2024-25ನೇ ಸಾಲಿನ ಪಂಪ ಪ್ರಶಸ್ತಿಗೆ ಡಾ.ಬಿ.ಎ.ವಿವೇಕ ರೈ ಆಯ್ಕೆ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2024-25ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ, ಚಿಂತಕ ಡಾ. ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ಕುಂ. ವೀರಭದ್ರಪ್ಪ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಡಾ. ಬಿ.ಎ. ವಿವೇಕ ರೈಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐದು ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕನ್ನಡದ ಖ್ಯಾತ ಸಂಶೋಧಕರಾಗಿರುವ ಡಾ. ಬಿ.ಎ. ವಿವೇಕ ರೈ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಅಗ್ರಾಳದವರು. ಸಂಸ್ಕೃತಿ ಚಿಂತಕರು, ವಿಮರ್ಶಕರು, ಅನುವಾದಕರು ಹಾಗೂ ಜಾನಪದ ವಿದ್ವಾಂಸರಾಗಿದ್ದಾರೆ. ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ-ತುಳು ಭಾಷೆಯ ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸುವ ಮೂಲಕ ಆ ಭಾಷೆಗಳ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು.
12ಕ್ಕೂ ಹೆಚ್ಚು ಮಹತ್ವದ ಕೃತಿಗಳು, ಕಾದಂಬರಿಗಳು, ಹಲವಾರು ಕೃತಿಗಳ ಸಂಪಾದನೆ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ರಚನೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ಹೀಗೆ ವಿಪುಲವಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಜರ್ಮನಿಯ ವ್ಯೂತ್ ಬರ್ಗ್ ವಿಶ್ವವಿದ್ಯಾನಿಲಯದ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ, ಸಮ್ಮಾನಗಳು ಲಭಿಸಿವೆ.