ಕಲಬುರಗಿ : ನಗರಾಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ 1037 ಎ, ಬಿ ಮತ್ತು ಸಿ ಗ್ರುಪ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಅವರು ಶನಿವಾರ ಕಲಬುರಗಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, 371(ಜೆ) ಮೀಸಲಾತಿಯನ್ವಯ ಈ ಭಾಗದಲ್ಲಿ ಖಾಲಿಯಿರುವ ಹುದ್ದೆಗಳು ಸಹ ಭರ್ತಿಯಾಗಲಿವೆ ಎಂದರು.
ರಾಜ್ಯದ ವಿವಿಧ ಮಹಾನಗರ ಪಾಲಿಕೆ ಮತ್ತು ಪೌರ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ನೇಮಕಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹರಿಯಾಣಾ ರಾಜ್ಯದ ಮಾದರಿಯಲ್ಲಿ ರಾಜ್ಯದಲ್ಲಿಯೂ ಖಾಯಂ ಪೌರ ಕಾರ್ಮಿಕರ ನೇಮಕ ಮಾಡುವ ಮೂಲಕ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರ ಸೇವೆಯನ್ನು ಹಂತ ಹಂತವಾಗಿ ಕಡಿತಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ ಅಡ್ವೋಕೆಟ್ ಜನರಲ್ ಅವರಿಂದ ಅಭಿಪ್ರಾಯ ಪಡೆಯಲಾಗುವುದು. ಇದರಿಂದ ಪೌರ ಕಾರ್ಮಿಕರ ಶೋಷಣೆ ತಪ್ಪುತ್ತದೆ ಎಂದು ನುಡಿದರು.
ಕಂದಾಯ ಇಲಾಖೆಯ 94 ಬಿಸಿ ನಿವೇಶನ ಮತ್ತು ಮಹಾನಗರ ಪಾಲಿಕೆ ಹಾಗೂ ಇತರ ಪೌರ ಸಂಸ್ಥೆಗಳ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಹಾಗೂ ರಸ್ತೆ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ, ಸೂಕ್ತ ತರಬೇತಿ ಹಾಗೂ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಮತ್ತು ದಾವಣಗೆರೆಗಳ ಮಾದರಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಆಸ್ತಿಗಳನ್ನು ಗುರುತಿಸಲು ಖಾಸಗಿಯವರ ನೆರವು ಪಡೆಯಬೇಕು ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು. ದಾವಣಗೆರೆ ಮತ್ತು ಬಳ್ಳಾರಿ ನಗರಗಳಲ್ಲಿಯಂತೆ ಕಲಬುರಗಿ ನಗರದಲ್ಲಿನ ಹಂದಿ ಹಾವಳಿ ತಪ್ಪಿಸಲು ಹಂದಿ ಸಾಕಣೆದಾರರ ಮನವೊಲಿಸಿ ನಿಗದಿತ ಸ್ಥಳಗಳಲ್ಲಿ ಅವುಗಳನ್ನು ಸಾಕುವ ವ್ಯವಸ್ಥೆ ಮಾಡಬೇಕು. ತೆರಿಗೆ ಸಂಗ್ರಹಣಾ ಕಾರ್ಯ ಹೆಚ್ಚು ಚುರುಕುಗೊಳಿಸಿ ಅಧಿಕ ತೆರಿಗೆ ಸಂಗ್ರಹಿಸುವ ಮೂಲಕ ಅರ್ಥಿಕ ಸ್ವಾವಲಂಬನೆ ಪಡೆಯಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಎಲ್ಲ ಮಹಾನಗರ ಪಾಲಿಕೆ ಮತ್ತು ಪೌರ ಸಂಸ್ಥೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸರ್ಕಾರದಿಂದ ಈಗಾಗಲೇ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಇನ್ನೂ ಹಣದ ಅವಶ್ಯಕತೆಯಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಗಳನ್ನು ಕೂಡಲೇ ಸಲ್ಲಿಸಿದರೆ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಪೌರ ಕಾರ್ಮಿಕರಿಗಾಗಿ ಗೃಹಭಾಗ್ಯ ಯೋಜನೆಯಿದ್ದು, ಪ್ರಸ್ತಾವನೆಯನ್ನು ಸಲ್ಲಿಸಿದಲ್ಲಿ ಆದಷ್ಟು ಬೇಗ ಮಂಜೂರಾತಿ ನೀಡಲಾಗುವುದು. ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಡಿಯುಡಿಸಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಪೌರ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಮಕ್ಬೂಲ್ ಅಹ್ಮದ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ವಿಧಾನಸಭಾ ಶಾಸಕ ಬಿ.ಆರ್. ಪಾಟೀಲ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪಾಲಿಕೆ, ನಗರಸಭೆ ಮತ್ತು ಪುರಸಭೆಗಳ ಹಾಗೂ ನಗರ ನೀರು ಸರಬರಾಜು ಮಂಡಳಿಯ ಇತರೆ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕುಡಿಯುವ ನೀರಿನ ಪರಿಸ್ಥಿತಿ ನಿಭಾಯಿಸಲು ಶೀಘ್ರದಲ್ಲಿ ರಾಜ್ಯಮಟ್ಟದ ಸಭೆ
ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸದ್ಯದ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಚರ್ಚಿಸಲು ಕಂದಾಯ, ನೀರಾವರಿ, ಗ್ರಾಮೀಣ ಅಭಿವೃದ್ಧಿ ಮತ್ತಿತರ ಸಚಿವರನ್ನೊಳಗೊಂಡ ರಾಜ್ಯಮಟ್ಟದ ಸಭೆ ಇಷ್ಟರಲ್ಲೇ ನಡೆಸಲಾಗುವುದೆಂದು ನಗರಾಭಿವೃದ್ದಿ ಸಚಿವ ವಿನಯಕುಮಾರ ಸೊರಕೆ ಶನಿವಾರ ಕಲಬುರಗಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿನ್ನೆಲೆಯಲ್ಲಿ ತಾವು ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆಗಳಿಗೆ ಈಗಾಗಲೇ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದು, ಈಗ ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಇದರೊಂದಿಗೆ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಶಾಶ್ವತ ಪರಿಹಾರದ ಬಗ್ಗೆಯೂ ಈ ಸಭೆಯಲ್ಲಿ ಪರಾಮರ್ಶೆ ಮಾಡಲಾಗುವುದೆಂದರು.
ಯಾವುದೇ ಒಂದು ಹೊಸ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಬರುವ 25 ವರ್ಷಗಳಲ್ಲಿ ಜನಸಾಂದ್ರತೆಯ ಹೆಚ್ಚಳ ಮತ್ತು ಲಭ್ಯವಿರುವ ನೀರಿನ ಸಂಪನ್ಮೂಲದ ಬಗ್ಗೆ ಗಮನಿಸಿ ವಿಮರ್ಶೆ ಮಾಡಬೇಕಾಗುತ್ತದೆ. ಈ ಕುರಿತು ಸೂಕ್ತ ಮಾಹಿತಿಯನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.