೀಡುವ ಚಿನ್ನ ದುರುಪಯೋಗವಾಗಿದೆ. ಅಲ್ಲದೆ ನಕಲಿ ರಶೀದಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಯಲ್ಲಿ ಸಿಐಡಿ ತನಿಖೆ ಒತ್ತಾಯಿಸಿರುವುದಾಗಿ ಅವರು ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ವಿವಿಧ ದೇವಳಗಳ ಸುಮಾರು 500 ಕೋಟಿ ರೂ.ಗಳನ್ನು ಆಡಳಿತಾಧಿಕಾರಿಗಳು ತಮಗೆ ಬೇಕಾದ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಇಡುತ್ತಿದ್ದಾರೆ ಎಂದು ಈ ಹಿಂದಿನ ಮುಜರಾಯಿ ಇಲಾಖೆಯ ಸಚಿವರು ಹೇಳಿದ್ದರು. ದೇವಸ್ಥಾನಗಳ ಆಡಳಿತಾಧಿಕಾರಿಗಳ ತೆರವಾದ ಸ್ಥಾನಕ್ಕೆ ಧಾರ್ಮಿಕ ಪರಿಷತ್ ನೇಮಕಾತಿ ಮಾಡಬೇಕಿತ್ತು. ಆದರೆ ಇದೀಗ ನ್ಯಾಯಾಲ ಯದಲ್ಲಿ ತಡೆಯಾಜ್ಞೆಯಿದ್ದು, ಆದಷ್ಟು ಬೇಗ ಈ ಪ್ರಕರಣ ತೆರವಾಗಲಿದೆ. ಸುಪ್ರೀಂಕೋರ್ಟಿಗೆ ಅಫಿದಾವಿತ್ ಸಲ್ಲಿಸ ಲಾಗುವುದು. ಈಗಿನ ಸಂಧಿಘ್ದ ಪರಿಸ್ಥಿತಿಯಲ್ಲಿ ನೇಮಕಾತಿ ಮಾಡಲು ಮುಜರಾಯಿ ಇಲಾಖೆಯ ಸಚಿವರ ಜೊತೆಯಲ್ಲಿ ಸಂಪುಟ ಉಪಸಮಿತಿ ರಚಿಸಿ ಅದರ ಮೂಲಕ ತೀರ್ಮಾನ ಮಾಡಿಕೊಳ್ಳಲಿದ್ದಾರೆ ಎಂದು ಸೊರಕೆ ಹೇಳಿದರು. ಪಾದೂರಿನ ಕಚ್ಚಾತೈಲ ಘಟಕಕ್ಕೆ ನಂದಿಕೂರಿನಿಂದ ಹೈಟೆನ್ಶನ್ ವಿದ್ಯುತ್ ಲೈನ್ ಅಳವಡಿಸುವ ವೇಳೆ ಕೆಲವೊಂದು ಕೃಷಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ತಕ್ಷಣದಿಂದ ಕೆಲಸ ನಿಲ್ಲಿಸಲು ಸೂಚನೆ ನೀಡಲಾಗಿದೆ. ಕೃಷಿಕರಿಗೆ ತಕ್ಷಣ ಸೂಕ್ತ ಪರಿಹಾರ ದೊರಕಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೋಟಿಸ್ ನೀಡಿ ಕಾನೂನುಬದ್ಧವಾಗಿ ಕೆಲಸ ನಡೆಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಕೃಷಿಕರಿಗೆ ತೊಂದರೆ ಉಂಟು ಮಾಡಲು ಬಿಡುವುದಿಲ್ಲ ಎಂದು ವಿನಯಕುಮಾರ್ ಸೊರಕೆ ಹೇಳಿದರು.