2018ರ ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಘರ್ ವಾಪಸಿ ಖಚಿತವಂತೆ
ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ. ಈ ಮೂಲಕ 2018 ವಿಧಾನಸಭಾ ಚುನಾವಣೆಯಲ್ಲಿ ಘರ್ ವಾಪಾಸಿಯಾಗಲಿದ್ದೇನೆ ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ. ಬಿಜೆಪಿಯಿಂದ ನನಗೆ ಆಹ್ವಾನ ಬಂದಿದೆ ಪಕ್ಷೇತರ ಶಾಸಕತ್ವದ ತಾಂತ್ರಿಕ ಸಮಸ್ಯೆ ಕಳೆದ ಕೂಡಲೇ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಖಚಿತ ಪಡಿಸಿದ್ದಾರೆ.
ಈ ಕುರಿತು ಕುಂದಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹಾಲಾಡಿ, ಬಿಜೆಪಿ ಸೇರಿಸಿಕೊಳ್ಳುವಂತೆ ನಾನು ಯಾರ ಮನೆ ಬಾಗಿಲು ತಟ್ಟಲು ಹೋಗಿಲ್ಲ ಅವಕಾಶ ಬಂದಿದೆ ಅದ್ದರಿಂದ ಸೇರುತ್ತಿದ್ದೇನೆ. ಸದ್ಯ ನಾನು ಪಕ್ಷೇತರ ಶಾಸಕನಾಗಿದ್ದು, ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಿ ಪಕ್ಷ ಸೇರ್ಪಡೆಯಾದರೆ ಅನರ್ಹ ಆಗಬಹುದು. ಆದರೆ ನಾನು ಯಾವುದೇ ಬೇಡಿಕೆ ಇಟ್ಟು ಬಿಜೆಪಿ ಪಕ್ಷಕ್ಕೆ ಬರುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಘೋಷಣೆ ಮಾಡಿದ ಕೂಡಲೇ ನಾನು ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಘೋಷಣೆ ಮಾಡಿದ್ದಾರೆ.
ಜನರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇನೆ. ಅಗತ್ಯವಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ವಾಟ್ಸಪ್ ನಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಬಣ ರಾಜಕೀಯ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರದಲ್ಲಿ ನನ್ನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕೆಲವು ತುಂಟ ಹುಡುಗರು ಇದ್ದಾರೆ ಗೊಂದಲ ಬಗ್ಗೆ ಅವರನ್ನೇ ಕೇಳಬೇಕು. ಬಣ ರಾಜಕೀಯ ಬಗ್ಗೆ ಅವರೇ ಉತ್ತರ ಕೊಡಲಿ. ಎಲ್ಲಾ ಪಕ್ಷದಲ್ಲೂ ಸಣ್ಣ ಪುಟ್ಟ ಗುಂಪುಗಾರಿಕೆ ಇದ್ದೇ ಇರುತ್ತದೆ ಎಂದು ಒಪ್ಪಿಕೊಂಡರು.
ವಿಧಾನಸಭೆ ಯಲ್ಲಿ ಹಲವು ಬಾರಿ ವಾರಾಹಿ ಯೋಜನೆ, ಸಕ್ಕರೆ ಕಾರ್ಖಾನೆ, ಬಸವ ಯೋಜನೆ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ಕುರಿತು ದಾಖಲೆಗಳನ್ನು ನೀಡಲು ಸಿದ್ಧ. ಕ್ಷೇತ್ರದಲ್ಲಿ ನನ್ನ ಮೇಲೆ ಕಣ್ಣಿಗೆ ಕಾಣುವ ಕೆಲಸವಾಗಿಲ್ಲ ಅನ್ನುವ ಆರೋಪವಿದೆ. ಈ ಆರೋಪದ ಬಗ್ಗೆ ಜನರೇ ಉತ್ತರ ನೀಡಬೇಕು. ಕ್ಷೇತ್ರದಲ್ಲಿ ಒಳ್ಳೆಯ ಅಧಿಕಾರಿಗಳು ಇದ್ದಾಗ ಉತ್ತಮ ಕೆಲಸವಾಗುತ್ತದೆ. ಇದನ್ನು ಪಂಚಾಯತ್ ನವರು ಹೇಳಬೇಕು ಎಂದರು.
ಕೇಂದ್ರದ ನೋಟ್ ಬ್ಯಾನ್ ಒಳ್ಳೆಯ ನಿರ್ಧಾರ. ಜಿಎಸ್ ಟಿ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಶುಕ್ರವಾರವಷ್ಟೇ 172 ವಸ್ತುಗಳಿಗೆ ಜಿಎಸ್‍ಟಿ ಇಳಿಸಲಾಗಿದೆ. ಈ ನಿರ್ಧಾರಗಳಿಂದ ದೇಶಕ್ಕೆ ಮುಂದೆ ಒಳ್ಳೆಯದಾಗುತ್ತದೆ ಎಂದರು.